Advertisement

ಜಿಲೇಲಿ ಬಿಜೆಪಿಯಿಂದ ಕರಾಳ ದಿನಾಚರಣೆ

12:21 PM May 24, 2018 | Team Udayavani |

ದೇವನಹಳ್ಳಿ: ರಾಜ್ಯದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿಕೂಟದ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ. ಈಗಾಗಲೇ ಉಪಮುಖ್ಯಮಂತ್ರಿ ಹುದ್ದೆ ವಿಚಾರದಲ್ಲಿ ಅಸಮಾಧಾನ ಉಂಟಾಗಿ ಗುಂಪುಗಾರಿಕೆ ಶುರುವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಿ. ರಾಜಣ್ಣ ಆರೋಪಿಸಿದರು.

Advertisement

ನಗರದ ಪ್ರವಾಸಿ ಮಂದಿರದ ಮುಂಭಾಗದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮತ್ತು ತಾಲೂಕು ಬಿಜೆಪಿ ಕರಾಳ
ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಅಪವಿತ್ರಮೈತ್ರಿ ಸರ್ಕಾರ ರಚನೆ ಯಾಗಿದೆ. ಈ ಸರ್ಕಾರದಿಂದ ಯಾವುದೇ ಅಭಿವೃದ್ಧಿಯಾಗುವುದಿಲ್ಲ. ಹೆಚ್ಚು ದಿನ ಅಧಿಕಾರದಲ್ಲಿ ಉಳಿಯುವುದೂ ಇಲ್ಲ. ಇದೊಂದು ಅನೈತಿಕ ಸರ್ಕಾರವಾಗಿದೆ ಎಂದು ದೂರಿದರು.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮುಖಂಡರು ಚುನಾವಣೆಯಲ್ಲಿ ಪರಸ್ಪರ ಆರೋಪ ಮಾಡಿಕೊಂಡು ಅಧಿಕಾರದ ಆಸೆಗಾಗಿ
ಒಂದಾಗಿ, ತಮ್ಮ ಸ್ವಾಭಿಮಾನ ಮರೆತ್ತಿದ್ದಾರೆ. ಪಕ್ಷದ ರಾಜ್ಯಾದ್ಯಂತ ಬಿ.ಎಸ್‌. ಯಡಿಯೂರಪ್ಪ ಆದೇಶದಂತೆ ಅಪವಿತ್ರ ಮೈತ್ರಿ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಕಪ್ಪು ಪಟ್ಟಿ ಧರಿಸಿ ಕರಾಳ ದಿನವನ್ನು ಆಚರಿಸುತ್ತಿದ್ದೇವೆ. ರಾಷ್ಟ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ. ನಾಲ್ಕೈದು ತಿಂಗಳಲ್ಲಿ ಮೈತ್ರಿಕೂಟದ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದರು.

ಇಕ್ಕಟ್ಟು: ಈಗಾಗಲೇ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಶುರುವಾಗಿದೆ. ಉಪಮುಖ್ಯ ಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದಿದ್ದ ಡಿ.ಕೆ. ಶಿವಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತ ಶಾಮನೂರು ಶಿವಶಂಕರಪ್ಪ ಮತ್ತು ಎಂ.ಬಿ.ಪಾಟೀಲ್‌ ಉಪಮುಖ್ಯ ಮಂತ್ರಿಸ್ಥಾನ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಹೀಗೆ ಗೊಂದಲಗಳು ಸೃಷ್ಟಿಯಾದರೆ ಸರ್ಕಾರ ಇಕ್ಕಟ್ಟಿಗೆ ಸಿಲುಕುತ್ತದೆ ಎಂದರು.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿ.ಅಶ್ವತ್ಥ್ನಾರಾಯಣ್‌ ಮಾತನಾಡಿ, ರಾಜ್ಯದಲ್ಲಿ ಬಿಜೆಪಿಗೆ 1.81 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಿ, 104 ಸ್ಥಾನ ನೀಡಿದ್ದಾರೆ. ಆದರೆ, ಮೂರರ ಒಂದನೇ ಭಾಗದಷ್ಟು ಮತವನ್ನು ಜೆಡಿಎಸ್‌ ಗೆ ನೀಡಿದ್ದಾರೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಹಿಂಬಾಗಿಲಿನಿಂದ ಅಪವಿತ್ರ ಮೈತ್ರಿ ಮಾಡಿ ಕೊಂಡು ಅಧಿಕಾರ ಅನುಭವಿಸಲು ಹೊರಟಿ ದ್ದಾರೆ. 37 ಸ್ಥಾನ ಹೊಂದಿರುವ ಜೆಡಿಎಸ್‌ ನವರ ಮನೆ ಬಾಗಿಲಿಗೆ ಹೋಗುವ ಸ್ಥಿತಿ ಕಾಂಗ್ರೆಸ್‌ಗೆ ಬಂದಿದೆ ಎಂದು ಹೇಳಿದರು.

