ನಮ್ಮನ್ನು ಅಗಲಿದ ಮುನಿಶ್ರೀ ತರುಣಸಾಗರ ಮುನಿ ಮಹಾರಾಜರ ಬಗ್ಗೆ ತಿಳಿಯದವರು ಬಹಳ ಕಡಿಮೆ. ಇವರನ್ನು “ಕ್ರಾಂತಿಕಾರಿ ಮುನಿ’, “ರಾಷ್ಟ್ರಸಂತ’ ಎಂತಲೂ ಗುರ್ತಿಸುತ್ತಾರೆ. ಇವರ ಪ್ರವಚನ ಎಂದರೆ ಇಡೀ ದೇಶದಲ್ಲಿ ಬರೀ ಜೈನರು ಮಾತ್ರ ಸೇರುತ್ತಿರಲಿಲ್ಲ. ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತಾಡುತ್ತಾರೆ ಅಂತ ಗೊತ್ತಾದರೆ ಸಾಕು, ಜಾತಿ ಮತ, ಪಂಥ, ಧರ್ಮಗಳ ಹಂಗಿಲ್ಲದೇ ಸಾವಿರ ಸಾವಿರ ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು. ಧರ್ಮವನ್ನು ಜಡವಾಗಿ ನೋಡದೇ ಅದನ್ನು ವರ್ತಮಾನದ ಬದುಕಿನ ಹಿನ್ನೆಲೆಯಲ್ಲಿ ನೋಡುವ ಅವರ ಮಾತುಗಳನ್ನು ಎಲ್ಲರೂ ಏಕ ಮನಸ್ಸಿನಿಂದ ಆಲಿಸುತ್ತಿದ್ದರು. ಅವರ ಮಾತುಗಳು, ತಾಯಿ ತನ್ನ ಮಗುವನ್ನು ಮಲಗಿಸುವ ಜೋಗುಳದ ಹಾಡಿನಂತೆ ಇರುತ್ತಿರಲಿಲ್ಲ. ಕೇಳುಗರ ಮನಸ್ಸಲ್ಲಿ ವಿಚಾರದ ಅಲೆಗಳನ್ನು ಎಬ್ಬಿಸುವ ಬೆಂಕಿಯ ಉಂಡೆಯಂಥ ಮಾತುಗಳನ್ನು ಆಡುತ್ತಿದ್ದರು. ಅವರ ಮಾತುಗಳು ಕೆಲವೊಮ್ಮೆ ಕಠಿಣ ಅಂತ ಅನ್ನಿಸುತ್ತಿತ್ತು. ಅದಕ್ಕೆ ಅವರ ಸಮಜಾಯಿಷಿಯೂ ಬಹಳ ನೇರ, ಸ್ಪಷ್ಟವಾಗಿರುತ್ತಿತ್ತು. ಅವರ ಅಭಿಪ್ರಾಯವನ್ನು
ಕು.ವೆಂ.ಪು. ಅವರ ಕವಿತೆಯೊಂದರ ಸಾಲುಗಳ ಹಿನ್ನೆಲೆಯಲ್ಲಿ ಹೇಳುವುದಾದರೆ, “ಸತ್ತಂತಿಹರನು ಬಡಿದೆಬ್ಬಿಸುವಂತಹಾ’ ಮಾತುಗಳು.
