“ನೀರ್‌ದೋಸೆ’ ಚಿತ್ರದ ಯಶಸ್ಸಿನ ನಂತರ ನಿರ್ದೇಶಕ ವಿಜಯ ಪ್ರಸಾದ್ “ಲೇಡೀಸ್ ಟೈಲರ್’ ಸಿನಿಮಾ ಮಾಡುವುದಾಗಿ ಅನೌನ್ಸ್ ಮಾಡಿದ್ದರು. ಅದ್ಯಾವ ಗಳಿಗೆಯಲ್ಲಿ ಅವರು ಆ ಸಿನಿಮಾವನ್ನು ಘೋಷಿಸಿಕೊಂಡರೋ ಗೊತ್ತಿಲ್ಲ, ಆ ಸಿನಿಮಾ ಸಾಕಷ್ಟು ಗೊಂದಲಗಳಿಗಳಿಂದಲೇ ಸುದ್ದಿಯಾಯಿತೇ ಹೊರತು ಟೇಕಾಫ್ ಆಗಲೇ ಇಲ್ಲ. ಅನೇಕ ಹೀರೋಗಳ ಹೆಸರು ಕೇಳಿಬಂದು ಕೊನೆಗೆ ರವಿಶಂಕರ್ ಗೌಡ ಅಂತಿಮವಾಗಿದ್ದರು. ಹಾಗಾದರೆ, “ಲೇಡೀಸ್ ಟೈಲರ್’ ಮುಗಿಯಿತಾ ಎಂದು ನೀವು ಕೇಳಬಹುದು.
ಸದ್ಯ ವಿಜಯಪ್ರಸಾದ್ “ಲೇಡೀಸ್ ಟೈಲರ್’ ಅನ್ನು ಬದಿಗಿಟ್ಟು, ಹೊಸ ಸಿನಿಮಾವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಅದು “ತೋತಾಪುರಿ’. ಈ ಮೂಲಕ ಹಿಟ್ ಜೋಡಿ ಕೂಡಾ ಒಂದಾಗಿದೆ. ಹೌದು, “ನೀರ್‌ದೋಸೆ’ಯಂತಹ ಯಶಸ್ವಿ ಚಿತ್ರದ ನಂತರ ವಿಜಯ ಪ್ರಸಾದ್ ಹಾಗೂ ನಟ ಜಗ್ಗೇಶ್ “ತೋತಾಪುರಿ’ ಮೂಲಕ ಒಂದಾಗುತ್ತಿದ್ದಾರೆ. ಈ ಮೂಲಕ ಜಗ್ಗೇಶ್ ಅವರಿಗೆ ಮತ್ತೂಂದು ವಿಭಿನ್ನ ಚಿತ್ರ ಸಿಕ್ಕಂತಾಗಿದೆ. “ತೋತಾಪುರಿ’ ಚಿತ್ರಕ್ಕೆ “ತೊಟ್ ಕೀಳ್‌ಬೇಕಷ್ಟೇ’ ಎಂಬ ಟ್ಯಾಗ್‌ಲೈನ್ ಕೂಡಾ ಇದೆ.
ಚಿತ್ರಕ್ಕೆ ಶ್ರೀರಂಗಪಟ್ಟಣದಲ್ಲಿ ಮುಹೂರ್ತ ನಡೆಯಲಿದೆ. ಕೆ.ಎ.ಸುರೇಶ್ ಈ ಚಿತ್ರದ ನಿರ್ಮಾಪಕರು. “ಶಿವಲಿಂಗ’, “ರಾಜು ಕನ್ನಡ ಮೀಡಿಯಂ’ ನಂತಹ ಯಶಸ್ವಿ ಚಿತ್ರಗಳ ನಂತರ ಸುರೇಶ್ ಈಗ “ತೋತಾಪುರಿ’ಗೆ ಕೈ ಹಾಕಿದ್ದಾರೆ. ಎಲ್ಲಾ ಓಕೆ, “ತೋತಾಪುರಿ’ಯಲ್ಲಿ ವಿಜಯ ಪ್ರಸಾದ್ ಏನು ಹೇಳಲು ಹೊರಟಿದ್ದಾರೆಂದು ನೀವು ಕೇಳಬಹುದು. ಈ ಬಾರಿಯೂ ವಿಜಯಪ್ರಸಾದ್ ಒಂದು ವಿಭಿನ್ನವಾದ ಕಥೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.
