Advertisement

ಜೈಲು ಅವ್ಯವಹಾರ ಪ್ರಕರಣ: ತನಿಖೆಗೆ ಸರ್ಕಾರದ ಒಪ್ಪಿಗೆ

07:30 AM Mar 02, 2018 | Team Udayavani |

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡಿದ ಐಪಿಎಸ್‌ ಅಧಿಕಾರಿ ಡಿ.ರೂಪಾ ಮತ್ತು ಅವ್ಯವಹಾರದ ಆರೋಪ ಎದುರಿಸುತ್ತಿದ್ದ ಕಾರಾಗೃಹ ಡಿಜಿಪಿ ಸತ್ಯನಾರಾಯಣ ರಾವ್‌ ವಿರುದ್ಧ ಡಿಪಿಎಆರ್‌ ತನಿಖೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ. ಕಾರಾಗೃಹದಲ್ಲಿನ ಅವ್ಯವಹಾರ ಕುರಿತು ತನಿಖೆ ನಡೆಸಿದ ನಿವೃತ್ತ ಐಎಎಸ್‌ ಅಧಿಕಾರಿ ವಿನಯಕುಮಾರ್‌ ನೇತೃತ್ವದ ಸಮಿತಿ ಮಾಡಿದ ಶಿಫಾರಸಿನಂತೆ ಸರ್ಕಾರ ಈ ತಿರ್ಮಾನ ಕೈಗೊಂಡಿದೆ. ಈ ಇಬ್ಬರು ಅಧಿಕಾರಿಗಳ ವಿರುದ್ಧ ತನಿಖೆಯೂ ಸೇರಿದಂತೆ ಸಮಿತಿ ನೀಡಿದ್ದ ವರದಿಯನ್ನು ಸರ್ಕಾರ ಒಪ್ಪಿಕೊಂಡಿದ್ದು ಈ ಸಂಬಂಧ ಅಧಿಕೃತ ಆದೇಶ ಹೊರಡಿಸಿದೆ.

Advertisement

ಸರ್ಕಾರಕ್ಕೆ ಮುಜುಗರ: ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ವಿಶೇಷ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಕಾರಾಗೃಹ ಡಿಐಜಿ ರೂಪಾ ಆರೋಪಿಸಿದ್ದರು. ಅವರ ಆರೋಪ ತಳ್ಳಿ ಹಾಕಿದ್ದ ಕಾರಾಗೃಹ ಡಿಜಿಪಿ ಸತ್ಯನಾರಾಯಣ ರಾವ್‌, ರೂಪಾ ಅವರ ವಿರುದ್ಧವೇ ಆರೋಪ ಮಾಡಿದ್ದರು. ಈ ವಿಷಯ ಸಾಕಷ್ಟು ವಿವಾದಕ್ಕೆ ಕಾರಣವಾಗಿ ಸರ್ಕಾರಕ್ಕೆ ಮುಜುಗರ ಉಂಟು ಮಾಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನಿವೃತ್ತ ಐಎಎಸ್‌ ಅಧಿಕಾರಿ ವಿನಯ್‌ ಕುಮಾರ್‌ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿತ್ತು. ವಿನಯ್‌ ಕುಮಾರ್‌ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿನ ವಸ್ತುಸ್ಥಿತಿ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಹಿರಿಯ ಪೊಲೀಸ್‌ ಅಧಿಕಾರಿಗಳಾದ ಡಿಐಜಿ ರೂಪಾ ಹಾಗೂ ಡಿಜಿಪಿಯಾಗಿದ್ದ ಸತ್ಯನಾರಾಯಣ ರಾವ್‌ ಸರ್ಕಾರದ ನಿಯಮ ಉಲ್ಲಂಘನೆ ಮಾಡಿರುವುದನ್ನು ವರದಿಯಲ್ಲಿ ಪ್ರಸ್ತಾಪಿಸಿದ್ದರು.

ಜೈಲು ಸೂಪರಿಂಟೆಂಡೆಂಟ್‌ ಕೃಷ್ಣಕುಮಾರ್‌, ಡೆಪ್ಯುಟಿ ಸೂಪರಿಂಟೆಂಡೆಂಟ್‌ ಅನಿತಾ ವಿರುದ್ಧ ಅಧಿಕಾರ ದುರುಪಯೋಗ ಮತ್ತು ಲಂಚ ಪಡೆದಿರುವ ಬಗ್ಗೆ ಎಸಿಬಿ ತನಿಖೆ ನಡೆಸಬೇಕು ಹಾಗೂ ಮೂರು ತಿಂಗಳೊಳಗೆ ಮಾದರಿ ಕಾರಾಗೃಹ ಮಾರ್ಗದರ್ಶಿ ಸೂತ್ರ ಜಾರಿಗೊಳಿಸಬೇಕು ಎಂದು ಸಹ ಶಿಫಾರಸು ಮಾಡಿದ್ದರು. ಕಾರಾಗೃಹದಲ್ಲಿ ಸಿಸಿ ಕ್ಯಾಮರಾ, ಮೊಬೈಲ್‌ ಜಾಮರ್‌ಗಳ ವಾರ್ಷಿಕ ಗುತ್ತಿಗೆಯನ್ನು ಬೆಂಗಳೂರು ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿಯೂ ತಕ್ಷಣವೇ ಜಾರಿಗೊಳಿಸಬೇಕು ಎಂದು ವರದಿಯಲ್ಲಿ ತಿಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next