Advertisement

ಕಂಬಳಕ್ಕಾಗಿ ಹೋರಾಟ ತೀವ್ರ; ಹೈಕೋರ್ಟ್ ತೀರ್ಪಿನತ್ತ ಎಲ್ಲರ ಚಿತ್ತ

02:31 PM Jan 23, 2017 | Sharanya Alva |

ಬೆಂಗಳೂರು/ಮಂಗಳೂರು:ಕೃಷಿಯೊಂದಿಗೆ ನಂಟು ಹೊಂದಿರುವ ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳದ ಉಳಿವಿಗಾಗಿ ರಾಜ್ಯಾದ್ಯಂತ ಹೋರಾಟ ತೀವ್ರಗೊಳ್ಳತೊಡಗಿದೆ.  ತಮಿಳುನಾಡಿನ ಜನತೆ ಜಲ್ಲಿಕಟ್ಟು ನಿಷೇಧದ ವಿರುದ್ಧ ಹೋರಾಡಿ ಜಯ ಸಾಧಿಸಿರುವ ಹಿನ್ನೆಲೆಯಲ್ಲಿ ಕರಾವಳಿ ಸೇರಿದಂತೆ ರಾಜ್ಯದ ವಿವಿಧೆಡೆ ಹೋರಾಟದ ಕಿಚ್ಚು ಹೆಚ್ಚತೊಡಗಿದೆ.

Advertisement

ಕರಾವಳಿ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳಕ್ಕೆ ಅವಕಾಶ ಕೊಡಬೇಕು, ನಿಷೇಧವನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ವಾಟಾಳ್ ನಾಗರಾಜ್, ಸಾರಾ ಗೋವಿಂದು ನೇತೃತ್ವದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದವು.

29ಕ್ಕೆ ಕಾದು ನೋಡುವ:
ಮಂಗಳೂರು ಜಿಲ್ಲಾ ಕಂಬಳ ಸಮಿತಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ್ದು, ಕಂಬಳದ ಮೇಲಿನ ನಿಷೇಧ ತೆರವುಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕಿದೆ.  ಕಂಬಳಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಜ.29ರಂದು ತೀರ್ಪು ಪ್ರಕಟಿಸಲಿದೆ. ಒಂದು ವೇಳೆ ತೀರ್ಪು ಕಂಬಳದ ಪರವಾಗಿ ಬಂದರೆ ವಿಜಯೋತ್ಸವ, ಇಲ್ಲದಿದ್ದರೆ ಕಂಬಳದ ಗದ್ದೆಯಲ್ಲೇ ಹಕ್ಕೊತ್ತಾಯ ಎಂದು ತಿಳಿಸಿದೆ.

ಕಂಬಳದ ಮೇಲೆ ಹೇರಿರುವ ನಿಷೇಧದ ತೆರವಿಗೆ ಒತ್ತಾಯಿಸಿ ಇಂದೇ ಪ್ರತಿಭಟನೆ ನಡೆಸಲು ಆಗ್ರಹಿಸಿದ್ದರು. ಆದರೆ ಗಣರಾಜ್ಯೋತ್ಸವದವರೆಗೆ ಪ್ರತಿಭಟನೆ, ಧರಣಿ ನಡೆಸದಿರಲು ತೀರ್ಮಾನಿಸಲಾಗಿದೆ ಎಂದು ಶಾಸಕ, ಮೂಡಬಿದಿರೆ ಕಂಬಳ ಸಮಿತಿ ಅಧ್ಯಕ್ಷ ಕೆ.ಅಭಯಚಂದ್ರ ಜೈನ್ ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಕಂಬಳದ ಪರ:ಸಿಎಂ
ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳದ ಪರ ರಾಜ್ಯ ಸರ್ಕಾರವಿದೆ. ಸರ್ಕಾರ ಎಲ್ಲಾ ರೀತಿಯ ಕಾನೂನು ನೆರವು ನೀಡಲು ಸಿದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಜಲ್ಲಿಕಟ್ಟು ರೀತಿ ಕಂಬಳಕ್ಕೂ ಅವಕಾಶ ಕೊಡಿ: ಶಿವರಾಜ್ ಕುಮಾರ್
ತಮಿಳುನಾಡಿನಲ್ಲಿ ಜಲ್ಲಿಕಟ್ಟು ನಡೆಸಲು ಅವಕಾಶ ನೀಡಲಾಗಿದೆ. ಹಾಗಾಗಿ ಕರಾವಳಿಯಲ್ಲಿಯೂ ಕಂಬಳ ನಡೆಸಲು ಅವಕಾಶ ನೀಡಬೇಕೆಂದು ಸ್ಯಾಂಡಲ್ ವುಡ್ ನಟ ಶಿವರಾಜ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next