ಮಂಡ್ಯ: ಬೆಳಗಾವಿಯ ಜೈನಮುನಿಯ ಹತ್ಯೆ ಪ್ರಕರಣವನ್ನು ಸರಕಾರ ಸಿಬಿಐಗೆ ವಹಿಸಿದರೆ ತನಿಖೆ ಚುರುಕುಗೊಳ್ಳಲಿದೆ ಎಂದು ರಾಜ್ಯಸಭಾ ಸದಸ್ಯ ಹಾಗೂ ಧರ್ಮಸ್ಥಳ ಧರ್ಮಾಧಿ ಕಾರಿ ಡಾ| ವೀರೇಂದ್ರ ಹೆಗ್ಗಡೆ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೈನಮುನಿ ಹತ್ಯೆ ಪ್ರಕರಣ ಸಂಬಂಧ ರಾಜ್ಯ ಸರಕಾರದ ತನಿಖೆ ನಡೆಯುತ್ತಿದೆ. ನಮ್ಮ ಪ್ರಕಾರ ತನಿಖೆ ಸರಿಯಾಗಿ ನಡೆಯುತ್ತಿದೆ. ಇನ್ನೂ ಹೆಚ್ಚಿನ ತನಿಖೆ ಆದರೆ ಒಳ್ಳೆಯದು ಎಂದರು. ಜೈನಮುನಿ ಹತ್ಯೆ ಪ್ರಕರಣದ ತನಿಖೆಯಲ್ಲಿ ಹೊಸ ವಿಷಯಗಳು ಹೊರ ಬರುತ್ತಿವೆ. ಸಿಬಿಐ ತನಿಖೆಗೆ ಕೊಟ್ಟರೆ ಇನ್ನೂ ಹೆಚ್ಚಿನ ವಿಷಯಗಳು ಹೊರ ಬರಲಿವೆ ಎಂದು ಹೇಳಿದರು.
ಸಿಎಂಗೆ ಹೆಗ್ಗಡೆ ಅಭಿನಂದನೆ
ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಜೈನ ಸಮುದಾಯಕ್ಕೆ ವಿಶೇಷ ಅನುದಾನ ನೀಡಿ ಪ್ರೋತ್ಸಾಹಿಸಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅಭಿನಂದನೆ ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನಾ ಪತ್ರ ಬರೆದಿರುವ ಅವರು, ರಾಜ್ಯದಲ್ಲಿ 14ನೇ ಬಜೆಟ್ ಮಂಡಿಸಿದ ನಿಮಗೆ ಅಭಿನಂದನೆಗಳು. ಅನೇಕ ಯೋಜನೆಗಳ ಮೂಲಕ ಜನರಿಗೆ ಉಪಯುಕ್ತ ಕಾರ್ಯಕ್ರಮ ನೀಡಿದ್ದೀರಿ ಎಂದು ಶ್ಲಾ ಸಿದರು.
ಧರ್ಮಸ್ಥಳ ಕ್ಷೇತ್ರಕ್ಕೆ ಬರುತ್ತಿರುವ ಭಕ್ತರು, ವಿಶೇಷವಾಗಿ ಮಹಿಳೆಯರು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಅನೇಕ ಮಹಿಳೆಯರು ನಿಮ್ಮ ಹೆಸರಿನಲ್ಲಿ ಶ್ರೀ ಮಂಜುನಾಥ ಸ್ವಾಮಿಗೆ ಸೇವೆ ಮತ್ತು ಕಾಣಿಕೆ ಸಲ್ಲಿಸುತ್ತಿದ್ದಾರೆ. ಜೈನ ಸಮುದಾಯಕ್ಕೆ ವಿಶೇಷ ಅನುದಾನ ನೀಡಿ ಪ್ರೋತ್ಸಾಹಿಸಿರುವ ವಿಚಾರ ತಿಳಿದು ಇಡೀ ಸಮಾಜಕ್ಕೆ ಸಂತೋಷವಾಗಿದೆ. ಎಲ್ಲರ ಪರವಾಗಿ ಅಭಿನಂದನೆಗಳು. ಅವಕಾಶ ಇದ್ದಾಗ ಕ್ಷೇತ್ರಕ್ಕೆ ಬಂದು ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದುಕೊಂಡು ಹೋಗಬೇಕಾಗಿ ಅಪೇಕ್ಷೆ. ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹವಿರಲಿ ಎಂದು ತಿಳಿಸಿದ್ದಾರೆ.