ಮುನಿಶ್ರೀ ತರುಣ ಸಾಗರರು ಸಮಾಜದ ಡಾಂಭಿಕತೆ ಕಂಡು ವ್ಯಗ್ರರಾಗುತ್ತಿದ್ದರು. ನಮ್ಮಲ್ಲಿ ಮನೆ ಮಾಡಿರುವ ಮೂಢನಂಬಿಕೆಗಳು ಅವರಲ್ಲಿ ಆಕ್ರೋಶ ಉಂಟು ಮಾಡುತ್ತಿದ್ದವು. ಸಮಾಜದ ಓರೆ ಕೋರೆಗಳ ಬಗ್ಗೆ, ಅಪ್ರಮಾಣಿಕವಾದ ಆಲೋಚನೆಗಳ ಬಗ್ಗೆ ಅವರ ಮನಸ್ಸಿನಲ್ಲಿ ತೀವ್ರತರ ಅಸಹನೆ ಇತ್ತು. ತಮ್ಮ ಈ ಅಸಹನೆಯನ್ನು ಮುನಿಶ್ರೀಗಳು ಎಂದೂ ಮನಸ್ಸಿನಲ್ಲಿ ಮುಚ್ಚಿಟ್ಟುಕೊಳ್ಳದೇ ಅದನ್ನು ಸಾರ್ವಜನಿಕವಾಗಿ ಕಟುವಾದ ಮಾತುಗಳಿಂದಲೇ ಹೊರ ಹಾಕುತ್ತಿದ್ದರು. ಇಂತಹ ಅವರ ಮಾತುಗಳನ್ನು ಜನ ಸಾಮಾನ್ಯರು ಎಂದಿಗೂ ವಿಪರೀತವಾಗಿ ಗ್ರಹಿಸುತ್ತಿರಲಿಲ್ಲ. ಬದಲಿಗೆ, ಮುನಿಶ್ರೀಗಳ ಮಾತುಗಳ ಹಿನ್ನೆಲೆಯ ಆವೇಶವನ್ನು ಗ್ರಹಿಸಿದ ಪರಿಣಾಮವಾಗಿ ಧರ್ಮಾತೀತವಾಗಿ ಅವರನ್ನು ಗೌರವಿಸಿದರು. ಅವರ ಮಾತುಗಳಿಗೆ ಶರಣಾದರು. ವರ್ತಮಾನ ಕಾಲದಲ್ಲಿ ಬಹುಶಃ ಆಚಾರ್ಯ ವಿದ್ಯಾನಂದ ಮುನಿ ಮಹಾರಾಜರು, ಆಚಾರ್ಯ ವಿಶುದ್ಧ ಸಾಗರ ಮುನಿ ಮಹಾರಾಜರಷ್ಟೇ ಜನಪ್ರಿಯತೆಯನ್ನು ಮುನಿಶ್ರೀ ತರುಣ ಸಾಗರರು ಪಡೆದಿದ್ದರು.. ಅವರ ಮಾತುಗಳೆಂದರೆ ಹಾಗೆಯೇ. ಅಲ್ಲಿ ಬರೀ ಧರ್ಮದ ವ್ಯಾಖ್ಯಾನ ಮಾತ್ರ ಇರುತ್ತಿರಲಿಲ್ಲ. ಸಮಾಜಕ್ಕೆ ಕಿವಿ ಹಿಂಡಿ ಬುದ್ಧಿ ಹೇಳುವ ತಂದೆಯ ಮಮತೆ ಇರುತ್ತಿತ್ತು. ಒಬ್ಬ ಮನುಷ್ಯ ಸಮಾಜದಲ್ಲಿ ಬಾಳಬೇಕಾದರೆ ಹೇಗಿರಬೇಕು ಅನ್ನೋದನ್ನ ವಿವರಿಸಿ ಹೇಳುತ್ತಿದ್ದರು. ಒಬ್ಬ ಒಳ್ಳೆಯ ಮಗನಾಗೋದು/ಮಗಳಾಗೋದು ಹೇಗೆ? ಒಬ್ಬ ಒಳ್ಳೇ ಅಪ್ಪ/ಅಮ್ಮಾ ಆಗೋದು ಹೇಗೆ? ಒಬ್ಬ ಒಳ್ಳೆಯ ನಾಗರಿಕನಾಗಿ ಬದುಕುವುದು ಹೇಗೆ? ಎಂಬ ಬಗ್ಗೆ ಅವರ ಮಾತುಗಳು ಸಾಗುತ್ತಿದ್ದವು.
