ಹೈದರಾಬಾದ್: ಆಂಧ್ರಪ್ರದೇಶದಲ್ಲಿ ಆಡಳಿತಾರೂಢ ವೈಎಸ್ ಆರ್ ಕಾಂಗ್ರೆಸ್ ಪಕ್ಷ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜಯಭೇರಿ ಗಳಿಸಿರುವುದಾಗಿ ವರದಿ ತಿಳಿಸಿದೆ. ಜಿಲ್ಲಾ ಪರಿಷತ್, ಮಂಡಲ್ ಪರಿಷತ್ ಚುನಾವಣೆಯಲ್ಲಿ ವೈಎಸ್ ಆರ್ ಭರ್ಜರಿ ಗೆಲುವು ಸಾಧಿಸಿದೆ.
ಇದನ್ನೂ ಓದಿ:“ಸಮಯ ಎಲ್ಲದ್ದಕ್ಕೂ ಉತ್ತರ ನೀಡಲಿದೆ”: ಐಟಿ ದಾಳಿಗೆ ನಟ ಸೋನು ಸೂದ್ ಪ್ರತಿಕ್ರಿಯೆ
ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ ಆರ್ ಕಾಂಗ್ರೆಸ್ ಪಕ್ಷ ಸ್ಥಳೀಯ ಸಂಸ್ಥೆಯ ಒಟ್ಟು 515 ಸ್ಥಾನಗಳಲ್ಲಿ 502ರಲ್ಲಿ ಜಯಗಳಿಸಿದೆ. ಅಷ್ಟೇ ಅಲ್ಲ ಮಂಡಲ್ ಪರಿಷತ್ ಗೆ ನಡೆದ ಚುನಾವಣೆಯಲ್ಲಿಯೂ ದಾಖಲೆ ಬರೆದಿದೆ. 10047 ಕ್ಷೇತ್ರಗಳಲ್ಲಿ ವೈಎಸ್ ಆರ್ 5,998 ಕ್ಷೇತ್ರಗಳಲ್ಲಿ ಜಯಗಳಿಸಿದೆ ಎಂದು ವರದಿ ವಿವರಿಸಿದೆ.
ಮಾಜಿ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ 826 ಮಂಡಲ್ ಪರಿಷತ್ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕೇವಲ ಆರು ಜಿಲ್ಲಾ ಪರಿಷತ್ ಕ್ಷೇತ್ರಗಳಲ್ಲಿ ಜಯಗಳಿಸಿದ್ದು, ರಾಜ್ಯದಲ್ಲಿ ಟಿಡಿಪಿ ಧೂಳೀಪಟವಾಗಿದೆ ಎಂದು ವರದಿ ಹೇಳಿದೆ.
ಲೋಕಸಭೆಯಲ್ಲೂ ವೈಎಸ್ ಆರ್ ಸಿ ಪಕ್ಷ ಹೆಚ್ಚಿನ ಸ್ಥಾನ ಹೊಂದಿದ್ದು, ರಾಜ್ಯ, ಸ್ಥಳೀಯ ಸಂಸ್ಥೆಯಲ್ಲಿಯೂ ವೈಎಸ್ ಆರ್ ಪಕ್ಷ ಭರ್ಜರಿ ಸ್ಥಾನ ಗಳಿಸಿದೆ. ಚಂದ್ರಬಾಬು ನಾಯ್ಡು ಆಯ್ಕೆಯಾಗಿರುವ ಕುಪ್ಪಂ ವಿಧಾನಸಭಾ ಕ್ಷೇತ್ರದಲ್ಲಿ ವೈಎಸ್ ಆರ್ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದೆ.