Advertisement

ಆಸಾರಾಮ್‌ಗೆ ಶಿಕ್ಷೆ : ಶೋಷಿಸುವವರಿಗೆ ಎಚ್ಚರಿಕೆ

06:00 AM Apr 27, 2018 | |

ಅಪ್ರಾಪ್ತ ವಯಸ್ಕ ಯುವತಿಯ ಮೇಲೆ ತನ್ನ ಆಶ್ರಮದಲ್ಲೇ ಅತ್ಯಾಚಾರ ಎಸಗಿದ ಆರೋಪಕ್ಕೊಳಗಾಗಿದ್ದ ಸ್ವಘೋಷಿತ ದೇವಮಾನವ ಅಸಾರಾಮ್‌ ಬಾಪುಗೆ ಜೋಧ್‌ಪುರದ ನ್ಯಾಯಾಲಯ ಆಜೀವ ಕಾರಾಗೃಹ ವಾಸದ ಶಿಕ್ಷೆ ವಿಧಿಸಿದೆ. ದೇಶಾದ್ಯಂತ ಅತ್ಯಾಚಾರ ಘಟನೆಗಳ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿರುವಾಗಲೇ ಈ ತೀರ್ಪು ಬಂದಿದೆ. ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಪ್ರಬಲನಾಗಿರುವ ಆಸಾರಾಮ್‌ಗೆ ನ್ಯಾಯಾಲಯ ವಿಧಿಸಿರುವ ಕಠಿನ ಶಿಕ್ಷೆ ಲೈಂಗಿಕ ಶೋಷಣೆಗೊಳಗಾದವರಿಗೆ ಪೊಲೀಸ್‌ ಠಾಣೆಗಳಲ್ಲಿ ದೂರು ದಾಖಲಿಸಲು ಧೈರ್ಯ ತುಂಬುವ ಸಾಧ್ಯತೆಯಿದೆ. ಅಂತೆಯೇ ಪ್ರಬಲರಾದರೂ ಕಾನೂನಿನ ಉರುಳಿನಿಂದ ಪಾರಾಗಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ನೀಡಿದೆ. 

Advertisement

ಆಸಾರಾಮ್‌ ಐದು ವರ್ಷದ ಹಿಂದೆ ಜೋಧ್‌ಪುರದ ತನ್ನ ಆಶ್ರಮದಲ್ಲಿ 16ರ ಹರೆಯದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ. ಬಾಲಕಿಯನ್ನು ಆಕೆಯ ಹೆತ್ತವರು ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಸಲುವಾಗಿ ಆಶ್ರಮಕ್ಕೆ ಸೇರಿಸಿದ್ದರು. ಆದರೆ ಅದೇ ಆಶ್ರಮದಲ್ಲಿ ಆಕೆಯ ಭವಿಷ್ಯವನ್ನು ಮುರುಟಿ ಹಾಕುವ ಹೀನ ಕೃತ್ಯವನ್ನು ಆಸಾರಾಮ್‌ ಎಸಗಿದ್ದಾನೆ. ಚಿಕ್ಕಪುಟ್ಟ ನೌಕರಿ ಮಾಡುತ್ತಾ ಹೊಟ್ಟೆ ಹೊರೆದುಕೊಳ್ಳುತ್ತಿದ್ದ ಅಸುಮಾಲ್‌ ಅನಂತರ ಆಸಾರಾಮ್‌ ಆಗಿ ಬದಲಾದದ್ದೇ ಒಂದು ನಿಗೂಢ ಕತೆ. ಹಿಮಾಲಯಕ್ಕೆ ಹೋಗಿ ತಪಸ್ಸು ಮಾಡಿ ಗುರುವನ್ನು ಒಲಿಸಿ ಅಪೂರ್ವ ಸಿದ್ಧಿಗಳನ್ನು ಪಡೆದುಕೊಂಡಿದ್ದಾನೆ ಎಂಬೆಲ್ಲ ಕತೆಗಳನ್ನು ಅವನ ಕುರಿತಾಗಿರುವ ಪುಸ್ತಕಗಳು ಮತ್ತು ಸಾಕ್ಷ್ಯಚಿತ್ರಗಳು ಹೇಳುತ್ತಿವೆ. ಇದೆಷ್ಟು ನಿಜ ಎನ್ನುವುದು ಇನ್ನೂ ಸಾಬೀತಾಗಿಲ್ಲ. ಆದರೆ ಧಾರ್ಮಿಕ ಗುರುವಿನ ಅವತಾರ ತಾಳಿದ ಬಳಿಕ ಆಸಾರಾಮ್‌ನದ್ದು ಬಿರುಸಿನ ನಡಿಗೆ. ಕೆಲವೇ ವರ್ಷಗಳಲ್ಲಿ ಅವನು 10,000 ಕೋ. ರೂ. ಸಾಮ್ರಾಜ್ಯದ ಒಡೆಯನಾಗುತ್ತಾನೆ, ದೇಶ ವಿದೇಶಗಳಲ್ಲಿ 400ಕ್ಕೂ ಅಧಿಕ ಆಶ್ರಮಗಳನ್ನು ಸ್ಥಾಪಿಸುತ್ತಾನೆ, ಲಕ್ಷಾಂತರ ಮಂದಿ ಅವನ ಅನುಯಾಯಿಗಳಾಗುತ್ತಾರೆ. ಇವರಲ್ಲಿ ರಾಜಕಾರಣಿಗಳು, ಕೈಗಾರಿಕೋದ್ಯಮಿಗಳು, ಸಿನೇಮಾ ಕ್ಷೇತ್ರದವರೂ ಇದ್ದಾರೆ. 

