ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಣ್ಣದ ಲೋಕದಲ್ಲಿ ಮೂರು ದಶಕಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಆನಂದ ಚಿತ್ರದ ಮೂಲಕ ಚಂದನವನದಲ್ಲಿ ಶುರುವಾದ ಶಿವಣ್ಣನ ಸಿನಿ ಪಯಣ, 30 ವರ್ಷಗಳನ್ನು ದಾಡಿ ಮಿಂಚಿನ ಓಟ ನಡೆಸಿದೆ. ಸನ್ ಆಫ್ ಬಂಗಾರದ ಮನುಷ್ಯನ ಈ ಸಾಧನೆಗೆ ಕನ್ನಡ ಚಿತ್ರರಂಗದಿಂದ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ.
ಕನ್ನಡದ ಹಿರಿಯ ನಟ ಹಾಗೂ ಅಣ್ಣಾವ್ರ ಕುಟುಂಬಕ್ಕೆ ಆಪ್ತರಾಗಿರುವ ನವರಸ ನಾಯಕ ಜಗ್ಗೇಶ್ ಕೂಡ ಶಿವಣ್ಣನಿಗೆ ಚಂದನೆಯ ಶುಭ ಕೋರಿದ್ದಾರೆ. ಜತೆಗೆ ಒಂದು ಇಂಟ್ರೆಸ್ಟಿಂಗ್ ಕಹಾನಿ ಕೂಡ ಹಂಚಿಕೊಂಡಿದ್ದಾರೆ. ಜಗ್ಗೇಶ್ ತಮ್ಮ ಟ್ವೀಟ್ ನಲ್ಲಿ ‘ದೊಡ್ಡ ನೋಟಿನ ಸಾಹುಕಾರ’ ಎಂದು ಬಣ್ಣಿಸಿದ್ದಾರೆ. ಜಗ್ಗೇಶ್ ಅವರು ಶಿವಣ್ಣನಿಗೆ ಹೀಗೆ ಸಂಬೋಧಿಸಿದ್ದೇಕೆ ಎಂಬುದಕ್ಕೆ ಸ್ಪಷ್ಟನೆ ಕೂಡ ನೀಡಿದ್ದಾರೆ.
ಕರುನಾಡು ಚಕ್ರವರ್ತಿ ಶಿವರಾಜ್ ಕುಮಾರ್ ಅವರಿಗೆ ‘ದೊಡ್ಡ ನೋಟಿನ ಸಾಹುಕಾರ’ ಎಂದು ಕರೆದಿದ್ದು ಅವರ ತಂದೆ ವರನಟ ಡಾ.ರಾಜಕುಮಾರ್ ಅವರಂತೆ. ಅಣ್ಣಾವ್ರ ಪಾಲಿಗೆ ಶಿವಣ್ಣ ದೊಡ್ಡ ನೋಟಿನ ‘ಸಾಹುಕಾರ’ರಾಗಿದ್ದರಂತೆ.
ಶಿವಣ್ಣನ ಜನನವಾದಾಗ ರಾಜಕುಮಾರ್ ಅವರು ತಮ್ಮ ಸಿನಿಮಾವೊಂದಕ್ಕೆ 1000 ರೂಪಾಯಿ ಸಂಭಾವನೆ ಪಡೆದಿದ್ದರಂತೆ. ಈ ಖುಷಿಯ ಜತೆಗೆ ಶಿವಣ್ಣನ ಆಗಮನ ಅವರ ಆನಂದಕ್ಕೆ ಪಾರವೇ ಇರದಂತೆ ಮಾಡಿತಂತೆ. ಈ ಸಂತಸ ಎಲ್ಲರೆದುರು ಹಂಚಿಕೊಂಡಿದ್ದರಂತೆ.
ಈ ವಿಚಾರ ಹಂಚಿಕೊಂಡಿರುವ ಜಗ್ಗಣ್ಣ, ರಾಜಣ್ಣನ ಮುದ್ದಿನಮಗ ಬಣ್ಣದ ಲೋಕದಲ್ಲಿ 35ವರ್ಷ ಪೂರೈಸಿದ್ದಾರೆ. ಅದು100ವರ್ಷ ಆಗುವಂತೆ ಕನ್ನಡಿಗರು ಹರಸಲಿ ಎಂದು ಅವರ ತಮ್ಮನಾಗಿ ಶುಭಹಾರೈಕೆ ತಿಳಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.