ವಾಡಿ: ಮನೆಗೊಂದು ನಳ ಕೊಡು ವುದಾದರೆ ಯೋಜನೆಯನ್ನು ಸ್ವಾಗತಿಸುತ್ತೇವೆ. ಆದರೆ ನಳಕ್ಕೆ ಮೀಟರ್ ಅಳವಡಿಸಿ ಕುಡಿಯುವ ನೀರಿನ ದಂಧೆ ನಡೆಸುವ ಸರ್ಕಾರದ ಷಡ್ಯಂತ್ರ ಸಾಕಾರಗೊಳ್ಳಲು ಬಿಡುವುದಿಲ್ಲ.
ಆಕ್ಷೇಪದ ನಡುವೆಯೂ ನಳಗಳಿಗೆ ಮೀಟರ್ ಅಳವಡಿಸಲು ಮುಂದಾದರೆ ಅವರುಗಳನ್ನು ಕಿತ್ತೆಸೆಯುತ್ತೇವೆ. ಜನವಿರೋಧಿ ಜಲಜೀವನ್ ಮಿಷನ್ ಯೋಜನೆ ಹಿಂದೆ ವ್ಯಾಪಾರದ ತಂತ್ರವಿದೆ. ಮೊದಲು ಉಚಿತವಾಗಿ ನೀರು ಕೊಟ್ಟು ನಂತರ ಸುಲಿಗೆಗೆ ಕೈ ಹಾಕುವ ಒಳಸಂಚು ರೂಪಿಸಲಾಗಿದೆ. ಇದನ್ನು ನಾವು ಒಪ್ಪೋದಿಲ್ಲ. ನಾವು ಪಂಚಾಯಿತಿಗೆ ತೆರಿಗೆ ಕಟ್ಟುತ್ತೇವೆ. ಮೀಟರ್ ಇಲ್ಲದೇ ಶುದ್ಧ ಕುಡಿಯುವ ನೀರು ಕೊಡಿ.. ಹೀಗೆ ತರಾಟೆಗೆ ತೆಗೆದುಕೊಳ್ಳುವ ಮೂಲಕ ಹಳಕರ್ಟಿ ಗ್ರಾಪಂ ವ್ಯಾಪ್ತಿಯ ಗುರುಜಿ ನಗರದ ನಿವಾಸಿಗಳು ಜಲಜೀವನ್ ಮಿಷನ್ ಯೋಜನೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಪ್ರಸಂಗ ನಡೆಯಿತು.
ಮನೆ-ಮನೆಗೆ ಗಂಗಾ ಯೋಜನೆ ಸಾಕಾರಗೊಳಿಸಲು ಪೈಪ್ ಮತ್ತು ಮೀಟರ್‌ಗಳ ಸಮೇತ ಬಡಾವಣೆಗೆ ಬಂದ ಗ್ರಾಪಂ ಅಧ್ಯಕ್ಷ ಸೋಮು ಚವ್ಹಾಣ, ಪಿಡಿಒ ರಾಚಯ್ಯಸ್ವಾಮಿ ಮಠಪತಿ, ತಾಲೂಕು ನೀರು ಸರಬರಾಜು ಇಲಾಖೆ ಎಇಇ ಅಜಯ ರಾಠೊಡ, ಜಲಜೀವನ್ ಮಿಷನ್ ಜೆಇ ರಾಜಕುಮಾರ ಮಡಿವಾಳ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಜಲಜೀವನ್ ಮಿಷನ್ ಯೋಜನೆ ಯಡಿ ಮನೆ ಮನೆಗೂ ಗಂಗೆ ತಲುಪಿಸುವ ಮಹತ್ವದ ಕಾರ್ಯವನ್ನು ಸರ್ಕಾರ ಮಾಡುತ್ತಿದೆ. ಇದು ಜನಪರವಾಗಿದೆ ಎಂದು ವಾದಿಸಲು ಮುಂದಾದ ಅಧಿಕಾರಿಗಳೊಂದಿಗೆ ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‌ಯುಸಿಐ) ಕಮ್ಯುನಿಸ್ಟ್ ಪಕ್ಷದ ಮುಖಂಡ ಮಲ್ಲಿನಾಥ ಹುಂಡೇಕಲ್, ಗ್ರಾಮದ ಮುಖಂಡ ಮಲ್ಲಪ್ಪ ಚೌಧರಿ ವಾಗ್ವಾದ ನಡೆಸಿದರು.
ರೈತ ಕೃಷಿ ಕಾರ್ಮಿಕ ಸಂಘಟನೆ ಅಧ್ಯಕ್ಷ ಚೌಡಪ್ಪ ಗಂಜಿ, ಶಿವುಕುಮಾರ ಆಂದೋಲಾ ಆಕ್ರೋಶ ವ್ಯಕ್ತಪಡಿಸಿದರು. ಹೀಗಾಗಿ ಅಧಿಕಾರಿಗಳು ಗ್ರಾಮದಿಂದ ಕಾಲ್ಕಿತ್ತಿದರು.