ಅತ್ಯಾಚಾರ ಪ್ರಕರಣಕ್ಕೂ ಮೊದಲೇ ಆಸಾರಾಮ್‌ನ ಕೆಲವು ಕುಕೃತ್ಯಗಳು ಬೆಳಕಿಗೆ ಬಂದಿದ್ದವು. ಅವನ ಒಂದು ಆಶ್ರಮದಲ್ಲಿ ಇಬ್ಬರು ಮಕ್ಕಳ ಶವಗಳು ಪತ್ತೆಯಾಗಿದ್ದವು. ತಾಂತ್ರಿಕ ಕ್ರಿಯೆಯಂಗವಾಗಿ ನರಬಲಿ ನೀಡಿದ ಅನುಮಾನ ವ್ಯಕ್ತವಾಗಿದ್ದರೂ ಆಸಾರಾಮ್‌ ತನ್ನ ಪ್ರಭಾವ ಬಳಸಿ ಈ ಕೇಸನ್ನು ಮುಚ್ಚಿ ಹಾಕುವಲ್ಲಿ ಸಫ‌ಲನಾಗಿದ್ದ. ಭೂಕಬಳಿಕೆ ಆರೋಪವೂ ಅವನ ಮೇಲಿದೆ. ಹಲವು ಕೃತ್ಯಗಳಲ್ಲಿ ಮಗನೂ ಸಹಭಾಗಿಯಾಗಿದ್ದು, ಅವನೀಗ ಜೈಲಿನಲ್ಲಿದ್ದಾನೆ.  ಕಾನೂನು ತಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ ಎಂಬ ಭಂಡ ಧೈರ್ಯವೇ ಆಸಾರಾಮ್‌ ಹಾಗೂ ಅವನಂಥ ಕೆಲವು ಸ್ವಘೋಷಿತ ದೇವಮಾನವರಿಗೆ ಮಹಿಳೆಯರನ್ನು ಶೋಷಿಸಲು ಹಾಗೂ ಇತರ ಅಪರಾಧ ನಡೆಸಲು ಕುಮ್ಮಕ್ಕು ನೀಡುತ್ತದೆ. ತಮಗಿರುವ ರಾಜಕೀಯ ಕೃಪಾ ಶ್ರಯಗಳನ್ನು ಗುರಾಣಿಯಾಗಿ ಬಳಸಿಕೊಂಡು ಎಗ್ಗಿಲ್ಲದೆ ಮೆರೆಯುತ್ತಾ ಹೋಗುತ್ತಾರೆ. ಇಂಥ ನಕಲಿ ಸಂತರು ಹೊಂದಿರುವ ಬೃಹತ್‌ ಅನುಯಾಯಿ ವರ್ಗದಲ್ಲಿ ಮತಬ್ಯಾಂಕ್‌ ಕಾಣುವ ರಾಜಕಾರಣಿಗಳು ಅವರ ಅನ್ಯಾಯಗಳಿಗೆ ಕಿವಿಕಣ್ಣು ಮುಚ್ಚಿಕೊಳ್ಳುವುದರಿಂದಲೇ ಪರಿಸ್ಥಿತಿ ಇಷ್ಟು ಹದಗೆಟ್ಟಿದೆ. ಅವರ ಜನಪ್ರಿಯತೆಗೆ ದೃಶ್ಯ ಮಾಧಯಮಗಳು ಹಾಗೂ ಆಧುನಿಕ ಮಾಧ್ಯಮಗಳು ಧಾರಾಳ ಕೊಡುಗೆ ನೀಡುವುದನ್ನು ಅಲ್ಲಗಳೆಯಲಾಗುವುದಿಲ್ಲ. ಆಸಾರಾಮ್‌ ಪ್ರಕರಣವೊಂದರಿಂದಲೇ ಇಡೀ ಧಾರ್ಮಿಕ ವ್ಯವಸ್ಥೆಯನ್ನು ದೂಷಿಸುವುದು ತಪ್ಪಾಗುತ್ತದೆ. ಭಾರತದ ಸಂತ ಪರಂಪರೆಯಲ್ಲಿ ಸಮಾಜಕ್ಕೆ, ದೇಶಕ್ಕೆ ಆಗಣಿತವಾದ ಕೊಡುಗೆಯನ್ನು ನೀಡಿದವರು ಅನೇಕ ಮಂದಿಯಿದ್ದಾರೆ.