ಅವರ ಸಮಾಜಮುಖೀ ಚಿಂತನೆಗಳು ಅವರನ್ನು ಜೈನಧರ್ಮದ ಆವರಣದಿಂದ ಹೊರತಂದು ಸರ್ವ ಧರ್ಮಗಳ ಜನರೂ ಮುನಿಶ್ರೀಗಳನ್ನು ಪ್ರೀತಿಸುವಂತೆ, ಆರಾಧಿಸುವಂತೆ ಮಾಡಿದವು. ಜೈನ ಧರ್ಮದ ಬಗ್ಗೆ ಅವರು ಹೇಳುತ್ತಿದ್ದ ಮಾತುಗಳು “ಜೈನ ಧರ್ಮದಲ್ಲಿ ಸಮಸ್ಯೆ ಇಲ್ಲ. ಆದರೆ ಅದರ ಮಾರ್ಕೆಟಿಂಗ್ ಸರಿಯಿಲ್ಲ. ಉತ್ತಮವಾದ ಸರಕಾದರೂ ಅದರ ಪ್ಯಾಕಿಂಗ್ ಸರಿ ಇಲ್ಲದಿದ್ದರೆ ಹೇಗೆ ಜನಗಳನ್ನು ಅದು ಆಕರ್ಷಿಸುವುದಿಲ್ಲವೋ ಹಾಗೆಯೇ ಇವತ್ತು ಜೈನ ಧರ್ಮದ ಸ್ಥಿತಿ ಇದೆ’ ಎನ್ನುತ್ತಿದ್ದರು. ಅವರ ಜನಪ್ರಿಯವಾದ ಮತ್ತೂಂದು ಮಾತು “”ಮಹಾವೀರನನ್ನು ನೀವೆಲ್ಲಾ ಬಸದಿಯಲ್ಲಿ ಕೂಡಿ ಹಾಕಿದ್ದೀರಿ. ನಾನು ಮಹಾವೀರನನ್ನು ಬಸದಿಯ ಸೆರೆಯಿಂದ ರಸ್ತೆಯ ನಾಲ್ಕು ದಾರಿಗಳು ಸೇರುವ ಚೌಕಕ್ಕೆ ತರುವೆ”. ಮುನಿಶ್ರೀಗಳ ಮಾತುಗಳು ಆಧ್ಯಾತ್ಮಿಕ, ರಾಷ್ಟ್ರೀಯ ಸಾಮಾಜಿಕ ನೆಮ್ಮದಿಯ ಹೂರಣವನ್ನು ಒಳಗೊಂಡಿರುತ್ತಿದ್ದವು. ನಡು ನಡುವೆ ಅವರ ಮಾತುಗಳು ಹಾಸ್ಯದ ಚಟಾಕಿಯ ಜೊತೆ ಗಂಭೀರ ಚಿಂತನೆಗಳಿಗೆ ಪ್ರೇರೇಪಿಸುವ ರೀತಿಯಲ್ಲಿ ಇರುತ್ತಿದ್ದವಾದುದರಿಂದ ಅಬಾಲವೃದ್ಧರಾಗಿ ಎಲ್ಲರೂ ಅವರ ಪ್ರವಚನಗಳಿಗೆ ಮುಗಿ ಬೀಳುತ್ತಿದ್ದರು. ಧರ್ಮವನ್ನು ಅವರೆಂದೂ ಸ್ಥಾವರವಾಗಿ ನೋಡಲಿಲ್ಲ. ಒಂದು ಸಮಾಜ ಆರೋಗ್ಯಪೂರ್ಣವಾಗಿರಲು ಅವರ ವೈಚಾರಿಕ ಪ್ರಜ್ಞೆ ಸದಾ ಜಾಗೃತವಾಗಿರಬೇಕೆಂದು ಪ್ರತಿಪಾದಿಸುತ್ತಿದ್ದರು.
ಮುನಿಶ್ರೀ ತರುಣ ಸಾಗರರು ಮಧ್ಯಪ್ರದೇಶದ ದಮೋಹ ಜಿಲ್ಲೆಯ ಗುಹಾಚಿ ಎಂಬ ಗ್ರಾಮದಲ್ಲಿ ಶೇಟ್ ಪ್ರತಾಪ ಚಂದ ಜೈನ್ ಮತ್ತು ಶ್ರೀಮತಿ ಶಾಂತಿಬಾಯಿ ಜೈನ್ ದಂಪತಿಗಳ ಸುಪುತ್ರರಾಗಿ 1967 ಜೂ.26ರಂದು ಜನಿಸಿದರು. ಲೌಕಿಕ ಶಿಕ್ಷಣ ಕೇವಲ ಮಾಧ್ಯಮಿಕ ಶಾಲೆಯವರೆಗೆ ಮಾತ್ರ. 13ನೇ ವಯಸ್ಸಿನಲ್ಲಿಯೇ ಲೌಕಿಕ ಬದುಕಿನ ಬಗ್ಗೆ ಆಸಕ್ತಿ ಕಳೆದುಕೊಂಡು 1981ರಲ್ಲಿ ಗೃಹತ್ಯಾಗ ಮಾಡಿದರು. 