Advertisement

ಬಂಟ್ವಾಳದಲ್ಲಿ ಜಲಶಕ್ತಿ ಅಭಿಯಾನದ ಕೆಲಸಗಳಿಗೆ ಒತ್ತು

10:07 PM May 07, 2021 | Team Udayavani |

ಬಂಟ್ವಾಳ: ಲಾಕ್‌ಡೌನ್‌ ಮಾದರಿಯ ಕರ್ಫ್ಯೂ ಪರಿಣಾಮ ಯಾವುದೇ ಕೆಲಸ ಇಲ್ಲದೇ ಇದ್ದರೂ, ಗ್ರಾಮೀಣ ಭಾಗಗಳಲ್ಲಿ ಉದ್ಯೋಗ ಖಾತರಿ ಯೋಜನೆಯ ಕೆಲಸಗಳು ಜನರನ್ನು ಕೈ ಬೀಸಿ ಕರೆಯುತ್ತಿವೆ. ಲಾಕ್‌ಡೌನ್‌ ಅವಧಿಯಲ್ಲಿ ಬಂಟ್ವಾಳದ ಪ್ರತಿ ಗ್ರಾ.ಪಂ.ವ್ಯಾಪ್ತಿಯಲ್ಲೂ ನರೇಗಾ ಕೆಲಸ ಚುರುಕು ಪಡೆದುಕೊಂಡಿದೆ.

Advertisement

ಪ್ರತಿ ವರ್ಷವೂ ತಾಲೂಕಿಗೆ ನರೇಗಾದ ಕೆಲಸಕ್ಕಾಗಿ ನಿರ್ದಿಷ್ಟ ಮಾನವ ದಿನಗಳ ಕೆಲಸದ ಗುರಿಯನ್ನು ನೀಡಲಾಗುತ್ತಿದ್ದು, ಅದನ್ನು ತಾಲೂಕಿನ ಪ್ರತಿ ಗ್ರಾ.ಪಂ.ಗಳಿಗೆ ವಿಭಜಿಸಲಾಗುತ್ತದೆ. ಬಂಟ್ವಾಳಕ್ಕೆ ಈ ಬಾರಿ 4.15 ಲಕ್ಷ ಮಾನವ ದಿನಗಳ ಗುರಿ ನೀಡಲಾಗಿದ್ದು, ಪ್ರಸ್ತುತ ಸುಮಾರು 18,279 ಮಾನವ ದಿನಗಳ ಕೆಲಸ ನಡೆದಿವೆ.

ಬೆಳ್ತಂಗಡಿಗೆ ಹೆಚ್ಚಿನ ಗುರಿ :

ಜಿಲ್ಲೆಯಲ್ಲಿ ಬೆಳ್ತಂಗಡಿ ತಾಲೂಕಿಗೆ 4.80 ಲಕ್ಷ ಮಾನವ ದಿನಗಳ ಗುರಿ ನೀಡಲಾಗುತ್ತಿದ್ದು, ಇದು ಇಡೀ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಗುರಿಯಾಗಿದೆ. 4.15 ಲಕ್ಷ ಗುರಿ ಇರುವ ಬಂಟ್ವಾಳ ತಾಲೂಕು 2ನೇ ಸ್ಥಾನದಲ್ಲಿದೆ.

ಜಲಶಕ್ತಿ ಅಭಿಯಾನದ ಕಾರ್ಯ :

Advertisement

ನರೇಗಾದ ಮೂಲಕ ಹತ್ತಾರು ಕೆಲಸಗಳನ್ನು ಮಾಡುವುದಕ್ಕೆ ಅವಕಾಶವಿದ್ದು, ಪ್ರಸ್ತುತ ದಿನಗಳಲ್ಲಿ ತಾಲೂಕಿನಲ್ಲಿ ಜಲಶಕ್ತಿ ಅಭಿಯಾನದ ಕೆಲಸ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ಅದರಲ್ಲೂ ತೋಡಿನ ಹೂಳೆತ್ತುವಿಕೆಯ ಕಾರ್ಯ ಎಲ್ಲೆಡೆ ಬಹಳ ಉತ್ಸಾಹದಿಂದ ನಡೆಯುತ್ತಿದೆ. ಇದರ ಜತೆಗೆ ಕೆರೆಗಳ ಅಭಿವೃದ್ಧಿ, ಕಟ್ಟ ನಿರ್ಮಾಣ, ಬಾವಿ ರಚನೆ, ಕೃಷಿ ಹೊಂಡಗಳ ರಚನೆ ಮೊದಲಾದ ಕಾಮಗಾರಿಗಳು ಗ್ರಾಮೀಣ ಭಾಗಗಳಲ್ಲಿ ಹೆಚ್ಚಾಗಿ ನಡೆಯುತ್ತಿದೆ ಎಂದು ಅಧಿಕಾರಿಗಳು ವಿವರಿಸುತ್ತಾರೆ.

ತಾಲೂಕಿನಲ್ಲಿ 35,493  ಜಾಬ್‌ ಕಾರ್ಡ್‌ :

ನರೇಗಾದಲ್ಲಿ ಯಾರೇ ಕೆಲಸ ಮಾಡಬೇಕಿದ್ದರೂ, ತಮ್ಮ ಗ್ರಾ.ಪಂ.ಗಳಿಂದ ಉದ್ಯೋಗ ಚೀಟಿ (ಜಾಬ್‌ ಕಾರ್ಡ್‌) ಪಡೆದುಕೊಳ್ಳಬೇಕಾಗುತ್ತದೆ. ಆಧಾರ್‌ ಕಾರ್ಡ್‌, ಬ್ಯಾಂಕ್‌ ಖಾತೆ ವಿವರ, ಪಡಿತರ ಚೀಟಿ, ಫೋಟೋ ಸಹಿತ ಅಗತ್ಯ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಿದರೆ ಜಾಬ್‌ ಕಾರ್ಡ್‌ ಲಭ್ಯವಾಗಲಿದೆ. ಬಂಟ್ವಾಳದಲ್ಲಿ ಒಟ್ಟು 35,493 ಜಾಬ್‌ ಕಾರ್ಡ್‌ ವಿತರಣೆಯಾಗಿದ್ದು, ಇದರಲ್ಲಿ ಪ.ಜಾತಿ 3,061, ಪ.ಪಂಗಡ 3,458 ಹಾಗೂ ಇತರರು 28,974 ಮಂದಿ ಕಾರ್ಡ್‌ ಪಡೆದಿದ್ದಾರೆ. ಈ ವರ್ಷ 1,450 ಮಂದಿ ಸಕ್ರಿಯವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಲಾಕ್‌ಡೌನ್‌ ಪರಿಣಾಮದಿಂದ ಕೂಲಿಯಾಳುಗಳು ಹೆಚ್ಚು ಸಿಗುವುದರಿಂದ ನರೇಗಾದ ಕೆಲಸ ಚುರುಕು ಪಡೆದುಕೊಂಡಿದೆ. ಪ್ರತೀ ಗ್ರಾ.ಪಂ.ಗಳಲ್ಲೂ ನರೇಗಾದ ಕೆಲಸ ನಡೆಯುತ್ತಿದ್ದು, ಲಾಕ್‌ಡೌನ್‌ ಅವಧಿಯನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದ್ದೇವೆ. ಪ್ರಸ್ತುತ ಜಲಶಕ್ತಿ ಅಭಿಯಾನದಲ್ಲಿ ಹೆಚ್ಚಿನ ಕೆಲಸಗಳು ನಡೆಯುತ್ತಿದೆ.  –ಶಿವಾನಂದ ಪೂಜಾರಿ,  ಸಹಾಯಕ ನಿರ್ದೇಶಕರು,  ಬಂಟ್ವಾಳ ತಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next