ಶಿಕ್ಷಣ, ಆರೋಗ್ಯಸೇರಿದಂತೆ ಸಮಾಜ ವಿವಿಧ ಕ್ಷೇತ್ರಗಳಲಿ ಸೇವೆ ಸಲ್ಲಿಸುತ್ತಿರುವ ಅನೇಕ ಧಾರ್ಮಿಕ ಸಂಸ್ಥೆಗಳಿವೆ. ಆದರೆ ಇಂತಹ ಕೆಲವು ಘಟನೆಗಳಿಂದಾಗಿ ಇಡೀ ಸಂತ ಕುಲವೇ ತಲೆತಗ್ಗಿಸುವಂತಾಗಿದೆ. ಧಾವಂತದ ಆಧುನಿಕ ಜೀವನಶೈಲಿಯಿಂದಾಗಿ ನಿರ್ಮಾಣವಾಗುತ್ತಿರುವ ಒತ್ತಡದಿಂದ ಮುಕ್ತಿ ಹೊಂದಲು ಜನರು ಧಾರ್ಮಿಕ ಸಂಸ್ಥೆಗಳು, ಧಾರ್ಮಿಕ ವ್ಯಕ್ತಿಗಳ ಮೊರೆ ಹೋಗುತ್ತಾರೆ. ಆದರೆ ಆಸಾರಾಮ್‌ನಂತಹ ಸಂತರು ಮಾಡಿದ ಕೃತ್ಯಗಳಿಂದಾಗಿ ಜನರ ಈ ನಂಬಿಕೆಗೆ ಕೊಡಲಿಯೇಟು ಬೀಳುತ್ತಿದೆ.  ಜೈಲಿನಲ್ಲಿರುವಾಗಲೇ ಪ್ರಕರಣದ ಇಬ್ಬರು ಸಾಕ್ಷಿದಾರರನ್ನು ಕೊಲ್ಲಿಸಿದ ಆರೋಪ ಆಸಾರಾಮ್‌ ಮೇಲಿದೆ.ಹಲವು ಮಂದಿಯನ್ನು ಬೆದರಿಸಲಾಗಿದೆ, ಇಲ್ಲವೇ ನಾನಾ ರೀತಿಯ ಆಮಿಷಗಳನ್ನು ಒಡ್ಡಲಾಗಿದೆ. ಈ ಎಲ್ಲ ಘಟನೆಗಳ ನಿಷ್ಪಕ್ಷಪಾತ ತನಿಖೆ ನಡೆದರೆ ಪ್ರಕರಣ ತಾರ್ಕಿಕ ಅಂತ್ಯ ಕಾಣಬಹುದು. ತಮ್ಮ ಲಾಲಸೆಗಳಿಗೆ ಧರ್ಮವನ್ನು ಬಳಸಿಕೊಂಡು ಮುಗ್ಧ ಜನರನ್ನು ಶೋಷಿಸುವವರಿಗೆ ಆಸಾರಾಮ್‌ ಪ್ರಕರಣ ಒಂದು ಎಚ್ಚರಿಕೆಯ ಗಂಟೆ ಆಗಲಿ. ಅಂತೆಯೇ ಜನರೂ ಇಂತಹ ನಕಲಿ ಬಾಬಾಗಳ ಕುರಿತು ಎಚ್ಚೆತ್ತುಕೊಳ್ಳಲಿ. 

Advertisement

Udayavani is now on Telegram. Click here to join our channel and stay updated with the latest news.

Next