ಲಕ್ನೋ: ಜೈಲ್ ಟೂರಿಸಂ!
ವೈನ್ ಟೂರಿಸಂ, ಫುಡ್ ಟೂರಿಸಂ, ಇಕೋ ಟೂರಿಸಂ ರೀತಿ ಇದೂ ಕೂಡ ಹೊಸ ರೀತಿ ಪ್ರವಾಸ ಇದ್ದಂತಿದೆ. ಒಮ್ಮೆ ಹೋಗಿ ಬರೋಣ ಎಂದು ತಯಾರಾಗಬೇಡಿ. ಕಾರಣ ಈ ‘ಜೈಲ್ ಟೂರಿಸಂ’ ಅಥವಾ ‘ಕಾರಾಗೃಹ ಪ್ರವಾಸ’ ಇರುವುದು ಜನಸಾಮಾನ್ಯರಿಗಲ್ಲ, ಸರ್ಕಾರಿ ಅಧಿಕಾರಿಗಳಿಗೆ! ಹೌದು, ಸರ್ಕಾರಿ ಅಧಿಕಾರಿಗಳಿಗೇಕೆ ಜೈಲು ಪ್ರವಾಸ ಮಾಡಿಸಬೇಕು ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ, ‘ಭ್ರಷ್ಟಾಚಾರ ತಡೆಯೋಕೆ,’ ಎಂದು ಉತ್ತರಿಸುತ್ತಾರೆ ಉತ್ತರ ಪ್ರದೇಶದ ಫರೂಖಾಬಾದ್ ಜಿಲ್ಲಾಧಿಕಾರಿ ರವೀಂದ್ರ ಕುಮಾರ್.
‘ಸರ್ಕಾರಿ ಅಧಿಕಾರಿಗಳನ್ನು ಒಂದು ದಿನದ ಮಟ್ಟಿಗೆ ಫರೂಖಾಬಾದ್‌ನ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಬೇಕು. ಹಿಂದೆ ಕೆಲಸಕ್ಕಾಗಿ ಲಂಚ ಪಡೆದು, ಈಗ ಕಂಬಿಗಳ ಹಿಂದೆ ಜೀವನ ಸವೆಸುತ್ತಿರುವ ಭ್ರಷ್ಟ ಸರ್ಕಾರಿ ಅಧಿಕಾರಿಗಳ ಬದುಕು ಹೇಗಿದೆ ಎಂಬ ಬಗ್ಗೆ ಅವರಿಗೆ ಸಾಕ್ಷಾತ್ ದರ್ಶನ ಮಾಡಿಸಬೇಕು. ನಂತರ ಭ್ರಷ್ಟಾಚಾರದಲ್ಲಿ ಭಾಗಿಯಾಗಬೇಕೋ ಬೇಡವೋ ಎಂದು ಅವರೇ ನಿರ್ಧರಿಸುತ್ತಾರೆ,’ ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದ್ದಾರೆ. ಇದಕ್ಕೂ ಮುನ್ನ ಅವರು ತಮ್ಮದೇ ಜಿಲ್ಲೆಯ 576 ಸರ್ಕಾರಿ ಅಧಿಕಾರಿಗಳನ್ನು ಕೇಂದ್ರ ಕಾರಾಗೃಹಕ್ಕೆ ‘ಜೈಲು ಪ್ರವಾಸ’ ಕಳುಹಿಸಿದ್ದಾರೆ.
