ರಾಘವೇಂದ್ರ ಸ್ವಾಮಿಗಳ ಆರಾಧನೆ ಸಂದರ್ಭದಲ್ಲಿ ಮಂತ್ರಾಲಯದಲ್ಲಿದ್ದರಂತೆ ಜಗ್ಗೇಶ್. ಬೃಂದಾವನದ ಎದುರು ಕೂತು, “ಬಣ್ಣದ ಹಸಿವಿದೆ, ಒಂದೊಳ್ಳೆಯ ಪಾತ್ರ ಬೇಕು ಗುರುಗಳೇ’ ಎಂದು ಕೇಳಿಕೊಂಡರಂತೆ. ಅದಾಗಿ ಕೆಲವೇ ದಿನಗಳ ನಂತರ ಅವರ ಮನೆಗೆ ಒಬ್ಬ ಹುಡುಗ ಬಂದು ಕಥೆ ಹೇಳಿದ್ದಾನೆ. ಕಥೆ ಕೇಳಿ ಜಗ್ಗೇಶ್ ಮೈಯಲ್ಲಿ ವೈಬ್ರೇಷನ್ ಆಯಿತಂತೆ. ತಕ್ಷಣವೇ ಆ ಚಿತ್ರ ಒಪ್ಪಿಕೊಂಡಿದ್ದಾರೆ. ಈಗ ಆ ಚಿತ್ರ ಶುರುವೂ ಆಗಿದೆ.
“8 ಎಂಎಂ’ ಮುಹೂರ್ತದ ಹಿಂದಿನ ದಿನವೇ ಮಾಧ್ಯಮದರೆದುರು ಮೋಷನ್ ಪೋಸ್ಟರ್ ಬಿಡಗುಡೆ ಮಾಡಿ, ಮಾತಿಗೆ ಕುಳಿತಿತು ಚಿತ್ರತಂಡ. ಈ ಚಿತ್ರವನ್ನು ಹರಿಕೃಷ್ಣ ಎನ್ನುವವರು ನಿರ್ದೇಶಿಸುತ್ತಿದ್ದು, ನಾರಾಯಣ ಸ್ವಾಮಿ ಇನೆ#ಂಟ್ ಪ್ರದೀಪ್, ಸಲೀಮ್ ಶಾ ನಿರ್ಮಾಪಕರು. ಚಿತ್ರಕ್ಕೆ ವಿನ್ಸೆಂಟ್ ಛಾಯಾಗ್ರಹಣ, ಜೂಡಾ ಸ್ಯಾಂಡಿ ಸಂಗೀತವಿದೆ.
ಎಲ್ಲರೂ ಅಂದುಕೊಂಡಂತೆ, ಇದು ತಮಿಳಿನ “8 ತೊಟ್ಟಕ್ಕಲ್’ ಚಿತ್ರದ ರೀಮೇಕ್ ಅಲ್ಲ ಎಂದು ಹೇಳಿದರು ಜಗ್ಗೇಶ್. “ಇದು ಜಪಾನೀಸ್ ಚಿತ್ರ “ಸ್ಟ್ರೇ ಡಾಗ್’ ಅಂತ. ಅದರಿಂದ ಸ್ಫೂರ್ತಿ ಪಡೆದು ಈ ಹುಡುಗ ಚಿತ್ರಕಥೆ ಮಾಡಿದ್ದಾರೆ. ಒಬ್ಬ ಕ್ರಿಮಿನಲ್ ಮತ್ತು ಪೊಲೀಸ್ ನಡುವಿನ ಮೈಂಡ್ ಗೇಮ್ ಕುರಿತ ಚಿತ್ರ ಇದು.
ವಿಶೇಷ ಎಂದರೆ, ನನ್ನನ್ನ ನನ್ನ ವಯಸ್ಸಿನಲ್ಲೇ ತೋರಿಸುತ್ತಿದ್ದಾರೆ. ನೆಗೆಟಿವ್ ಪಾತ್ರವಾದರೂ ಅಂತಾರಾತ್ಮದಲ್ಲಿ ಮಾನವೀಯ ಮೌಲ್ಯವಿರುವಂತಹ ಪಾತ್ರವದು. ಕೊನೆಯ ಸೀನ್ ಮಾತ್ರ ಬಹಳ ಸೂಪರ್ ಆಗಿದೆ. ನೋಡಿ ಫಿದಾ ಆಗಿಬಿಟ್ಟೆ. ಬಹಳ ದಿನಗಳ ನಂತರ ವಿಭಿನ್ನವಾದ ಪಾತ್ರ ಸಿಕ್ಕಿದೆ. ನನ್ನ ಮಟ್ಟಿಗೆ ಹೇಳುವುದಾದರೆ, ನನಗೆ ಒಂದು ಬದಲಾವಣೆ ಸಿಕ್ಕಿದೆ’ ಎನ್ನುತ್ತಾರೆ ಜಗ್ಗೇಶ್. ಇಲ್ಲಿ ಜಗ್ಗೇಶ್ ಅವರ ಹಳೆಯ ಬಾಡಿ ಲಾಂಗ್ವೇಜ್ ಹುಡುಕಿಕೊಂಡು ಹೋದರೆ ನಿರಾಶೆ ಖಂಡಿತ. ಏಕೆಂದರೆ, ಇಲ್ಲಿ ಜಗ್ಗೇಶ್ ಅವರ ಬಾಡಿ ಲಾಂಗ್ವೇಜ್ ಬದಲಾಗಲಿದೆ.