1982ರಲ್ಲಿ ಕ್ಷುಲ್ಲಕ ದೀಕ್ಷೆ ತೆಗೆದುಕೊಂಡು ವೈರಾಗ್ಯದ ಬದುಕಿಗೆ ತಮ್ಮನ್ನು ಅರ್ಪಿಸಿಕೊಂಡರು. 1982 ಡಿ.1 ರಂದು ಐಲಕ ದೀಕ್ಷೆ ತೆಗೆದುಕೊಂಡವರು, 1988ರಂದು ದಿಗಂಬರ ಮುನಿದೀಕ್ಷೆಯನ್ನು ಪಡೆದುಕೊಂಡರು. ಇವರ ದೀಕ್ಷಾ ಗುರುಗಳು ಪುಷ್ಪದಂತ ಸಾಗರರು. ಆಚಾರ್ಯ ಭಗವಾನ್ ಕುಂದಕುಂದರ ನಂತರ ಎರಡು ಸಾವಿರ ವರ್ಷಗಳ ಮುನಿ ಪರಂಪರೆಯಲ್ಲಿ ಕೇವಲ 13ನೇ ವಯಸ್ಸಿನಲ್ಲಿಯೇ ದೀಕ್ಷೆ ಪಡೆದುಕೊಂಡ ಪ್ರಥಮ ಮುನಿ ಇವರು. ದೆಹಲಿಯ ಕೆಂಪು ಕೋಟೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಪ್ರವಚನ ಮಾಡಿದ ಮೊದಲ ಮುನಿ ಇವರು. ನಂತರ ಲೋಕಸಭೆಯ ಸದಸ್ಯರಿಗಾಗಿಯೂ ವಿಶೇಷ ಪ್ರವಚನ ನೀಡಿದ್ದಾರೆ. “”ನಾನು ನಿಮ್ಮಿಂದ ನೋಟು ಕೇಳಲು ಬಂದಿಲ್ಲ, ಓಟು ಕೇಳಲು ಬಂದಿಲ್ಲ, ನಾನು ನಿಮ್ಮಿಂದ ನಿಮ್ಮ ಪಾಪದ ಗಂಟು ಕೇಳಲು ಬಂದಿರುವೆ. ಆ ಪಾಪ ಯಾವತ್ತೂ ನಿಮ್ಮನ್ನು ರಾತ್ರಿ ಮಲಗಲು ಬಿಡುವುದಿಲ್ಲ, ಆ ಪಾಪ ನಿಮ್ಮನ್ನು ದೀನ-ಹೀನ-ದರಿದ್ರರನ್ನಾಗಿ ಮಾಡಿದೆ. ನಾನು ನಿನ್ನ ಬಾಗಿಲಲ್ಲಿ ನಿಂತಿರುವೆ ಜೋಳಿಗೆ ಹರಡಿ, ಕಾಕಿಬಿಡು ಈ ಜೋಳಿಗೆಯಲ್ಲಿ ನಿನ್ನ ಜೀವನದ ಎಲ್ಲ ಪಾಪಗಳನ್ನು, ಸಾಕು, ಇದೇ ಗುರುದಕ್ಷಿಣೆ ನಿನ್ನಿಂದ ನನಗೆ” ಎಂಬ ಅವರ ಮಾತುಗಳನ್ನು ಕೇಳುತ್ತಲೇ ಜನಗಳು ಪರವಶರಾಗಿಬಿಡುತ್ತಿದ್ದರು.
“”ಪಾಪಿಯನ್ನು ಎಚ್ಚರವಾಗಲು ಬಿಡಬೇಡ, ಅವನು ಮಲಗಿರುವುದೇ ಒಳ್ಳೆಯದು, ಏಕೆಂದರೆ ಅವನು ಎಷ್ಟು ಮಲಗಿರುತ್ತಾನೋ ಕಡಿಮೆ. ಅಷ್ಟು ಕಾಲ ಜನರು ಅವನ ಅತ್ಯಾಚಾರದಿಂದ ಪಾರಾಗುತ್ತಾರೆ. ಸಂತನನ್ನು ಮಲಗಲು ಬಿಡಬೇಡಿ, ಏಕೆಂದರೆ ಸಂತ ಮಲಗಿದರೆ, ಜಗತ್ತಿನ ಕಲ್ಯಾಣವು ತಟಸ್ಥವಾಗುತ್ತದೆ. ನಮ್ಮ ಪ್ರಯತ್ನವು – ಸಂತ ಎಚ್ಚರವಿರುವಂತೆ ಮತ್ತು ಪಾಪಿ ಮಲಗಿರುವಂತಿರಬೇಕು” ಎನ್ನುವುದು ಮುನಿಶ್ರೀಗಳ ಮತ್ತೂಂದು ಜನಪ್ರಿಯವಾದ ಮಾತು.
