ಅಮರಾವತಿ: ಆಂಧ್ರಪ್ರದೇಶದಲ್ಲಿ ತೆಲುಗು ದೇಶಂನ ಚಂದ್ರಬಾಬು ನಾಯ್ಡುರನ್ನು ಸೋಲಿಸಿ ಬಹುಮತ ಪಡೆದ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ವೈ ಎಸ್ ಜಗನ್‌ಮೋಹನ ರೆಡ್ಡಿ ಗುರುವಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ರಾಜ್ಯಪಾಲ ಇ.ಎಸ್.ಎಲ್ ನರಸಿಂಹನ್ ಪ್ರಮಾಣ ವಚನ ಬೋಧಿಸಿದರು. ಕೆಲವೇ ದಿನಗಳ ಹಿಂದೆ ಲೋಕಸಭೆ ಚುನಾವಣೆಯ ಜೊತೆಗೇ ನಡೆದ ವಿಧಾನ ಸಭೆ ಚುನಾವಣೆಯಲ್ಲಿ 175 ಸದಸ್ಯ ಬಲದ ರಾಜ್ಯದಲ್ಲಿ 151 ಕ್ಷೇತ್ರಗಳಲ್ಲಿ ವೈಎಸ್‌ಆರ್ ಪಕ್ಷ ಗೆಲುವು ಸಾಧಿಸಿತ್ತು. ಲೋಕಸಭೆಗೂ ವೈಎಸ್‌ಆರ್‌ಸಿಯಿಂದ 22 ಸಂಸದರು ಆಯ್ಕೆಯಾಗಿದ್ದಾರೆ.
ವಿಜಯವಾಡದ ಐಜಿಎಂಸಿ ಸ್ಟೇಡಿಯಂನಲ್ಲಿ ಮಧ್ಯಾಹ್ನ 12.23 ಕ್ಕೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಗುರುವಾರ ಕೇವಲ ಜಗನ್ ಪ್ರಮಾಣ ವಚನ ಸ್ವೀಕರಿಸಿದ್ದು , ಸಂಪುಟದಲ್ಲಿ ಸೇರಲಿರುವ ಇತರರು ಜೂನ್ 7 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೂಡಲೇ ಬಡವರಿಗೆ ನೀಡಲಾಗುವ ಪಿಂಚಣಿ ಮೊತ್ತವನ್ನು 1 ಸಾವಿರ ರೂ.ಗಳಿಂದ 3 ಸಾವಿರ ರೂ.ಗಳ ವರೆಗೆ ಪಿಂಚಣಿ ನೀಡುವ ಆದೇಶಕ್ಕೆ ಸಹಿ ಹಾಕಿದ್ದಾರೆ. ಇದರ ಜತೆಗೆ 4 ಲಕ್ಷ ಗ್ರಾಮ ಸ್ವಯಂಸೇವಕರನ್ನು ನೇಮಕ ಮಾಡು ವುದರ ಬಗ್ಗೆಯೂ ಆದೇಶ ಹೊರಡಿಸಿದ್ದಾರೆ. ಅವರು ಆಯಾ ಗ್ರಾಮದ ಕಚೇರಿಗಳಲ್ಲಿ ಕೆಲಸ ಮಾಡಲಿದ್ದಾರೆ.
ಕಾರ್ಯಕ್ರಮಕ್ಕೆ ತೆಲಂಗಾಣ ಸಿಎಂ ಕೆ ಚಂದ್ರಶೇಖರ ರಾವ್, ಡಿಎಂಕೆ ಮುಖಂಡ ಎಂ.ಕೆ.ಸ್ಟಾಲಿನ್ ಹಾಗೂ ಪುದುಚೇರಿಯ ಆರೋಗ್ಯ ಸಚಿವ ಮಲ್ಲಾಡಿ ಕೃಷ್ಣ ರಾವ್ ಹಾಜರಿದ್ದರು. ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಜಗನ್‌ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶುಭ ಕೋರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಆಂಧ್ರ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದಕ್ಕೆ ಅಭಿನಂದನೆಗಳು. ಕೇಂದ್ರ ಸರ್ಕಾರದಿಂದ ಸಂಪೂರ್ಣ ನೆರವನ್ನು ನಾವು ಒದಗಿಸುತ್ತೇವೆ. ಆಂಧ್ರ ಪ್ರದೇಶವನ್ನ ಹೊಸ ಎತ್ತರಕ್ಕೆ ಕೊಂಡೊಯ್ಯಲು ನಾವು ಒಟ್ಟಾಗಿ ಶ್ರಮಿಸೋಣ ಎಂದು ಟ್ವೀಟ್ ಮಾಡಿದ್ದಾರೆ.