Advertisement

ಹಿಂಸೆ ವಿರುದ್ಧ ನಿರಂತರ ಆಕ್ರೋಶ ; ಕಟು ಪ್ರವಚನಗಳ ಸಂತ ಜಿನೈಕ್ಯ 

04:13 PM Sep 02, 2018 | |

ಅಹಿಂಸೆಯೆ  ಪರಮಧರ್ಮ ಎನ್ನುವ ಜೈನ ಮುನಿಗಳಲ್ಲಿ  ತರುಣ್‌ ಸಾಗರ್‌ ಜಿ ಮಹಾರಾಜ್‌ ಅವರದ್ದು ಬಲು ದೊಡ್ಡ ಹೆಸರು. ಅವರ ಖ್ಯಾತಿಗೆ ಕಾರಣವಾದುದ್ದು ಏರು ಧ್ವನಿಯ ಪ್ರವಚನಗಳು. ಭ್ರಷ್ಟಾಚಾರ, ಮದ್ಯಪಾನ , ಪ್ರಾಣಿಹತ್ಯೆಯ ವಿರುದ್ಧ ಪ್ರತೀ ಪ್ರವಚನದಲ್ಲೂ  ಆಕ್ರೋಶ ಹೊರ ಹಾಕಿದ ಮುನಿ ಅತ್ಯಂತ ಕಠಿಣ ಸಲ್ಲೇಖನ ವೃತ ನಡೆಸಿ ಇಹಲೋಕ ತ್ಯಜಿಸಿ ಜಿನೈಕ್ಯರಾಗಿದ್ದಾರೆ. 

Advertisement

ಮಧ್ಯಪ್ರದೇಶದ ದಾಮೋಹ ಜಿಲ್ಲೆಯ ಗುಹಾಂಚಿ ಎಂಬ ಹಳ್ಳಿಯಲ್ಲಿ 1967 ರಲ್ಲಿ ಪ್ರತಾಪ್‌ ಚಂದ್ರ ಜೈನ್‌ ಮತ್ತು ಶಾಂತಿ ಬಾಯಿ ಜೈನ್‌ ಅವರ ಸುಪುತ್ರನಾಗಿ ಜನಿಸಿದ ತರುಣ್‌ ಸಾಗರ್‌ ಅವರ ಬಾಲ್ಯದ ಹೆಸರು ಪವನ್‌ ಕುಮಾರ್‌. 

ನೀನೂ ದೇವರಾಗುತ್ತಿ !
13 ವರ್ಷದ ಬಾಲಕ ಪವನ್‌ ಕುಮಾರ್‌ ಅವರು ಮಾರ್ಗದಲ್ಲಿ ನಡೆದು ಹೋಗುತ್ತಿದ್ದ ವೇಳೆ ನೀನೂ ದೇವರಾಗುತ್ತಿ ಎನ್ನುವ ಮಾತನ್ನು ಕೇಳಿ ಸನ್ಯಾಸದತ್ತ ಹೊರಳಿದರು. 20 ನೇ ವಯಸ್ಸಿನಲ್ಲಿ  ದಿಗಂಬರ್‌ ಪುಷ್ಪದಂತ್‌ ಸಾಗರ್‌ ಜಿ ಅವರ ಶಿಷ್ಯರಾಗಿ ದಿಗಂಬರರಾದರು. 

ಅಂದಿನಿಂದ ಕೊನೆಯುಸಿರಿರುವ ವರೆಗೆ ಜೈನ ದಿಗಂಬರ ಸನ್ಯಾಸ ಧರ್ಮವನ್ನು ಕಟ್ಟು ನಿಟ್ಟಾಗಿ ಪಾಲಿಸಿ ದೇಹವನ್ನು ದಂಡಿಸಿಕೊಂಡಿದ್ದ ತರುಣ್‌ ಸಾಗರ್‌ ಜಿ ಅವರು ಸಾವಿರಾರು ಜನರಿಗೆ ಮಾರ್ಗದರ್ಶಕರಾಗಿದ್ದರು. 

ಎಲ್ಲೇ ಪ್ರವಚನ ಮಾಡಿದರೂ ಧನದಾಸೆಗೆ ಬೀಳಬೇಡಿ, ಮಾಂಸ, ಮದ್ಯ ವರ್ಜಿಸಿ, ಭ್ರಷ್ಟಾಚಾರ ವಿರೋಧಿಸಿ, ಪರಿಸರ ಉಳಿಸಿ ಎನ್ನುವ ಸಂದೇಶವನ್ನು ಕಿಡಿ ಕಿಡಿಯಾಗಿ  ನೀಡುತ್ತಿದ್ದರು. 