ಜಿಲ್ಲಾಧಿಕಾರಿ ಹೀಗೆ ಮಾಡಿದ್ದಾರೆ ಎಂದು ಕೇಳಿದಾಕ್ಷಣ ನಿಮ್ಮ ಮನದ ಮೂಲೆಯಿಂದ ಮತ್ತೂಂದು ಪ್ರಶ್ನೆ ಪುಟಿದೇಳಬಹುದು. ಅದೇನಂದ್ರೆ; ಕಳವೋ, ಕೊಲೆಯೋ ಮಾಡಿ ವರ್ಷಗಟ್ಟಲೆ ಜೈಲು ಪಾಲಾಗುವ ಅದೆಷ್ಟೋ ಅಪರಾಧಿಗಳು, ಮತ್ತೆ ಕ್ರಿಮಿನಲ್ ಕೆಲಸ ಮಾಡಿ ಜೈಲಿಗೆ ಹೋದ ಸಾಕಷ್ಟು ಉದಾಹರಣೆಗಳಿವೆ. ಹೀಗಿರುವಾಗ ಒಂದು ದಿನದ ಮಟ್ಟಿಗೆ, ಜೈಲಿನೊಳಗೆ ಹಾಗೆ ಹೋಗಿ, ಹೀಗೆ ಬಂದರೆ ಅಧಿಕಾರಿಗಳ ಮನಃಪರಿವರ್ತನೆ ಆಗಿಬಿಡುತ್ತಾ? ಇದಕ್ಕೂ ಉತ್ತರಿಸುವ ಜಿಲ್ಲಾಧಿಕಾರಿ, ‘ಭ್ರಷ್ಟಾಚಾರವೆಸಗಿ ಜೈಲಿನೊಳಗೆ ದಿನ ದೂಡುತ್ತಿರುವ ಮಾಜಿ ಸರ್ಕಾರಿ ನೌಕರರು ಜೈಲಿನೊಳಗೆ ಅದೆಷ್ಟು ಕಷ್ಟಪಡುತ್ತಾರೆ ಎಂದು ಹಾಲಿ ನೌಕರರು ಕಣ್ಣಾರೆ ನೋಡುತ್ತಾರೆ. ಆಗ ಭ್ರಷ್ಟರಾಗಿ ಕಾರಾಗೃಹದಲ್ಲಿ ಕಂಬಿ ಎಣಿಸುವು ದಕ್ಕಿಂತ ಸಭ್ಯರಾಗಿ ಸಮಾಜದ ನಡುವೆ ಸಂಬಳ ಎಣಿಸುವುದೇ ಲೇಸು ಎಂದು ಅವರಿಗನಿಸುತ್ತದೆ,’ ಎಂದು ಅಭಿಪ್ರಾಯ ಪಡುತ್ತಾರೆ.
ವಾಸ್ತವದ ದೃಷ್ಟಿಯಿಂದ ನೋಡಿದಾಗ ಇದೊಂದು ಅವೈಜ್ಞಾನಿಕ ಸಲಹೆ ಎಂದೆನಿಸಬಹುದು. ಆದರೆ ಸಕಾರಾತ್ಮಕ ದೃಷ್ಟಿಯಿಂದ ನೋಡಿದಾಗ ಜೈಲು ಪ್ರವಾಸ ಹೋಗಿ ಬರುವ ನೂರಾರು ಸರ್ಕಾರಿ ನೌಕರರ ಪೈಕಿ ಹತ್ತು ಮಂದಿಯಾದರೂ ಮನಸು ಬದಲಿಸಬಹುದು ಎಂಬ ಆಶಾಭಾವ ಜಿಲ್ಲಾಧಿಕಾರಿ ರವೀಂದ್ರ ಕುಮಾರ್ ಅವರದ್ದು. ತಮ್ಮ ಈ ಪರಿಕಲ್ಪನೆಯನ್ನು ಈಗಾಗಲೆ ಒರೆಗೆ ಹಚ್ಚಿರುವ ಡಿಸಿ, ಭೂ ವ್ಯವಹಾರ ನೋಡಿಕೊಳ್ಳುವ ಕಂದಾಯ ಅಧಿಕಾರಿಗಳು, ಆಹಾರ ಪೂರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುವ ಆಹಾರ ಇಲಾಖೆ ಅಧಿಕಾರಿಗಳು, ನ್ಯಾಯಬೆಲೆ ಅಂಗಡಿ ಮಾಲೀಕರು, ಗ್ರಾಮ ಮಟ್ಟದಲ್ಲಿ ವಿವಿಧ ಯೋಜನೆಗಳ ಜಾರಿಗೆ ಶ್ರಮಿಸುವ ಪಂಚಾಯಿತಿ ಅಧಿಕಾರಿಗಳು ಸೇರಿದಂತೆ ಜಿಲ್ಲೆಯ ವಿವಿಧ ಹಂತದ 576 ಸರ್ಕಾರಿ ನೌಕರರನ್ನು ಸೋಮವಾರ ಪ್ರವಾಸಕ್ಕೆ ಕಳುಹಿಸಿದ್ದರು. ಈ ನೌಕರರ ಪೈಕಿ ಎಷ್ಟು ಮಂದಿಯ ಮನಃ ಪರಿವರ್ತನೆಯಾಗುತ್ತದೋ ಕಾದುನೋಡಬೇಕು.