ಬೆಂಗಳೂರು: ಕೋರಮಂಗಲದಲ್ಲಿ 2021 ರಲ್ಲಿ ನಡೆದಿದ್ದ ರೌಡಿಶೀಟರ್ ಜೋಸೆಫ್ ಬಾಬು ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದುಕೊಂಡೇ ರೌಡಿಶೀಟರ್ ಸೋಮಶೇಖರ್ ಇತ್ತೀಚೆಗೆ ಸಾಕ್ಷಿದಾರರಿಗೆ ಬೆದರಿಕೆ ಸಂದೇಶ ಕಳುಹಿಸಿರುವ ಕುರಿತು ಜೈಲಿನ ಅಧೀಕ್ಷಕರ ವಿರುದ್ಧ ತನಿಖೆ ನಡೆಸುವಂತೆ ಕಾರಾಗೃಹ ಐಜಿಪಿಗೆ ಸಿಸಿಎಚ್ 67ನೇ ನ್ಯಾಯಾಲಯವು ಸೂಚಿಸಿದೆ.
2021ರಲ್ಲಿ ಕೋರಮಂಗಲದಲ್ಲಿ ನಡೆದಿದ್ದ ರೌಡಿಶೀಟರ್ ಜೋಸೆಫ್ ಬಾಬು ಅಲಿಯಾಸ್ ಬಬ್ಲು ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ರೌಡಿ ಸೋಮಶೇಖರ್ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದಾನೆ.
ಆಟೋ ಚಾಲಕನಾಗಿರುವ ಆರ್ಮು ಗಂ ಇನ್‌ಸ್ಟಾಗ್ರಾಂ ಖಾತೆಯ ಮೆಸೆಂಜರ್‌ಗೆ ಕಳೆದ ಸೆ.22ರಂದು ಸಲಗ ಸೋಮ ಹೆಸರಿನ ಐಡಿಯಿಂದ 3 ವಾಯ್ಸ್ ಮೆಸೇಜ್ ಕಳುಹಿಸಿ, ಬಬ್ಲು ಕೊಲೆ ಪ್ರಕರಣದಲ್ಲಿ ಯಾರೊಬ್ಬರೂ ನ್ಯಾಯಾಲಯದಲ್ಲಿ ಸಾಕ್ಷ್ಯ ಹೇಳಬಾರದು ಎಂದು ಜೀವ ಬೆದರಿಕೆ ಹಾಕಿದ್ದ. ಈ ಸಂಬಂಧ ಸಿಸಿಬಿಯಲ್ಲಿ ಪ್ರಕರಣ ದಾಖಲಾಗಿತ್ತು.
ಜೋಸೆಫ್ ಕೊಲೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಸಿಎಚ್ 67ನೇ ನ್ಯಾಯಾಲಯದ ಗಮನಕ್ಕೆ ಈ ವಿಚಾರವನ್ನು ಪೊಲೀಸರು ತಂದಿದ್ದಾರೆ. ಜೈಲು ಅಧೀಕ್ಷಕರ ವೈಫಲ್ಯದಿಂದ ಜೈಲಿನಲ್ಲಿರುವ ಆರೋಪಿ ಮೊಬೈಲ್ ಪಡೆದಿದ್ದಾನೆ. ಆರೋಪಿ ಸೋಮಶೇಖರ್‌ಗೆ ಮೊಬೈಲ್ ಸಿಕ್ಕಿದ್ದು ಹೇಗೆ ಎಂಬ ವಿಚಾರವೂ ಸೇರಿ ಜೈಲು ಅಧೀಕ್ಷಕರ ವಿರುದ್ಧ ಐಜಿಪಿ ಸಮಗ್ರ ತನಿಖೆ ನಡೆಸಬೇಕು.
ಪ್ರಕರಣದ ವಿಚಾರಣೆ ಮುಗಿಯುವವರೆಗೂ ಸಾಕ್ಷಿದಾರರಿಗೆ ಪ್ರಕರಣದ ತನಿಖಾಧಿಕಾರಿ ಹಾಗೂ ಕೋರ ಮಂಗಲ ಪೊಲೀಸರು ರಕ್ಷಣೆ ನೀಡುವಂತೆ ನ್ಯಾಯಾಲಯ ಸೂಚಿಸಿದೆ. ಇದರ ಬೆನ್ನಲ್ಲೇ ಬಾಡಿ ವಾರಂಟ್ ಮೂಲಕ ರೌಡಿಶೀಟರ್ ಸೋಮಶೇಖರ್‌ನನ್ನು ವಶಕ್ಕೆ ಪಡೆಯಲು ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.