Advertisement

ಆರ್‌ಎಸ್‌ಎಸ್‌ ಬೆಲ್ಟ್ ಬದಲಿಸಿ ಬಿಟ್ಟರು!
2009 ರಲ್ಲಿ ಆರ್‌ಎಸ್‌ಎಸ್‌ ಕಚೇರಿ ನಾಗಪುರದಲ್ಲಿ ವಿಜಯದಶಮಿ ಸಮಾರಂಭಕ್ಕೆ ಮುಖ್ಯಅತಿಥಿಯಾಗಿ ಆಗಮಿಸಿದ್ದ ತರುಣ್‌ ಸಾಗರ್‌ ಜಿ ತನ್ನ ಸಂದೇಶದ ವೇಳೆ ಆರ್‌ಎಸ್‌ಎಸ್‌ನಗಣವೇಷಧಾರಿಗಳು ಧರಿಸುವ  ಚರ್ಮದ ಬೆಲ್ಟ್ ಬಗ್ಗೆ ಉಲ್ಲೇಖ ಮಾಡಿ ಬದಲಿಸುವಂತೆ ಸಲಹೆ ನೀಡಿದ್ದರು. ಲೆದರ್‌ ಬೆಲ್ಟ್ ಪ್ರಾಣಿ ಹಿಂಸೆಯ ಉತ್ಪನ್ನ ಎನ್ನುವುದು ಅವರ ವಾದವಾಗಿತ್ತು. ಅವರ ಸಲಹೆಯಂತೆ ಬೆಲ್ಟ್ ಬದಲಾವಣೆ ಮಾಡಲಾಗಿತ್ತು. 

ಅಹಿಂಸಾ ಮಹಾ ಕುಂಭ 
ಮಾಂಸ ಮತ್ತು ಚರ್ಮದ ಉತ್ಪನ್ನಗಳನ್ನು ವಿದೇಶಕ್ಕೆ  ರಫ್ತು ಮಾಡುವುದನ್ನು ನಿಲ್ಲಿಸಬೇಕು ಎಂದು ಅಹಿಂಸಾ ಮಹಾ ಕುಂಭ ಆಂದೋಲನವನ್ನು ನಡೆಸಿದ್ದರು. 

ಲವ್‌ ಜಿಹಾದ್‌ ವಿರುದ್ಧ ಕಿಡಿ 
ಲವ್‌ ಜಿಹಾದ್‌ ವಿಚಾರದಲ್ಲಿ  ಆಕ್ರೋಶ ಹೊರ ಹಾಕಿದ್ದ ತರುಣ್‌ ಸಾಗರ್‌ ಜಿ ಹಿಂದೂ ಧರ್ಮೀಯರನ್ನು ಮತಾಂತರ ಮಾಡಲು ಕೆಲ ಇಸ್ಲಾಂ ಧರ್ಮೀಯರು ಮಾಡಿರುವ ಪಿತೂರಿ ಎಂದಿದ್ದರು. ತ್ರಿವಳಿ ತಲಾಖ್‌ ಪದ್ಧತಿಯೂ ರದ್ಧಾಗಬೇಕು ಎಂದು ಅವರು ಆಗ್ರಹಿಸಿದ್ದರು. 

ಹೊಟ್ಟೆ ಕಿಚ್ಚು ಮನುಷ್ಯನನ್ನು ಸುಡುತ್ತದೆ
ತನ್ನ ಊಟಕ್ಕಾಗಿ ಮನುಷ್ಯ ಅಹಿಂಸಾ ಮಾರ್ಗದ ಮೂಲದ ದಾರಿ ಕಂಡು ಕೊಳ್ಳಬೇಕು. ಇನ್ನೊಬ್ಬ ಹೆಚ್ಚು ಉಣ್ಣುತ್ತಿದ್ದಾನೆ ಎನ್ನುವುದನ್ನು ನೋಡಿ ಹೊಟ್ಟೆಕಿಚ್ಚು ಪಡಬಾರದು ಎನ್ನುವುದು ಅವರ ಸಂದೇಶವಾಗಿತ್ತು. 

ಹಲವು ಪತ್ರಿಕೆಗಳಿಗೆ ಲೇಖನಗಳ ಮೂಲಕ ಸಂದೇಶ ನೀಡಿದ್ದ ತರುಣ್‌ ಸಾಗರ್‌ ಜಿ ಅವರು ತನ್ನ ರಾಜಿ ಇಲ್ಲದ ಸಿದ್ದಾಂತಗಳನ್ನು ನೇರವಾಗಿ ಲೋಕಮುಖಕ್ಕೆ ಪ್ರಕಟಪಡಿಸಿದ್ದರು. 