ಅವರು ಗಮನಿಸಿರುವಂತೆ, ಅವರು ಪಂಜರದ ಗಿಳಿಯಾಗಿಬಿಟ್ಟಿದ್ದರಂತೆ. “ನನಗೆ ಈಗಲೂ ಒಳ್ಳೆಯ ಪಾತ್ರ ಮಾಡಬೇಕು ಎಂಬ ಹಸಿವಿದೆ. ಆದರೆ, ಪಾತ್ರಗಳು ಮಾತ್ರ ಒಂದೇ ತರಹ ಸಿಗುತ್ತವೆ. ನಾನು ಈಗಲೂ ಅದೇ ತರಹ ಪಾತ್ರಗಳನ್ನು ಮಾಡಿದರೆ, ಜನ ಉಗೀತಾರೆ. ಹಾಗಾಗಿ ನನಗೆ ಒಂದು ಚೇಂಜ್‌ಓವರ್‌ನ ಅವಶ್ಯಕತೆ ಇದೆ ಮತ್ತು ಆ ಬದಲಾವಣೆ ಈ ಚಿತ್ರದಲ್ಲಿ ಸಿಕ್ಕಿದೆ. ಈ ಹುಡುಗ ನನ್ನಿಂದ ಏನನ್ನೋ ಮಾಡಿಬೇಕು ಅಂದ ಬಂದಿದ್ದಾನೆ. ಇನ್ನು ನಮ್ಮ ನಿರ್ಮಾಪಕರು ಸಹ, ಈ ಚಿತ್ರದಲ್ಲಿ ಜಗ್ಗೇಶ್ ಅವರು ಮಾಡಿದರೆ ಮಾತ್ರ ಚಿತ್ರ ನಿರ್ಮಿಸುತ್ತೇವೆ ಅಂತ ಹೇಳಿದರಂತೆ. ಇವರೆಲ್ಲರೂ ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ಮೋಸವಾಗದಂತೆ ಚೆನ್ನಾಗಿ ನಟಿಸುವುದೇ ನನ್ನ ಆದ್ಯತೆ’ ಎಂದರು ಜಗ್ಗೇಶ್. ನಿರ್ದೇಶಕ ಹರಿಕೃಷ್ಣಗೆ ಬಹಳಷು ಜನ, ಜಗ್ಗೇಶ್ ಒಪ್ಪುವುದಿಲ್ಲ ಎಂದು ಹೇಳಿದರಂತೆ. “ನಿರ್ಮಾಪಕರು ಸಹ ಜಗ್ಗೇಶ್ ಅವರು ಡೇಟ್ ಕೊಟ್ಟರೆ, ಚಿತ್ರ ನಿರ್ಮಿಸುವುದಕ್ಕೆ ಸಿದ್ಧ ಎಂದಿದ್ದರು. ಹೋಗಿ ಕಥೆ ಹೇಳಿದೆ. ಕಥ ಹೇಳುವಾಗ ಬಹಳ ನರ್ವಸ್ ಆಗಿದ್ದೆ. ಅವರು ಒಪ್ಪಿಕೊಂಡರು. ಅಕಿರಾ ಕುರೋಸಾವಾ ಅವರ “ಸ್ಟ್ರೇ ಡಾಗ್’ ಸ್ಫೂರ್ತಿ ಪಡೆದು ಈ ಚಿತ್ರ ಮಾಡುತ್ತಿದ್ದೇನೆ. ಬೇರೆ ಯಾವುದೇ ಸ್ಫೂರ್ತಿ ಇಲ್ಲ. ಇಲ್ಲಿ ಜಗ್ಗೇಶ್ ಅವರ ಜೊತೆಗೆ ವಸಿಷ್ಠ ಸಿಂಹ, ಅತುಲ್ ಕುಲಕರ್ಣಿ ಮುಂತಾದವರು ನಟಿಸುತ್ತಿದ್ದಾರೆ. ಜಗ್ಗೇಶ್ ಅವರಿಗೆ ನಾಯಕಿ ಇರುವುದಿಲ್ಲ ಎಂದರು. ಚಿತ್ರದ ಬಹುತೇಕ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಲಾಗುತ್ತದಂತೆ. ಅಮರ್-ಅಕºರ್-ಆ್ಯಂಟೋನಿ ತರಹ ಇರುವ ನಿರ್ಮಾಪಕರು ಚಿತ್ರ ಮಾಡುತ್ತಿರುವುದುಕ್ಕೆ ಜಗ್ಗೇಶ್ ಅವರು ಕಾರಣವೆಂದರು. ಅಷ್ಟೇ ಅಲ್ಲ, ತಮ್ಮ ಮೊದಲ ಪ್ರಯತ್ನಕ್ಕೆ ಸಹಕಾರ ಮತ್ತು ಪ್ರೋತ್ಸಾಹಗಳನ್ನು ಕೇಳಿದರು.
– ಚೇತನ್ ನಾಡಿಗೇರ್