ನವರಸ ನಾಯಕ ಜಗ್ಗೇಶ್ ನಾಯಕರಾಗಿರುವ “ತೋತಾಪುರಿ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಸೆ.30ರಂದು ತೆರೆಕಾಣುತ್ತಿದೆ. ಜಗ್ಗೇಶ್ ಕೆರಿಯರ್‌ನಲ್ಲಿ ವಿಭಿನ್ನ ಪಾತ್ರವಾಗಿ, ಚಿತ್ರವಾಗಿ “ತೋತಾಪುರಿ’ ಗಮನ ಸೆಳೆಯಲ್ಲಿದೆ. ಸಿನಿಮಾ ರಂಗಕ್ಕೆ ಕಾಲಿಟ್ಟಾಗಿ ನಿಂದಲೂ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ. ಅವರು ನಾಯಕರಾಗಿ ನಟಿಸಿರುವ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿ ದಾಖಲೆ ಬರೆದಿದೆ. ಇದೀಗ ಅವರ ಸಿನಿ ಕೆರೆಯರ್ ನಲ್ಲೇ ಮೊದಲ ಬಾರಿಗೆ ಎರಡು ಭಾಗಗಳಲ್ಲಿ ನಟಿಸಿ ರುವ ಬಿಗ್ ಬಜೆಟ್ ಮತ್ತು ಬೃಹತ್ ತಾರಾಬಳಗ ವಿರುವ “ತೋತಾಪುರಿ’ ಸಿನಿಪ್ರೇಮಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.
“ತೋತಾಪುರಿ’ ಎರಡು ಭಾಗಗಳಲ್ಲಿ ತಯಾರಾಗಿದ್ದು, ನೂರಾರು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಕಾಮಿಡಿ ಸಿನಿಮಾವೊಂದಕ್ಕೆ ಈ ಪರಿ ಶೂಟಿಂಗ್ ಮಾಡಿರುವುದು ಒಂದೆಡೆಯಾದರೆ, ಜಗ್ಗೇಶ್ ನಟಿಸಿರುವ ಸಿನಿಮಾಗಳ ಪೈಕಿ “ತೋತಾಪುರಿ’ ಬಿಗ್ ಬಜೆಟ್ ಸಿನಿಮಾ ಎಂಬುದು ಗಮನಾರ್ಹ. ಹಾಗೆಯೇ ಚಿತ್ರದಲ್ಲಿ ಸಾಕಷ್ಟು ತಾರಾಸಮೂಹವೇ ಇದೆ ಎಂಬುದು ಮತ್ತೂಂದು ಗಮನಾರ್ಹ ವಿಷಯ. ಡಾಲಿ ಧನಂಜಯ್, ಅದಿತಿ ಪ್ರಭುದೇವ, ಸುಮನ್ ರಂಗನಾಥ್, ವೀಣಾ ಸುಂದರ್, ದತ್ತಣ್ಣ, ಹೇಮಾದತ್ ಸೇರಿದಂತೆ ಅನೇಕ ಕಲಾವಿದರು “ತೋತಾಪುರಿ’ ತಾರಾಗಣದಲ್ಲಿದ್ದಾರೆ.
ಇದನ್ನೂ ಓದಿ:ಕಾಶ್ಮೀರದಲ್ಲಿ ಮಹಾರಾಜ ಹರಿ ಸಿಂಗ್ ಜನ್ಮದಿನದಂದು ಸರಕಾರಿ ರಜೆ: ಕರಣ್ ಸಿಂಗ್ ಹರ್ಷ
ಈ ಹಿಂದೆ “ನೀರ್‌ದೋಸೆ’ ಮೂಲಕ ಕಮಾಲ್ ಮಾಡಿದ್ದ ಜಗ್ಗೇಶ್ ಹಾಗೂ ವಿಜಯಪ್ರಸಾದ್ ಜೋಡಿ “ತೋತಾಪುರಿ’ ಮುಖೇನ ಮತ್ತೆ ಒಂದಾಗಿದೆ. ಜಗ್ಗೇಶ್ ಟೈಮಿಂಗ್ಸ್, ವಿಜಯಪ್ರಸಾದ್ ಬರವಣಿಗೆ ಶೈಲಿ “ತೋತಾಪುರಿ’ಯನ್ನು ಮತ್ತೂಂದು ಹಂತಕ್ಕೆ ಕೊಂಡೊಯ್ಯಲಿದೆ ಎಂಬುದು ಈಗಾಗಲೇ ಹಾಡು ಹಾಗೂ ಟ್ರೇಲರ್ ನೋಡಿದವರ ಅನಿಸಿಕೆ.
ಈ ವರ್ಷ ತೆರೆಕಂಡಿರುವ ಕನ್ನಡ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. “ಕೆಜಿಎಫ್-2′, “777 ಚಾರ್ಲಿ’, “ವಿಕ್ರಾಂತ್ ರೋಣ’ ಮುಂತಾದ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜೋರಾಗಿ ಸೌಂಡು ಮಾಡಿದ್ದು, ಇದೀಗ ತೋತಾಪುರಿ ಸಹ ಅದೇ ಹಾದಿಯಲ್ಲಿ ಸಾಗುವ ಎಲ್ಲಾ ಲಕ್ಷಣಗಳಿವೆ ಎಂಬ ಮಾತುಗಳು ಕೇಳಿಬರುತ್ತಿವೆ.
“ಎರಡನೇ ಮದುವೆ’, “ಗೋವಿಂದಾಯ ನಮಃ’, “ಶ್ರಾವಣಿ ಸುಬ್ರಮಣ್ಯ’, “ಆರ್‌ಎಕ್ಸ್ ಸೂರಿ’, “ಶಿವಲಿಂಗ’, “ರಾಜು ಕನ್ನಡ ಮೀಡಿಯಂ’ ಎಂಬ ಬೃಹತ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಕೆ.ಎ.ಸುರೇಶ್, “ತೋತಾಪುರಿ’ ಸಿನಿಮಾವನ್ನು “ಮೋನಿಫಿಕ್ಸ್ ಸ್ಟುಡಿಯೋಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.
ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿರುವ ಈ ಚಿತ್ರದ ಹಾಡುಗಳಿಗೆ ವಿಜಯಪ್ರಸಾದ್ ಸಾಹಿತ್ಯವಿದೆ. ನಿರಂಜನ್ ಬಾಬು ಛಾಯಾಗ್ರಹಣ ಹಾಗೂ ಸುರೇಶ್ ಅರಸ್ ಸಂಕಲನ ಈ ಚಿತ್ರಕ್ಕದೆ.