Advertisement

ಹಳೆ ಮೈಸೂರಲ್ಲಿ ಜೆಡಿಎಸ್‌ಗೆ ಜೈ; ಸಾಮರ್ಥ್ಯ ಸಾಬೀತುಪಡಿಸಿದ ದಳ ಕಾರ್ಯಕರ್ತರಲ್ಲಿ ಹುರುಪು

11:22 PM Jun 08, 2024 | Team Udayavani |

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಪ್ರದರ್ಶನ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಹೊಡೆತ, ಐಎನ್‌ಡಿಐಎ ಒಕ್ಕೂಟ ದೂರವಿಟ್ಟಿದ್ದು, ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಸಿ.ಎಂ.ಇಬ್ರಾಹಿಂ ಅವರ ಬಂಡಾಯ, ಬಿಜೆಪಿ ಜತೆ ಮೈತ್ರಿ ನಡೆದರೂ ಹೆಚ್ಚು ಸೀಟು ಪಡೆಯಲು ಚೌಕಾಶಿ ಮಾಡಲಾಗದ ಸ್ಥಿತಿ, ಪ್ರಜ್ವಲ್‌ ರೇವಣ್ಣರ ಅಶ್ಲೀಲ ವೀಡಿಯೋ ಪ್ರಕರಣ ಹೀಗೆ ಕಹಿ ಘಟನೆ, ಮುಜುಗರಗಳಿಂದ ತತ್ತರಿಸಿದ್ದ ಜೆಡಿಎಸ್‌ಗೆ ಈ ಬಾರಿಯ ಲೋಕಸಭಾ ಫ‌ಲಿತಾಂಶವು ಹೊಸ ಚೈತನ್ಯ ತುಂಬಿದೆ.

Advertisement

ಲೋಕಸಭಾ ಚುನಾವಣೆಯ ತಂತ್ರಗಾರಿಕೆ ಹಾಗೂ ಮತ ವರ್ಗಾವಣೆ ಎರಡರಲ್ಲೂ ಸೈ ಎನಿಸಿಕೊಂಡಿರುವ ಜೆಡಿಎಸ್‌, ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ಗೆ “ತಲೆನೋವು’, ಮಿತ್ರ ಪಕ್ಷ ಬಿಜೆಪಿಗೆ “ಸಿಹಿ’ ನೀಡುವುದು ಖಚಿತ ಎಂದೇ ವಿಶ್ಲೇಷಿಸಲಾಗುತ್ತಿದೆ.

ಜೆಡಿಎಸ್‌ ತಾನು ಸ್ಪರ್ಧಿಸಿದ್ದ ಮಂಡ್ಯ, ಕೋಲಾರದಲ್ಲಿ ಗೆದ್ದು ಬೀಗಿದೆ. ಹಾಸನದಲ್ಲಿ ಸೋತು ಬಾಗಿದೆ. ಆದರೆ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ಮೈಸೂರು, ಬೆಂಗಳೂರು ಉತ್ತರ, ಉಡುಪಿ -ಚಿಕ್ಕಮಗಳೂರು, ಚಿತ್ರದುರ್ಗ, ಶಿವಮೊಗ್ಗ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಯ ಗೆಲುವಿನಲ್ಲಿ ಜೆಡಿಎಸ್‌ ಗೋಚರಿಸುತ್ತಿದೆ.

ಬಿಜೆಪಿ ವರಿಷ್ಠರಿಗೂ ಜೆಡಿಎಸ್‌ನ ಶಕ್ತಿ ಪರಿಚಯವಾಗಿದ್ದು, ಎಚ್‌.ಡಿ. ಕುಮಾರಸ್ವಾಮಿ ಕೇಂದ್ರದಲ್ಲಿ ಮಂತ್ರಿಯಾಗುವುದು ಬಹುತೇಕ ಖಚಿತವಾಗಿದೆ.

ಎಚ್‌ಡಿಕೆ ಆಕ್ರಮಣಕಾರಿ ಹೋರಾಟ?
ಕುಮಾರಸ್ವಾಮಿ ಕೇಂದ್ರ ಮಂತ್ರಿಯಾದರೆ ಪಕ್ಷ ಬಲವರ್ಧನೆ ಜತೆಗೆ ತನ್ನನ್ನು ಹಣಿ ಯಲು ಹೊರಟಿರುವ ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ್‌ ವಿರುದ್ಧ ಆಕ್ರಮಣಕಾರಿ ಹೋರಾಟಕ್ಕೆ ನಾಂದಿ ಹಾಡುತ್ತಾರೆ. ಹಳೆ ಮೈಸೂರು ಭಾಗದ ಒಕ್ಕಲಿಗ ರಾಜಕಾರಣದಲ್ಲಿ ಕಳೆದ ಒಂದು ವರ್ಷದಲ್ಲಿ ಡಿ.ಕೆ.ಶಿವಕುಮಾರ್‌ ಸಾಧಿಸಿದ್ದ ಹಿಡಿತ
ವನ್ನು ಸಡಿಲಗೊಳಿಸುವುದು ಇದರ ಮೊದಲ ಭಾಗವಾಗಿದೆ ಎನ್ನಲಾಗುತ್ತಿದೆ.

