Advertisement

ಜಲಜೀವನ್‌ ಮಿಷನ್‌ : ಜಿಲ್ಲೆಯಿಂದ 415 ಕೋ.ರೂ. ಪ್ರಸ್ತಾವನೆ

11:02 PM May 18, 2020 | Sriram |

ಉಡುಪಿ: ಕೇಂದ್ರ ಸರಕಾರದ ಜಲಜೀವನ್‌ ಮಿಷನ್‌ ಯೋಜನೆಯಡಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಒದಗಿಸಲು ರೂ.415 ಕೋಟಿ ರೂ ಗಳ ಕ್ರಿಯಾ ಯೋಜನೆಯ ಪ್ರಸ್ತಾವನೆಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಲು ಜಿ.ಪಂ. ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ಸೋಮವಾರ ಜಿ.ಪಂ. ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

Advertisement

ಜಲ ಜೀವನ್‌ ಮಿಷನ್‌ ಯೋಜನೆಯಡಿ 2024 ರೊಳಗೆ ಜಿಲ್ಲೆಯ ಗ್ರಾಮೀಣ ಪ್ರದೇಶದ ಪ್ರತಿ ವ್ಯಕ್ತಿಗೆ ವರ್ಷದ 365 ದಿನವೂ , ದಿನಕ್ಕೆ 55 ಲೀ. ಶುದ್ಧ ಕುಡಿಯುವ ನೀರು ಒಗದಿಸುವ ಯೋಜನೆ ಇದಾಗಿದ್ದು, ಜಿಲ್ಲೆಯಲ್ಲಿ ಈ ಯೋಜನೆಗಾಗಿ 415 ಕೋಟಿ ರೂ .ಗಳ ಅಂದಾಜು ಪ್ರಸ್ತಾವನೆಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿದೆ. ಈ ಪ್ರಸ್ತಾವನೆ ರಾಜ್ಯದಿಂದ ಕೇಂದ್ರ ಸರಕಾರಕ್ಕೆ ಸಲ್ಲಿಕೆಯಾಗಿ ಅನುಮೋದನೆ ದೊರೆಯಲಿದೆ. ಜಿಲ್ಲೆಯ ಪ.ಜಾತಿ, ಪಂಗಡ ಸೇರಿದಂತೆ ಗ್ರಾಮೀಣ ಪ್ರದೇಶದ ಯಾವುದೇ ಮನೆಗಳು ಈ ಯೋಜನೆಯಿಂದ ವಂಚಿತರಾಗದಂತೆ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಜಿ.ಪಂ. ಅಧ್ಯಕ್ಷರು ತಿಳಿಸಿದರು.

ಕ್ರಿಯಾ ಯೋಜನೆಯಲ್ಲಿ ಉಡುಪಿ ತಾಲೂಕಿನ 101 ಗ್ರಾಮಗಳ 1,00,800 ಮನೆಗಳಿಗೆ 108.86 ಕೋ.ರೂ, ಕುಂದಾಪುರ ತಾಲೂಕಿನ 50 ಗ್ರಾಮಗಳ 58,161 ಮನೆಗಳಿಗೆ 109.44 ಕೋ.ರೂ ಹಾಗೂ ಕಾರ್ಕಳ ತಾಲೂಕಿನ 99 ಗ್ರಾಮಗಳ 88,000 ಮನೆಗಳಿಗೆ 196.76 ಕೋ. ರೂ ಗಳ ಕ್ರಿಯಾಯೋಜನೆ ರೂಪಿಸಲಾಗಿದ್ದು, ಗ್ರಾಮದ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ, ಶಾಲೆ, ಆಸ್ಪತ್ರೆಗಳಿಗೂ ಸಹ ನೀರಿನ ಸೌಲಭ್ಯ ಒದಗಿಸಲಾಗುವುದು ಎಂದು ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋತ್‌‌ ತಿಳಿಸಿದರು.

ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಂಜಿನಿಯರ್‌ ರಾಜ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next