Advertisement

ಕಾಂಗ್ರೆಸ್‌ ಅಧಿಕಾರಕ್ಕಾಗಿ ಭಿಕ್ಷೆ ಬೇಡುವ ಸ್ಥಿತಿಗೆ ಬಂದಿದೆ. ಕಾಂಗ್ರೆಸ್‌ ಅಧಿಕಾರಕ್ಕಾಗಿ ಕೀಳು ಮಟ್ಟದ ರಾಜಕಾರಣ ಮಾಡಲು ಹೊರಟಿದೆ. ಪ್ರಧಾನಿ ನರೇಂದ್ರ ಮೋದಿ ಉತ್ತಮ ಆಡಳಿತವನ್ನು ನೀಡುತ್ತಿದ್ದಾರೆ. 

2019ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಸರ್ಕಾರ ಬರುವುದು ಖಚಿತ ಎಂದು ವಿವರಿಸಿದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎಚ್‌.ಎಂ.ರವಿಕುಮಾರ್‌, ತಾಲೂಕು ಸೊಸೈಟಿ ಮಾಜಿ ಅಧ್ಯಕ್ಷ ಎ.ವಿ.ನಾರಾಯಣಸ್ವಾಮಿ, ರಾಜ್ಯ ಪರಿಷತ್‌ ಸದಸ್ಯ ದೇ.ಸು.ನಾಗರಾಜ್‌, ತಾಲೂಕು ಬಿಜೆಪಿ ಅಧ್ಯಕ್ಷ ಸಿ.ನಾಗರಾಜು ಗೌಡ, ಉಪಾಧ್ಯಕ್ಷ ಮುನಿಯಪ್ಪ, ಪ್ರಧಾನ ಕಾರ್ಯದರ್ಶಿ ಸೊಣ್ಣೇಗೌಡ, ಮಾಜಿ ಪ್ರಧಾನ ಕಾರ್ಯದರ್ಶಿ ಇಂಡ್ರಸನಹಳ್ಳಿ ಗೋಪಿ, ಜಿಲ್ಲಾ ಮಾಧ್ಯಮ ಪ್ರಮುಖ್‌ ಎಸ್‌.ರಮೇಶ್‌ ಕುಮಾರ್‌, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಎನ್‌.ರಾಜಗೋಪಾಲ್‌, ತಾಲೂಕು ರೈತ ಮೋರ್ಚಾ ಉಪಾಧ್ಯಕ್ಷ ಜಿ.ಎನ್‌. ಗೋಪಾಲ್‌, ತಾಲೂಕು ಯುವ ಮೋರ್ಚಾ ಅಧ್ಯಕ್ಷ ಆನಂದ್‌ಗೌಡ, ಮುಖಂಡ ಶ್ರೀನಿವಾಸ್‌, ಹನುಮಂತರಾಯಪ್ಪ, ಪಿಳ್ಳೇಗೌಡ, ನಂಜೇಗೌಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next