ಕಾಮಿಡಿ, ಡ್ರಾಮಾ, ವಿಡಂಬನಾತ್ಮಕವಾಗಿ ಸಾಗುವ ಈ ಕಥೆಯಲ್ಲಿ ಜಗ್ಗೇಶ್ ಕೃಷಿಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಜಗ್ಗೇಶ್ ಅವರ ಗೆಟಪ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಚಿತ್ರದ ಶೀರ್ಷಿಕೆಯ ಬಗ್ಗೆ ಮಾತನಾಡುವ ನಿರ್ದೇಶಕ ವಿಜಯಪ್ರಸಾದ್, “ಟೈಟಲ್ ಕಥೆಗೆ ಅನುಗುಣವಾಗಿದೆ. ಶೀರ್ಷಿಕೆಯಲ್ಲಿ ಆಕರ್ಷಣೆ ಇರಬೇಕೆಂಬುದು ಒಂದು ಕಾರಣವಾದರೆ, ಕಥೆಗೆ “ತೋತಾಪುರಿ’ ತುಂಬಾ ಸೂಕ್ತವಾಗಿದೆ. ಸಿನಿಮಾ ನೋಡಿದ ಮೇಲೆ ನಿಮಗೆ ಮನದಟ್ಟಾಗುತ್ತದೆ’ ಎನ್ನುವುದು ವಿಜಯಪ್ರಸಾದ್ ಮಾತು.
ಇನ್ನು ಚಿತ್ರದ ಕುರಿತು ಟ್ವೀಟ್ ಮಾಡಿರುವ ಜಗ್ಗೇಶ್, “ಕನ್ನಡಿಗರಿಗೆ ನಗೆಯ ರಸದೌತಣ ನೀಡಿದ “ನೀರ್‌ದೋಸೆ’ಯ ನಮ್ಮಿಬ್ಬರ ಜೋಡಿ ಮತ್ತೆ ಒಂದಾಗಿದೆ. ಬಹಳ ಅದ್ಭುತ ಕಥೆ. “ನೀರ್ ದೋಸೆ’ಗಿಂತ ಎರಡು ಹೆಜ್ಜೆ ಮುಂದೆ ಎಂದು ಧೈರ್ಯವಾಗಿ ಹೇಳಬಲ್ಲೆ’ ಎಂದು ಜಗ್ಗೇಶ್ ಹೇಳಿಕೊಂಡಿದ್ದಾರೆ. “ತೋತಾಪುರಿ’ಯಲ್ಲೂ ಸುಮನ್ ರಂಗನಾಥ್ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.
ಉಳಿದಂತೆ ವೀಣಾ ಸುಂದರ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಚಿತ್ರಕ್ಕೆ ಅನೂಪ್ ಸೀಳೀನ್ ಸಂಗೀತ, ವಿಷ್ಣುವರ್ಧನ್ ಛಾಯಾಗ್ರಹಣವಿದೆ. ಮೊದಲ ಹಂತವಾಗಿ 15 ದಿನಗಳ ಕಾಲ ಶ್ರೀರಂಗಪಟ್ಟಣ, ಮೈಸೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಎಲ್ಲಾ ಓಕೆ, “ಲೇಡೀಸ್ ಟೈಲರ್’ ಮತ್ತೆ ಆರಂಭವಾಗುತ್ತಾ ಎಂದರೆ, “ಈ ಚಿತ್ರವನ್ನು ಮುಗಿಸಿಕೊಂಡು ಅದನ್ನು ಕೈಗೆತ್ತಿಕೊಳ್ಳುತ್ತೇನೆ’ ಎನ್ನುವುದು ವಿಜಯ ಪ್ರಸಾದ್ ಮಾತು.