ಜೈಪುರ: ರಾಜಸ್ಥಾನದ ಜೈಪುರದಲ್ಲಿ ವಿಶ್ವದ 3ನೇ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ತಲೆ ಎತ್ತಲಿದೆ. ಇದು 75 ಸಾವಿರದಷ್ಟು ವೀಕ್ಷಕರ ಸಾಮರ್ಥ್ಯ ಹೊಂದಿರಲಿದ್ದು, ಇನ್ನು 4 ತಿಂಗಳಲ್ಲಿ ನಿರ್ಮಾಣ ಕಾರ್ಯ ಆರಂಭ ವಾಗಲಿದೆ ಎಂದು ರಾಜಸ್ಥಾನ್ ಕ್ರಿಕೆಟ್ ಮಂಡಳಿಯ (ಆರ್‌ಸಿಎ) ಕಾರ್ಯದರ್ಶಿ ಮಹೇಂದ್ರ ಶರ್ಮ ಹೇಳಿದರು.
ಜೈಪುರ-ಹೊಸದಿಲ್ಲಿ ಹೆದ್ದಾರಿಯಲ್ಲಿ, ಜೈಪುರದಿಂದ 25 ಕಿ.ಮೀ. ದೂರದ ಚೋಪ್ ಗ್ರಾಮದಲ್ಲಿ ಈ ಕ್ರೀಡಾಂಗಣ ಕ್ಕಾಗಿ 100 ಎಕರೆಗೂ ಹೆಚ್ಚಿನ ಜಾಗವನ್ನು ಖರೀದಿಸಲಾಗಿದೆ.
ಇದು ವಿಶ್ವದ ಮೂರನೇ ಬೃಹತ್ ಕ್ರಿಕೆಟ್ ಕ್ರೀಡಾಂಗಣವಾಗಲಿದೆ ಎಂದು ಮಹೇಂದ್ರ ಶರ್ಮ ತಿಳಿಸಿದರು. ಅಹ್ಮದಾಬಾದ್‌ನ ಮೊಟೆರಾ ಸ್ಟೇಡಿಯಂ 1.10 ಲಕ್ಷ ಹಾಗೂ ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್ 1.02 ಲಕ್ಷ ವೀಕ್ಷಕರ ಸಾಮರ್ಥ್ಯದೊಂದಿಗೆ ಮೊದಲೆರಡು ಸ್ಥಾನ ಅಲಂಕರಿಸಿವೆ.
ವಿವಿಧ ಸೌಲಭ್ಯ
ಕ್ರಿಕೆಟ್ ಹೊರತುಪಡಿಸಿ ಇದರಲ್ಲಿ ಒಳಾಂಗಣ ಕ್ರೀಡೆ, ಕ್ರೀಡಾ ತರಬೇತಿ ಅಕಾಡೆಮಿ, ಕ್ಲಬ್ ಹೌಸ್ ಕೂಡ ಇರಲಿದೆ. 4 ಸಾವಿರ ವಾಹನಗಳನ್ನು ನಿಲ್ಲಿಸುವ ವಿಶಾಲ ಪಾರ್ಕಿಂಗ್ ವ್ಯವಸ್ಥೆ ಯನ್ನು ಇದು ಹೊಂದಲಿದೆ.
ವೀಕ್ಷಕರಿಗೆ ಎರಡು ರೆಸ್ಟೋರೆಂಟ್, ಅಭ್ಯಾಸಕ್ಕಾಗಿ 30 ನೆಟ್ಸ್, 250 ಮಂದಿ ಸೇರುವಷ್ಟು ಪ್ರಸ್ ಕಾನ್ಫರೆನ್ಸ್ ರೂಮ್ ಕೂಡ ಇರಲಿದೆ.ಎರಡು ಅಭ್ಯಾಸ ಅಂಗಳಗಳನ್ನೂ ಇದು ಹೊಂದಿರಲಿದೆ. ಇದರಲ್ಲಿ ರಣಜಿ ಪಂದ್ಯಗಳನ್ನು ಆಯೋ ಜಿಸಬಹುದಾಗಿದೆ.
ಎರಡು ಹಂತಗಳಲ್ಲಿ ನಿರ್ಮಾಣ
ಎರಡು ಹಂತಗಳಲ್ಲಿ ಈ ಕ್ರೀಡಾಂಗಣದ ನಿರ್ಮಾಣ ಕಾರ್ಯ ಸಾಗಲಿದೆ. ಮೊದಲ ಹಂತದಲ್ಲಿ 45 ಸಾವಿರ ವೀಕ್ಷಕರಿಗೆ ಅವಕಾಶ ಕಲ್ಪಿಸಲಾಗುವುದು. ಬಳಿಕ ಇದನ್ನು 75 ಸಾವಿರಕ್ಕೆ ವಿಸ್ತರಿಸಲಾಗುವುದು ಎಂದು ಮಹೇಂದ್ರ ಶರ್ಮ ಮಾಹಿತಿಯಿತ್ತರು.