ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಏಕೆಂದರೆ ಅವರು ಕ್ಷಮಿಸುವಂತೆ ಯಾರನ್ನೂ ಕೇಳಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜಗದೀಶ್ ಶೆಟ್ಟರ್ ಅವರನ್ನು ಕ್ಷಮಿಸದಂತೆ ಹೇಳಿರುವುದು ಬೇರೆ ರೂಪದಲ್ಲಿ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಿತ್ ಶಾ ಅವರು ಶೆಟ್ಟರ್ ಅವರನ್ನು ಕ್ಷಮಿಸಬಾರದು ಎನ್ನುವ ಅರ್ಥ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಬೇಕು ಎಂಬುದಾಗಿದೆ ವಿನಾ ಬೇರೆ ಯಾವುದೇ ಅರ್ಥವಿಲ್ಲ. ಕ್ಷಮಿಸಬಾರದು ಎನ್ನುವುದಾದರೆ ಅವರು ನಮಗೆ ಕ್ಷಮೆ ಕೇಳಿಲ್ಲವಾದ್ದರಿಂದ ಕ್ಷಮಿಸುವ ಪ್ರಮೇಯ ಬಂದಿಲ್ಲ ಎಂದರು.
ಮುಸ್ಲಿಂ ಮೀಸಲಾತಿ ರದ್ದು ಮಾಡಿರುವ ರಾಜ್ಯ ಸರಕಾರದ ಕ್ರಮಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿಲ್ಲ. ಈ ಕುರಿತು ಸಂಬಂಧಿಸಿದ ವಕೀಲರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದೇನೆ. ವಿಚಾರಣೆ ಪೂರ್ಣಗೊಳ್ಳುವವರೆಗೂ ಯಾವುದೇ ಅನುಷ್ಠಾನ ಮಾಡುವುದಿಲ್ಲ ಎಂದು ಪೀಠಕ್ಕೆ ಹೇಳಿದ್ದೇವೆ. ವಿಚಾರಣೆಯನ್ನು ಮೇ 9ಕ್ಕೆ ಮುಂದೂಡಲಾಗಿದೆ ಅಷ್ಟೆ. ಹಿಂದೆ ಯಾವ ಸ್ಥಿತಿಯಲ್ಲಿತ್ತೋ ಯಥಾಸ್ಥಿತಿ ಮುಂದುವರಿದಿದೆ. ಸಂವಿಧಾನ ವಿಸ್ತೃತ ಪೀಠ ಈ ಹಿಂದೆ ಧರ್ಮ ಆಧಾರಿತ ಮೀಸಲಾತಿ ರದ್ದುಗೊಳಿಸಿತ್ತು. ಹೀಗಾಗಿ ಇದನ್ನು ಕೂಡ ರದ್ದುಗೊಳಿಸಿ ನಮ್ಮ ನಿರ್ಧಾರವನ್ನು ಎತ್ತಿ ಹಿಡಿಯಲಿದ್ದು, ಇದನ್ನು ಜಾರಿಗೆ ತರುತ್ತೇವೆ ಎಂದರು.