ಟೀಕೆಯಲ್ಲಿ ರಾಜಿ ಇಲ್ಲ
ತರುಣ್‌ ಸಾಗರ್‌ ಜಿ ಅವರು ತನ್ನ ವಿಚಾರಧಾರೆಗಳ ವಿರೋಧಿ ಚಟುವಟಿಕೆ ಯಾರೇ ಮಾಡಿದರೂ ಕಠಿಣ ವಾಗಿ ವಿರೋಧಿಸುತ್ತಿದ್ದರು. ಭ್ರಷ್ಟಾಚಾರ , ಹಿಂಸೆ , ಅಶಾಂತಿಗೆ ಕಾರಣವಾದ ಅವರು ಎಷ್ಟೇ ಪ್ರಭಾವಿ ವ್ಯಕ್ತಿಯಾದರೂ ಬಹಿರಂಗವಾಗಿ ಟೀಕಿಸಲು ಅಂಜುತ್ತಿರಲಿಲ್ಲ. ಪಕ್ಷಾತೀತ , ಧರ್ಮಾತೀತವಾಗಿ ಅವರು ತಪ್ಪನ್ನು ತಿದ್ದುವ ವಿಚಾರ ಧಾರೆಗಳನ್ನು ಹೊರ ಹಾಕುತ್ತಿದ್ದರು. 

ಅಪಾರ ಅನುಯಾಯಿಗಳು !
ದಿಗಂಬರರಾಗಿದ್ದ  ತರುಣ್‌ ಸಾಗರ್‌ ಜಿ ಅವರಿಗೆ ಲಕ್ಷಾಂತರ ಅನುಯಾಯಿಗಳಾಗಿದ್ದರು. ಜೈನ ಧರ್ಮೀಯರು ಮಾತ್ರವಲ್ಲದೆ ಹಿಂದೂ ಧರ್ಮೀಯರು, ವಿದೇಶಿ ವ್ಯಕ್ತಿಗಳು ಅವರ ಸಂದೇಶಕ್ಕೆ ಮಾರು ಹೋಗಿ ಜೀವನದಲ್ಲಿ , ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದರು. 

ಸಲ್ಲೇಖನ ತೀರ್ಪಿನ ವಿರುದ್ಧ ಹೋರಾಟ 
ಸಾವಿಗೆ ಶರಣಾಗುವವ ವರೆಗೆ ಕಠಿಣ ಉಪವಾಸ ಕೈಗೊಳ್ಳುವ ಸಲ್ಲೇಖನ ವೃತವನ್ನು ಕೈಗೊಳ್ಳುವುದು ಜೈನ ಧರ್ಮೀಯರ ನಂಬಿಕೆಗಳಲ್ಲಿ ಒಂದು. ರಾಜಸ್ಥಾದ ಹೈ ಕೋರ್ಟ್‌ ಸಲ್ಲೇಖನ ವೃತದ ವಿರುದ್ಧ ತೀರ್ಪು ನೀಡಿದಾಗ ಆಕ್ರೋಶವನ್ನೂ ಹೊರ ಹಾಕಿದ್ದರು. 

51 ರಲ್ಲೇ  ಜಿನೈಕ್ಯ 
ಜೀವನದಲ್ಲಿ ಯಾವ ಆಸೆಗಳನ್ನು ಇಟ್ಟುಕೊಂಡಿರದ ತರುಣ್‌ ಸಾಗರ್‌ ಜಿ ಅವರು ಕೊನೆಯ ದಿನಗಳಲ್ಲಿ  ಕಾಮಾಲೆ ಕಾಯಿಲೆಯಿಂದ ಬಳಲುತ್ತಿದ್ದರು. ಸಲ್ಲೇಖನ ವೃತ ಕೈಗೊಂಡಿದ್ದ ಅವರ ದಿವ್ಯ ಶರೀರ ದಿಲ್ಲಿಯ ರಾಧಾಪುರಿ ಜೈನ ದೇಗುಲದಲ್ಲಿ ನೂರಾರು ಮುನಿಗಳು, ಭಕ್ತರ ನಡುವೆ ಬೆಳಗಿನ ಜಾವ ಜಿನೈಕ್ಯವಾಯಿತು.ತರುಣ್‌ ಸಾಗರ್‌ ಜಿ ಅವರು ತನ್ನ ಪ್ರವಚನಗಳು , ವಿಚಾರಧಾರೆಗಳ ಮೂಲಕ ಅಪಾರ ಭಕ್ತರ ಮನಗಳಲ್ಲಿ ಉಳಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next