Advertisement

ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್‌ ಸೋದರನನ್ನು ಸೋಲಿಸಲು ಸಫ‌ಲರಾಗಿರುವ ಎಚ್‌ಡಿಕೆ, ಒಕ್ಕಲಿಗ ರಾಜಕಾರಣದ ಹೃದಯ ಎಂದೇ ಗುರುತಿಸಿಕೊಂಡಿರುವ ಮಂಡ್ಯದಲ್ಲೂ ಡಿಕೆಶಿ ಆಪ್ತ ಸ್ಟಾರ್‌ ಚಂದ್ರುವನ್ನು ಸೋಲಿಸಿ ತಮ್ಮ ಶಕ್ತಿಯನ್ನು ತೋರಿದ್ದರು.

ಸಿದ್ದರಾಮಯ್ಯಗೆ ಡಬಲ್‌ ಶಾಕ್‌!
ಸಿದ್ದರಾಮಯ್ಯ ಖುದ್ದು ಟಿಕೆಟ್‌ ನೀಡಿದ್ದ ತಮ್ಮ ತವರು ಜಿಲ್ಲೆ ಮೈಸೂರಿನ ಲಕ್ಷ್ಮಣ್‌, ಚಿಕ್ಕಬಳ್ಳಾಪುರಕ್ಕೆ ರಕ್ಷಾ ರಾಮಯ್ಯ, ತುಮಕೂರಿನ ಮುದ್ದಹನುಮೇ ಗೌಡ ಅವರನ್ನು ಸೋಲಿಸುವಲ್ಲಿ ಜೆಡಿಎಸ್‌ ಪ್ರಮುಖ ಪಾತ್ರವಹಿಸಿದೆ. ಅದೇ ರೀತಿ ವಿಧಾನ ಪರಿಷತ್‌ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ತಮ್ಮ ಪಕ್ಷ ತ್ಯಜಿಸಿ ಕಾಂಗ್ರೆಸ್‌ ಸೇರಿದ್ದ ದಕ್ಷಿಣ ಕ್ಷೇತ್ರದ ಮರಿತಿಬ್ಬೇ ಗೌಡರನ್ನು ಬಿಜೆಪಿ-ಜೆಡಿಎಸ್‌ ಮಣಿಸಿರುವುದು ಸಿದ್ದರಾಮಯ್ಯಗೆ ಡಬಲ್‌ ಶಾಕ್‌ ಆಗಿದೆ.

ಬಿಜೆಪಿಗೂ ಬ್ರೇಕ್‌
2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌-ಬಿಜೆಪಿ ಮೈತ್ರಿ ಬಗ್ಗೆ ಮಾತುಕತೆ ನಡೆದಿದ್ದರೂ ಹಳೆ ಮೈಸೂರು ಭಾಗದಲ್ಲಿ ಸಾಮರ್ಥ್ಯ ವೃದ್ಧಿಗೆ ಆಸೆಯಿಂದ ಬಿಜೆಪಿ ಮನಸ್ಸು ಮಾಡಿರಲಿಲ್ಲ. ಆದರೆ ಲೋಕಸಭೆಯಲ್ಲಿ ಕೇಂದ್ರ ವರಿಷ್ಠರ ತೀರ್ಮಾನಕ್ಕೆ ಎಲ್ಲರೂ ತಲೆಬಾಗಬೇಕಾಯಿತು. ಲೋಕಸಭೆಯಲ್ಲಿ ಹೆಚ್ಚು ಸೀಟ್‌ ಪಡೆದು ಗೆಲ್ಲುವ ಶಕ್ತಿ ಇಲ್ಲದಿದ್ದರಿಂದ ಸುಮ್ಮನಿದ್ದ ಜೆಡಿಎಸ್‌, ಈಗ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ, ಬಿಬಿಎಂಪಿ ಚುನಾವಣೆ, 2028ರಲ್ಲಿ ಬರುವ ವಿಧಾನಸಭಾ ಚುನಾವಣೆ ವೇಳೆ ಹೆಚ್ಚುವರಿ ಸೀಟ್‌ ಕೇಳುವುದು ನಿಶ್ಚಿತ. ಹೀಗಾಗಿ ಹಳೆ ಮೈಸೂರು ಭಾಗದಲ್ಲಿ ಹಿಡಿತ ಸಾಧಿಸಬೇಕೆಂಬ ಬಿಜೆಪಿ ಕನಸು ಸದ್ಯಕ್ಕೆ ನನಸಾಗುವುದು ಕಷ್ಟ ಎನ್ನಲಾಗುತ್ತಿದೆ.

 

Advertisement

Udayavani is now on Telegram. Click here to join our channel and stay updated with the latest news.

Next