ಬೆಂಗಳೂರು: ಬಿಜೆಪಿಯ ಮೂರು ದಶಕಗಳ ನಂಟನ್ನು ಕಡಿದು ಕಾಂಗ್ರೆಸ್ ಸೇರ್ಪಡೆಯಾಗಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಕೈ ಪಾಳಯದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಸೋಮವಾರ ಬೆಳಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ಹಿರಿಯ ಮುಖಂಡರ ಸಮ್ಮುಖದಲ್ಲಿ ಜಗದೀಶ್ ಶೆಟ್ಟರ್ ಅವರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.
ಜಗದೀಶ್ ಶೆಟ್ಟರ್ ಅವರು ತಾನು ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಿದ್ದ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಿಂದಲೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಶೆಟ್ಟರ್ ಅವರಿಗೆ ಬಿ ಫಾರಂ ವಿತರಿಸಿದರು.
ಬಳಿಕ ಮಾತನಾಡಿದ ಅವರು, ಇಂದು ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದೇನೆ. ಅನೇಕರಿಗೆ ಆಶ್ಚರ್ಯವಾಗಿರಬಹುದು. ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕರಾಗಿದ್ದವರು ಕಾಂಗ್ರೆಸ್ ಸೇರುತ್ತಿರುವುದೇಕೆ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತಿದೆ. ಅನೇಕ ತಿಂಗಳಿಂದ ಹಿರಿಯ ನಾಯಕನಾಗಿ ನನಗೆ ಆಗಿರುವ ವೇದನೆ ಯಾರೂ ಅರ್ಥ ಮಾಡಿಕೊಂಡಿಲ್ಲ. ನಾನು ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದ್ದೆ. ಉತ್ತರ ಕರ್ನಾಟಕದಲ್ಲಿ ಪಕ್ಷಕ್ಕೆ ಸಂಘಟನೆ ಮಾಡಿದ್ದೆ. ಬಿಜೆಪಿ ನನಗೆ ಕೊಟ್ಟ ಸ್ಥಾನಮಾನ, ಅಧಿಕಾರಕ್ಕೆ ಪ್ರತಿಯಾಗಿ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷ ಕಟ್ಟಿ ಬೆಳೆಸಿದ್ದೇನೆ. ಹುಬ್ಬಳ್ಳಿ ಯಲ್ಲಿ 6 ಬಾರಿ ಶಾಸಕನಾಗಿ ಗೆದ್ದಿದ್ದೇನೆ. ಈಗ 7ನೇ ಬಾರಿ ಸ್ಪರ್ಧೆ ಮಾಡಲಿದ್ದೇನೆ ಎಂದರು.
ಇದನ್ನೂ ಓದಿ:ಅಗ್ನಿಕುಂಡ,ಶಿರಚ್ಛೇದ.. ದೇವರಿಗಾಗಿ ತಮ್ಮ ಶಿರವನ್ನೇ ಅರ್ಪಿಸಿ ದೈವ ಭಕ್ತಿ ಮೆರೆದ ದಂಪತಿ.!
ನನಗೆ ಅಧಿಕಾರ ಮುಖ್ಯವಾಗಿದ್ದರೆ ಬೊಮ್ಮಾಯಿ ಅವರ ಸರ್ಕಾರದಲ್ಲಿ ನನಗೆ ಮಂತ್ರಿ ಸ್ಥಾನ ಬೇಡ ಎಂದು ಸ್ವಯಂಕೃತ ಹೇಳಿಕೆ ನೀಡಿದ್ದೆ. ಅಧಿಕಾರ ಬೇಕಾಗಿದ್ದರೆ ಆಗಲೇ ಹಠಮಾಡಿ ಮಂತ್ರಿಗಿರಿ ಪಡೆಯುತ್ತಿದ್ದೆ. ಕೊನೆಯದಾಗಿ ನನಗೆ ಅಪಮಾನವಾಗಿದ್ದು, ಅದನ್ನು ಸರಿಪಡಿಸಲು ಶಾಸಕರಾಗಿ ಸ್ಪರ್ಧಿಸುತ್ತೇನೆ. ಆರು ತಿಂಗಳ ನಂತರ ಗೌರವಯುತವಾಗಿ ರಾಜೀನಾಮೆ ನೀಡುತ್ತೇನೆ ನಂತರ ನೀವು ಯಾರನ್ನು ಬೇಕಾದರೂ ಶಾಸಕರನ್ನಾಗಿ ಮಾಡಿಕೊಳ್ಳಿ ಎಂದು ಹೇಳಿದೆ. ಆದರೂ ಅವರ ಒಪ್ಪಲಿಲ್ಲ. ನನ್ನನ್ನು ರಾಜಕೀಯವಾಗಿ ಗೌರವಯುತವಾಗಿ ಕಳುಹಿಸಿ ಎಂದು ಕೇಳಿದರೂ ಅದಕ್ಕೆ ಅವಕಾಶ ನೀಡಲಿಲ್ಲ ಎಂದು ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದರು.