ಪಶ್ಚಿಮ ಬಂಗಾಲದ ಹಾಲಿ ರಾಜ್ಯಪಾಲ ಜಗದೀಪ್ ಧನ್ಕರ್, ಎನ್‌ಡಿಎ ಉಪರಾಷ್ಟ್ರಪತಿ ಅಭ್ಯರ್ಥಿ. ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಜತೆಗಿನ ಮುಸುಕಿನ ಗುದ್ದಾಟದಿಂಲೇ ಸುದ್ದಿ ಯಾದವರು.
ಮೂಲತಃ ರಾಜಸ್ಥಾನದವರಾದ ಧನ್ಕರ್ ಅವರು, 1951ರ ಮೇ 18ರಂದು ಕಿಥಾನಾ ಎಂಬ ಹಳ್ಳಿಯಲ್ಲಿ ಜನಿಸಿದವರು. ಚಿತ್ತೋರ್‌ಘಡದ ಸೈನಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಮುಗಿಸಿದ ಜಗದೀಪ್, ಜೈಪುರದಲ್ಲಿರುವ ರಾಜಸ್ಥಾನ
ವಿಶ್ವವಿದ್ಯಾನಿಲಯದಲ್ಲಿ ಪದವಿ ಪೂರೈಸಿದ್ದಾರೆ.
ಕಾನೂನು ಪದವಿ ಮುಗಿಸಿರುವ ಇವರು, ರಾಜಸ್ಥಾನ ಬಾರ್ ಕೌನ್ಸಿಲ್‌ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಜೈಪುರ ಮಹಾರಾಜ ಕಾಲೇಜಿನಲ್ಲಿ ಭೌತಶಾಸ್ತ್ರದಲ್ಲಿ ಪದವಿ ಮತ್ತು ಎಲ್‌ಎಲ್‌ಬಿ ವ್ಯಾಸಂಗ ಮಾಡಿದ್ದಾರೆ. ಅಂದ ಹಾಗೆ ಇವರ ಪತ್ನಿಯ ಹೆಸರು ಸುದೇಶ್ ಧನ್ಕರ್ ಹಾಗೂ ಓರ್ವ ಪುತ್ರಿ ಇದ್ದಾರೆ.
ರಾಜಸ್ಥಾನ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನಲ್ಲಿ ವಕೀಲರಾಗಿ ಸೇವೆ ಸಲ್ಲಿಸಿರುವ ಇವರು ಜನತಾ ದಳದ ಮೂಲಕ ರಾಜಕೀಯ ಪ್ರವೇಶಿಸಿದ್ದರು. ಬಳಿಕ ಬಿಜೆಪಿ ಸೇರಿ ಇಲ್ಲಿ ನಾನಾ ಹುದ್ದೆಗಳನ್ನು ನಿರ್ವಹಿಸಿದ್ದಾರೆ.
1989-91ರ ಅವಧಿಯಲ್ಲಿ ಜನತಾದಳದಿಂದ ಝುಂಝುನು ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದರು. ಆಗ ಚಂದ್ರಶೇಖರ್ ಅವರು ಪ್ರಧಾನಿಯಾಗಿದ್ದು, ಅವರ ಸರಕಾರದಲ್ಲಿ ಸಂಸದೀಯ ವ್ಯವಹಾರಗಳ ಇಲಾಖೆಯ ಸಹಾಯಕ ಸಚಿವ ರಾಗಿದ್ದರು.
1993ರಿಂದ 98ರ ವರೆಗೆ ಕಿಶಾನ್‌ಘಡದ ವಿಧಾನಸಭೆ ಕ್ಷೇತ್ರದ ಸದಸ್ಯರಾಗಿದ್ದರು. 2019ರ ಜು. 30ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು, ಇವರನ್ನು ಪಶ್ಚಿಮ ಬಂಗಾಲದ ರಾಜ್ಯಪಾಲರಾಗಿ ನಿಯುಕ್ತಿಗೊಳಿಸಿದ್ದರು.