Advertisement
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಕರ್ನಾಟಕ ಸಮತಾ ಸೈನಿಕ ದಳದಿಂದ ಆಯೋಜಿಸಲಾಗಿದ್ದ ಎಸ್‌ಸಿ, ಎಸ್‌ಪಿ ಮತ್ತು ಟಿಎಸ್‌ಪಿ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
Related Articles
Advertisement
ಪರಿಶಿಷ್ಟರಿಗೆ ಬಿಡುಗಡೆಯಾದ ಅನುದಾನ ಸಮರ್ಪಕವಾಗಿ ವೆಚ್ಚ ವಾಗುತ್ತಿದೆಯೇ ಎನ್ನುವ ಕುರಿತು ಸರಕಾರ ಸರಿಯಾದ ಮೇಲ್ವಿಚಾರಣೆ ನಡೆಸಿದ್ದರೆ ಈ ರೀತಿಯಾಗುತ್ತಿರಲಿಲ್ಲ ಎಂದ ಅವರು, ಪರಿಶಿಷ್ಟ ಯೋಜನೆಗಳಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡುವ ವಿಚಾರದಲ್ಲಿ ಶಾಸಕ ಅಧ್ಯಕ್ಷತೆಯ ಸಮಿತಿಗಳನ್ನು ರದ್ದುಗೊಳಿಸಬೇಕು, ತಾರತಮ್ಯವಿಲ್ಲದೆ ಅರ್ಹ ಫಲಾನುಭವಿಗಳಿಗೆ ಅಧಿಕಾರಿಗಳ ಮೂಲಕವೇ ಸೌಲಭ್ಯ ತಲುಪಿಸಬೇಕು,
ಅರ್ಜಿ ಹಾಕುವ ವಿಧಾನವನ್ನು ಸರಳೀಕರಿಸಿ ಏಕಗವಾಕ್ಷಿ ಯೋಜನೆಯಡಿ ಸೌಲಭ್ಯಗಳನ್ನು ಫಲಾನುಭವಿಗಳಿಗೆ ನೀಡಬೇಕು ಇಲ್ಲವಾದಲ್ಲಿ ಕೆಎಸ್‌ಎಸ್‌ಡಿ ಯಿಂದ ರಾಜಾದ್ಯಂತ ಹೋರಾಟ ರೂಪಿಸುವುದಾಗಿ ಅವರು ಎಚ್ಚರಿಸಿದರು. ಪರಿಶಿಷ್ಟರಿಗೆ ಬಿಡುಗಡೆಯಾದ ಅನುದಾನವನ್ನು ಇತರೇ ಕೆಲಸಗಳಿಗೆ ಬಳಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ಕಲಂ 7 ಅನ್ನು ತೆಗೆದುಹಾಕಬೇಕೆಂದು ಸರಕಾರವನ್ನು ಆಗ್ರಹಿಸಿದರು.
ಜನಸಂಖ್ಯೆ ಆಧಾರದ ಮೇಲೆ ಅನುದಾನ: ಕಾರ್ಯಕ್ರಮ ಉದ್ಘಾಟಿಸಿದ ಸಮಾಜ ಕಲ್ಯಾಣ ಇಲಾಖೆಯ ನಿವೃತ್ತ ಪ್ರಧಾನ ಕಾರ್ಯದರ್ಶಿಡಾ.ಇ.ವೆಂಕಟಯ್ಯ ಮಾತನಾಡಿ, ಎಸ್‌ಸಿಪಿ ಯೋಜನೆಯನ್ನು ಸುತ್ತೋಲೆ ಮೂಲಕ 1975 ರಿಂದಲೂ ನೀಡಲಾಗುತ್ತಿದೆ. ಮೊಟ್ಟ ಮೊದಲ ಬಾರಿಗೆ ಆಂಧ್ರಪ್ರದೇಶ ಇದನ್ನು ಕಾಯ್ದೆಯಾಗಿಸಿತು. ಇದರ ಆಧಾರದ ಮೇಲೆ ಕರ್ನಾಟಕ 2013 ರಲ್ಲಿ ಎಸ್‌ಸಿಎಸ್‌ಪಿ ಟಿಎಸ್‌ಪಿ ಕಾಯ್ದೆ ಜಾರಿಗೊಳಿಸಿತು.
ಈ ಕಾಯ್ದೆ ಮೂಲಕ ಜನಸಂಖ್ಯೆ ಆಧಾರದ ಮೇಲೆ ಅನುದಾನ ನಿಗದಿಪಡಿಸಿ ಬಿಡುಗಡೆ ಮಾಡಲಾಗುತ್ತಿದೆ ಎಂದರು. ದಲಿತರ ಕಲ್ಯಾಣ ಕೇವಲ ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿ ಮಾತ್ರವಲ್ಲ, ಸರಕಾರದ ಎಲ್ಲಾ ಇಲಾಖೆಗಳು ಇದರ ಹೊಣೆ ಹೊತ್ತುಕೊಂಡಾಗ ಮಾತ್ರವೇ ದಲಿತರ ಸಮಗ್ರ ಕಲ್ಯಾಣ ಸಾಧ್ಯವಾಗುತ್ತದೆ.ಆದ್ದರಿಂದ ದಲಿತರು ಯಾವ ಇಲಾಖೆಯಲ್ಲಿ ಎಸ್‌ಸಿಎಸ್‌ಪಿ ಟಿಎಸ್‌ಪಿ ಯೋಜನೆಯಡಿ ಯಾವ ಕಾರ್ಯಕ್ರಮ ಯೋಜನೆಗಳಿವೆ ಎಂಬುದರ ಬಗ್ಗೆ ಇಲಾಖೆ ವೆಬ್‌ಸೈಟ್‌ನಲ್ಲಿ ಮಾಹಿತಿ ಪಡೆದು ಅರ್ಜಿ ಸಲ್ಲಿಸಿ ಪ್ರಯೋಜನ ಪಡೆದುಕೊಳ್ಳಬೇಕೆಂದರು.