ವರ್ತಮಾನ ಕಾಲದಲ್ಲಿ ಮುನಿಗಳು ಸಂಘಸ್ಥರಾಗಿ ಸಂಚರಿಸುತ್ತಾರೆ. ಆದರೆ ಮುನಿಶ್ರೀ ತರುಣ ಸಾಗರರು ಏಕ ವಿಹಾರಿಯಾಗಿದ್ದವರು. ಅವರ ಮಾತು, ನಡವಳಿಕೆ ಎಲ್ಲದರಲ್ಲೂ ಒಂದು ರೀತಿಯ ತಹತಹ, ಚಡಪಡಿಕೆ ಇರುತ್ತಿದ್ದವು. ಇದಕ್ಕೆ ಮುಖ್ಯವಾದ ಕಾರಣ ಸಮಾಜಮುಖೀಯಾದ ಅಚರ ಚಿಂತನೆಗಳು. ಮೂಢನಂಬಿಕೆಯನ್ನು ವಿರೋಧಿಸುತ್ತಿದ್ದರು. ತಮ್ಮ ಪ್ರವಚನಗಳ ಉದ್ದಕ್ಕೂ ಅವರು ಹೇಳುತ್ತಿದ್ದದ್ದು ಒಂದೇ ಮಾತು, ಅವರ ಸಂದೇಶಗಳೂ ಅಷ್ಟೇ “ವಿಚಾರವಂತರಾಗಿ, ನಿಮಗೆ ಸರಿ ಕಾಣದ್ದನ್ನು ಪ್ರಶ್ನಿಸಿ, ಪ್ರಶ್ನಿಸದೇ ಏನನ್ನೂ ಒಪ್ಪಿಕೊಳ್ಳಬೇಡಿ.’
ಬಹುಷಃ ಅವರ ಈ ರೀತಿಯ ಮಾತುಗಳೇ ಅವರನ್ನು ಕ್ರಾಂತಿಕಾರಿ ಸಂತ ಎಂದು ಸಮಾಜ ಗುರ್ತಿಸುವಂತೆ ಮಾಡಿದೆ. ತಮ್ಮ ಕಡವೆ ಪ್ರವಚನಗಳ ಮೂಲಕ ಜನಸಾಮಾನ್ಯರನ್ನೂ ತಲುಪುತ್ತಿದ್ದ ಮುನಿಶ್ರೀಗಳು ಅನೇಕ ಕೃತಿಗಳನ್ನು ಹಿಂದಿ ಭಾಷೆಯಲ್ಲಿ ರಚಿಸಿದ್ದಾರೆ. ಅವಗಳಲ್ಲಿ ಕೆಲವು 1. ಮೃತ್ಯುಬೋಧಾ 2. ಮಾನದ್-ಉಪಾದಿ 3. ಕಡವೆ ಪ್ರವಚನಗಳು- ಈ ಎಲ್ಲಾ ಕೃತಿಗಳು ಕನ್ನಡವೂ ಸೇರಿದಂತೆ ಭಾರತದ ಬಹುತೇಕ ಭಾಷೆಗಳಿಗೆ ಅನುವಾದ ಆಗಿವೆ.
ಮುನಿಶ್ರೀಗಳು ತಮ್ಮ ಕೊನೆಯ ದಿನಗಳಲ್ಲಿ ದೈಹಿಕ ಅನಾರೋಗ್ಯದಿಂದ ಬಳಲಿದರು. ಒಂದು ಹಂತದವರೆಗೂ ಆ ರೋಗದ ಜೊತೆ ಹೋರಾಡಿದರು. ಆದರೆ ಯಾವಾಗ ಅವರಿಗೆ ಈ ರೋಗವು ತಮ್ಮ ದೈನಂದಿನ ಧಾರ್ಮಿಕ ಆಚರಣೆಗಳಿಗೆ ತೊಡಕನ್ನು ಉಂಟು ಮಾಡುತ್ತಿದೆ ಅನ್ನಿಸಿತೋ ಆಗ ವಿಧಿಪೂರ್ವಕವಾಗಿ ಸಲ್ಲೇಖನ ವ್ರತಧಾರಿಯಾಗಿ ಮರಣವನ್ನು ಮಹೋತ್ಸವವಾಗಿಸಿ, ಸೆಪ್ಟೆಂಬರ್ ತಿಂಗಳ ಮೊದಲ ದಿನದಂದೇ ಬೆಳಗಿನ ಜಾವ ಮೂರು ಗಂಟೆಯ ಸುಮಾರಿಗೆ ದೇಹತ್ಯಾಗ ಮಾಡಿ ಸದ್ಗತಿ ಹೊಂದಿದರು.
ಪ್ರೊ. ಅಜಿತ್ ಪ್ರಸಾದ್