ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ನ ವೆಲ್ಲಿಂಗ್ಟನ್‌ನಲ್ಲಿ ನೂತನ ಭಾರತೀಯ ಹೈಕಮಿಷನ್ ಕಚೇರಿಯನ್ನು ವಿದೇಶಾಂಗ ಸಚಿವ ಎಸ್.ಜೈಶಂಕರ್ ಉದ್ಘಾಟಿಸಿದರು.
ಇದೇ ಮೊದಲ ಬಾರಿಗೆ ನ್ಯೂಜಿಲೆಂಡ್‌ಗೆ ಭೇಟಿ ನೀಡಿರುವ ಅವರು, “ಉಭಯ ದೇಶಗಳ ಬಾಂಧವ್ಯ ಮತ್ತಷ್ಟು ವೃದ್ಧಿಸಬೇಕಿದೆ.
ಈಗಾಗಲೇ ದ್ವಿಪಕ್ಷೀಯ ಸಂಬಂಧವು ನಮ್ಮ ಪ್ರಧಾನಿಗಳಾದ ನರೇಂದ್ರ ಮೋದಿ ಮತ್ತು ಜೆಸಿಂಡಾ ಆರ್ಡನ್ ಅವರ ದೂರದೃಷ್ಟಿ ಮತ್ತು ಬದ್ಧತೆಯಿಂದ ಬಲವನ್ನು ಪಡೆದಿದೆ,’ ಎಂದು ಹೇಳಿದರು.
ಇದೇ ವೇಳೆ ಅಲ್ಲಿರುವ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಜೈಶಂಕರ್, “ವ್ಯಾಪಾರ, ಡಿಜಿಟಲ್, ಕೃಷಿ, ಶಿಕ್ಷಣ, ಕೌಶಲ, ಸಾಂಪ್ರದಾಯಿಕ ಔಷಧ ಮತ್ತು ಕಡಲ ಭದ್ರತೆ ಕ್ಷೇತ್ರದಲ್ಲಿ ಉಭಯ ದೇಶಗಳ ನಡುವೆ ಸಹಕಾರ ಮತ್ತಷ್ಟು ವೃದ್ಧಿಸುವ ಭರವಸೆ ಇದೆ. ಬಲವಾದ ಸಹಕಾರವು ಶಾಂತಿ, ಸಮೃದ್ಧಿ ಮತ್ತು ಪ್ರಗತಿಯನ್ನು ಖಚಿತಪಡಿಸಲಿದೆ,’ ಎಂದಿದ್ದಾರೆ.