Advertisement

ಜಾಲಹಳ್ಳಿ ವಸತಿ ನಿಲಯ ಅವ್ಯವಸ್ಥೆ

09:22 AM Mar 01, 2019 | Team Udayavani |

ದೇವದುರ್ಗ: ಬಯಲಲ್ಲೇ ಸ್ನಾನ, ಕುಡಿಯಲು ಶುದ್ಧ ನೀರಿಲ್ಲ, ಹಾವು-ಚೇಳು ಕಾಟ, ಕಿತ್ತೋದ ಬಾಗಿಲು, ಕಿಟಕಿಗಳು, ತಗಡಿನ ಶೆಡ್‌ನ‌ಲ್ಲಿ ಅಡುಗೆ ತಯಾರಿ ಇದು ತಾಲೂಕಿನ ಜಾಲಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್‌ ಪೂರ್ವ ಬಾಲಕರ ವಸತಿ ನಿಲಯದಲ್ಲಿನ ದುಸ್ಥಿತಿ.

Advertisement

ವಸತಿ ನಿಲಯದಲ್ಲಿ ಸೌಲಭ್ಯಗಳಿಗಿಂತ ಕೊರತೆಯೇ ಹೆಚ್ಚಿದೆ. ವಸತಿ ನಿಲಯದಲ್ಲಿ 5ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿದ್ದಾರೆ. ವಿದ್ಯಾರ್ಥಿಗಳಿಗೆ ಎರಡು ಜತೆ ಸಮವಸ್ತ್ರ ನೀಡಬೇಕಿತ್ತು. ಆದರೆ ಶೈಕ್ಷಣಿಕ ವರ್ಷ ಮುಗಿಯುತ್ತ ಬಂದರೂ ಪೂರೈಕೆ ಆಗಿಲ್ಲ. ಗುಣಮಟ್ಟದ ಊಟ ನೀಡುತ್ತಿಲ್ಲ. ಇಲ್ಲಿನ ಅವ್ಯವಸ್ಥೆ ಬಗ್ಗೆ ಹಲವು ಬಾರಿ ಹೋರಾಟ ನಡೆಸಿ ಅಧಿಕಾರಿಗಳ ಗಮನಕ್ಕೆ ತಂದರೂ ಭೇಟಿ ನೀಡಿ ಪರಿಶೀಲಿಸಿ ಭರವಸೆ ನೀಡಿ ಹೋಗುತ್ತಾರೆ. ಆದರೆ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತಿಲ್ಲ ಎಂಬುದು ವಿದ್ಯಾರ್ಥಿಗಳ ಅಳಲು.

ಏನೇನು ಸಮಸ್ಯೆ: ವಸತಿ ನಿಲಯ ಗ್ರಾಮದ ಹೊರವಲಯದಲ್ಲಿದ್ದು, ಸುತ್ತಲೂ ಜಾಲಿಗಿಡಗಳು ಬೆಳೆದಿವೆ. ಹಾವು, ಚೇಳುಗಳ ಭಯದಲ್ಲೇ ವಿದ್ಯಾರ್ಥಿಗಳು ಅಭ್ಯಾಸ ಮಾಡಬೇಕಿದೆ. ವಾರದಲ್ಲಿ ನಾಲ್ಕೈದು ಹಾವು ನುಗ್ಗುತ್ತವೆ. ಹಾವು-ಚೇಳು ಹೊಡೆಯುವುದೇ ಕೆಲಸವಾಗಿದೆ. ಸ್ನಾನಗೃಹ
ಇಲ್ಲದ್ದರಿಂದ ಬಯಲಲ್ಲೇ ವಿದ್ಯಾರ್ಥಿಗಳು ಸ್ನಾನ ಮಾಡುತ್ತಾರೆ.

ಶೌಚಾಲಯಗಳು ನಿರ್ವಹಣೆ ಕೊರತೆಯಿಂದ ಬಳಕೆಗೆ ಬಾರದಂತಾಗಿವೆ. ವಿದ್ಯಾರ್ಥಿಗಳು ಬಹಿರ್ದೆಸೆಗೆ ಬಯಲನ್ನೇ ಅವಲಂಬಿಸಿದ್ದೇವೆ. ಕಿಟಕಿ, ಬಾಗಿಲು ಹಾಳಾಗಿವೆ. ಇನ್ನು ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲದ್ದರಿಂದ ವಸತಿ ನಿಲಯದ ಪಕ್ಕದಲ್ಲೇ ಕೊಳಚೆ ನೀರು ನಿಲ್ಲುತ್ತಿದೆ. ಇದರಿಂದ ಸೊಳ್ಳೆಗಳ ಹಾವಳಿ ಹೆಚ್ಚಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.

ವಾರ್ಡನ್‌ ಬದಲಾವಣೆ: ಆರೇಳು ತಿಂಗಳಿಗೊಮ್ಮೆ ಇಲ್ಲಿನ ವಾರ್ಡನ್‌ ಬದಲಾಗುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಸಮರ್ಪಕ ಸೌಲಭ್ಯ ಸಿಗುತ್ತಿಲ್ಲ ಮತ್ತು ಇಲ್ಲಿನ ಸಮಸ್ಯೆಗಳು ನಿವಾರಣೆ ಆಗುತ್ತಿಲ್ಲ.

Advertisement

ಟಿನ್‌ ಶೆಡ್‌ನ‌ಲ್ಲಿ ಅಡುಗೆ: ವಸತಿ ನಿಲಯದಲ್ಲಿ ಅಡುಗೆಗೆ ಪ್ರತ್ಯೇಕ ಕೋಣೆ ಇಲ್ಲದ್ದರಿಂದ ನಿಲಯದ ಆವರಣದಲ್ಲಿ ಟಿನ್‌ ಶೆಡ್‌ನ‌ಲ್ಲಿ ಕಟ್ಟಿಗೆ ಬಳಸಿ ಅಡುಗೆ ಮಾಡಲಾಗುತ್ತಿದೆ. ಅಡುಗೆಗೆ ಗ್ಯಾಸ್‌ ಸಹಿತ ಪೂರೈಕೆ ಆಗುತ್ತಿಲ್ಲ. ಇನ್ನು ಊಟ, ಉಪಹಾರದಲ್ಲಿ ಗುಣಮಟ್ಟವೇ ಇಲ್ಲ. ಕೂಡಲೇ ಅಧಿಕಾರಿಗಳು
ವಸತಿ ನಿಲಯದ ಸಮಸ್ಯೆಗೆ ಪರಿಹರಿಸಬೇಕೆಂದು ಶಬ್ಬೀರ್‌ ಜಾಲಹಳ್ಳಿ ಆಗ್ರಹಿಸಿದ್ದಾರೆ.

ಮೇಲ್ವಿಚಾರಕರ ಹುದ್ದೆಗಳು ಖಾಲಿ ಇವೆ. ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುತ್ತಿದೆ. ವಾರ್ಡನ್‌ ಬದಲಾವಣೆ ಮಾಡಿದ್ದು, ವಿದ್ಯಾರ್ಥಿಗಳಿಗೆ ಸೌಲಭ್ಯ ಕಲ್ಪಿಸಲಾಗುವುದು.
  ದೇವಪ್ಪ ಯರಕಂಚಿ, ಬಿಸಿಎಂ ಇಲಾಖೆ ಅಧಿಕಾರಿ

ನಾಗರಾಜ ತೇಲ್ಕರ್‌

Advertisement

Udayavani is now on Telegram. Click here to join our channel and stay updated with the latest news.

Next