ರಾಜ್ಯದಲ್ಲಿ ಶೇ.8 ರಷ್ಟು ಮಾತ್ರ ದಲಿತರು ಭೂ ಒಡೆಯರಾಗಿದ್ದು, ಸರಕಾರ ಯೋಜನೆಗಳನ್ನು ಅರಿತು ಅವುಗಳ ಮೂಲಕ ಶಾಶ್ವತ ಆದಾಯ ಉತ್ಪನ್ನಕ್ಕೆ ಮುಂದಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಪ್ರಗತಿ ಹೊಂದಬೇಕೆಂದರು.
ದಸಂಸ ರಾಜ್ಯ ಸಂಚಾಲಕ ಎಚ್.ಟಿ.ಸಿದ್ದಲಿಂಗಯ್ಯ ಮಾತನಾಡಿ, ಹಿಂದೆಲ್ಲಾ ಎಸ್‌ಸಿಪಿ ಯೋಜನೆಗಳು ಮಠಗಳಿಗೆ ವರ್ಗಾವಣೆಯಾಗುತ್ತಿದ್ದವು, ಜನರಿಗೆ ನೇರವಾಗಿ ತಲುಪುತ್ತಿರಲಿಲ್ಲ. ಆದ್ದರಿಂದ ತಳ ಸಮುದಾಯ ಜನತೆ ಈಗಲಾದರೂ ಪ್ರಜ್ಞ ಬೆಳೆಸಿಕೊಂಡು ಸ್ವಾಭಿಮಾನದಿಂದ ಸರಕಾರದ ಕಾರ್ಯಕ್ರಮಗಳನ್ನು ಪ್ರಯೋಜನ ಪಡೆದುಕೊಳ್ಳಬೇಕೆಂದರು.
ನರೇಂದ್ರ ಮೋದಿ ದೇಶದಲ್ಲಿ ಮತ್ತೇ ಪ್ರಧಾನಿಯಾದರೆ ದಲಿತರ ಮೂಲಕವೇ ಅಂಬೇಡ್ಕರ್ ಸಿದ್ದಾಂತವನ್ನು ಸಮಾಧಿ ಮಾಡಿಸುವಂತ ವಾತಾವರಣ ನಿರ್ಮಾಣವಾಗುತ್ತದೆ ಎಂದು ಎಚ್ಚರಿಸಿದ ಅವರು, ಜಾಗೃತಿ ಇಲ್ಲದಿದ್ದರೆ ದಲಿತರಿಗೆ ಪ್ರತ್ಯೇಕ ಬಜೆಟ್ ನೀಡಿದರೂ ಪ್ರಯೋಜನವಾಗುವುದಿಲ್ಲವೆಂದರು.
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಸೌಂದರರಾಜನ್ ಮಾತನಾಡಿ, ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾಯ್ದೆಯು ದಲಿತರ ಕಲ್ಯಾಣಕ್ಕೆ ಇಂಜಿನ್ ಆಗಿದೆಯೆಂದು ಬಣ್ಣಿಸಿ, ಈ ಕಾಯ್ದೆಯಡಿ 27730 ಕೋಟಿ ರೂಪಾಯಿಗಳನ್ನು 37 ಇಲಾಖೆಗಳ ಮೂಲಕ 442 ಕಾರ್ಯಕ್ರಮಗಳ ಮೂಲಕ ಅನುಷ್ಠಾನಕ್ಕೆ ತರಲಾಗುತ್ತಿದೆ, ಇದರ ಮೂಲಕ ಬಡವರು ಹಾಗೂ ಶ್ರೀಮಂತರ ನಡುವಿನ ಅಂತರವನ್ನು ಕಡಿಮೆ ಮಾಡಲಾಗುತ್ತಿದೆ ಎಂದರು.
ಎಸ್‌ಎಸ್‌ಡಿ ಮಹಿಳಾ ಘಟಕದ ರಾಜಾಧ್ಯಕ್ಷ ಕಮಲಮ್ಮ, ಬೋಧಿ ವೃಕ್ಷ ಟ್ರಸ್ಟ್ ಅಧ್ಯಕ್ಷ ಎನ್.ನಾರಾಯಣಪ್ಪ, ಜಿಲ್ಲಾಧ್ಯಕ್ಷ ಮುನಿಶಾಮಿ, ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಇತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಪಟು ಬಿ.ಎಂ.ಶ್ರೀನಿವಾಸ್, ಕಾರ್ಗಿಲ್ ರಾಮಯ್ಯ, ಬಿ.ವೆಂಕಟಾಚಲಪತಿ ಇತರರನ್ನು ಸನ್ಮಾನಿಸಲಾಯಿತು. ಈ ನೆಲ ಈ ಜಲ ವೆಂಕಟಾಚಲಪತಿ ತಂಡದಿಂದ ಕ್ರಾಂತಿ ಗೀತೆಗಳ ಗಾಯನ ನೆರವೇರಿತು.