Advertisement

ಶ್ವಾನಗಳ ಕಾಟ; ಜನರ ಪರದಾಟ !

12:12 PM Mar 13, 2019 | Team Udayavani |

ಜಗಳೂರು: ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಸೂಕ್ತ ಕ್ರಮಕೈಗೊಳ್ಳುವಲ್ಲಿ ಪಟ್ಟಣ ಪಂಚಾಯತ್‌ ಅಧಿಕಾರಿಗಳು ವಿಫಲರಾಗಿದ್ದಾರೆ. ಪಟ್ಟಣದಲ್ಲಿ ಬೀದಿ ನಾಯಿಗಳ ವಿಪರೀತ ಹಾವಳಿಯಿಂದಾಗಿ ವಾಹನ ಸವಾರರು ಸೇರಿದಂತೆ ದಾರಿ ಹೋಕರು ರಸ್ತೆಗಳಲ್ಲಿ ಸಂಚರಿಸುವುದೇ ದುಸ್ತರವಾಗಿದೆ. ಪ್ರತಿಯೊಂದು ಬೀದಿಗಳಲ್ಲಿಯೂ ಬೀದಿ ನಾಯಿಗಳದ್ದೇ ದರ್ಬಾರು.

Advertisement

ಸುಮಾರ 300ಕ್ಕೂ ಅಧಿಕ ಬೀದಿ ನಾಯಿಗಳು ಪಟ್ಟಣದಲ್ಲಿದ್ದು, ದಾರಿ ಹೋಕರಿಗೆ, ವಾಹನ ಸವಾರರಿಗೆ ತೊಂದರೆ ನೀಡುತ್ತಿವೆ. ಮಕ್ಕಳು ಕೈಯಲ್ಲಿ ಪದಾರ್ಥ ಹಿಡಿದುಕೊಂಡು ಹೋಗುತ್ತಿದ್ದರೆ ಕಿತ್ತುಕೊಂಡು ಹೋಗುತ್ತಿವೆ. ವಾಹನ ಸವಾರರ ಮೇಲೆ ಹಿಂಡುಗಟ್ಟಲೇ ಒಮ್ಮೆಲೇ ನುಗ್ಗುತ್ತವೆ. ಇದರಿಂದ ಜನರು ಸಂಚರಿಸುವುದೇ ಕಷ್ಟವಾಗಿದೆ.

ಸಂಚಾರಕ್ಕೆ ಅಡಚಣೆ: ರಸ್ತೆಯಲ್ಲಿ ಬೈಕ್‌ ಮತ್ತಿತರೆ ಲಘು ವಾಹನಗಳು ಬಂದರೆ ಹಿಂಬಾಲಿಸಿಕೊಂಡು ಓಡಿ ಹೋಗುತ್ತವೆ. ವಾಹನ ಸವಾರರು ಹೆದರಿಕೊಂಡು ಆಯತಪ್ಪಿ ಬಿದ್ದಿದ್ದಾರೆ. ಅಲ್ಲದೆ ಶ್ವಾನಗಳು ಸಹ ದಾಳಿ ಮಾಡುತ್ತವೆ. ಯಾವುದೇ ಬಡಾವಣೆಗೆ ಹೋದರೂ ಬೀದಿ ನಾಯಿಗಳ ಉಪಟಳ ಅಧಿಕ. ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವ ಪಾದಚಾರಿಗಳಿಗೆ ಕಚ್ಚಲು ಹಿಂಬಾಲಿಸುವ ನಾಯಿಗಳಿಂದ ಮಕ್ಕಳು ಸೇರಿದಂತೆ ನಾಗರಿಕರು ತಪ್ಪಿಸಿಕೊಳ್ಳುವುದೇ ಮಹತ್ತರ ಸವಾಲಾಗಿದೆ.

ಕಳೆದ ಮೂರ್‍ನಾಲ್ಕು ತಿಂಗಳಿನಿಂದ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಹಿಂಡು ಹಿಂಡಾಗಿ ಬೀದಿ ಬೀದಿಯಲ್ಲಿ ತಿರುಗಾಡುವ ಬೀದಿ ನಾಯಿಗಳು ಪಪಂ ಸಿಬ್ಬಂದಿ, ಅಧಿಕಾರಿಗಳ ಕಣ್ಣಿಗೆ ಕಂಡರೂ ಕಾಣದಂತೆ ವರ್ತಿಸುತ್ತಿದ್ದಾರೆ.

ಹರಸಾಹಸ: ಪಟ್ಟಣದ ಹಳೇ ಬಸ್‌ ನಿಲ್ದಾಣದ ಗಾಂಧಿ ವೃತ್ತದಲ್ಲಿ ಸುಮಾರು 30 ರಿಂದ 40 ನಾಯಿಗಳ ಹಿಂಡು ತಿರುಗುತ್ತಿರುತ್ತವೆ. ಪ್ರತಿ ನಿತ್ಯ ಮುಂಜಾನೆ ಹಾಲು, ತರಕಾರಿ, ಹೂವು ತೆಗೆದು ಕೊಳ್ಳಲು ಬರುವಂತ ವೃದ್ಧರು, ಸಾರ್ವಜನಿಕರು ಹರಸಾಹಸ ಪಡಬೇಕಾಗಿದೆ.

Advertisement

ಶಾಲಾ ವಿದ್ಯಾರ್ಥಿಗಳಿಗೆ ತೊಂದರೆ: ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಿಂದ ಶಾಲೆಗೆ ಬರುವ ಮಕ್ಕಳ ಸಂಖ್ಯೆ ಅಧಿಕವಾಗಿರುತ್ತಿದೆ. ಅಲ್ಲದೇ ಮಕ್ಕಳು ಭಯದಿಂದಲೇ ಶಾಲೆಯತ್ತ ಹೆಜ್ಜೆ ಇಡಬೇಕಾಗಿದೆ.

ಪತ್ರಿಕೆ ಹಾಕುವುದು ಕಷ್ಟ: 18 ವಾರ್ಡ್‌ಗಳಿಗೂ ದಿನಬೆಳಗಾದರೇ ಪತ್ರಿಕೆ ವಿತರಿಸಲು ಸೈಕಲ್‌ ಹಾಗೂ ಬೈಕ್‌ ಮೇಲೆ ತೆರಳುವಂತ ವಿತರಕರ ಮೇಲೆಯೇ ದಾಳಿ ಮಾಡಿದ ಉದಾಹರಣೆಗಳಿವೆ. ಹೀಗಾಗಿ ಪತ್ರಿಕಾ ವಿತರಕರು ಮನೆಮನೆಗೆ ಪತ್ರಿಕೆ ಹಂಚಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. 

ಪಟ್ಟಣದಲ್ಲಿ ಶ್ವಾನಗಳು ಹೆಚ್ಚಾಗಿದ್ದು, ಅವುಗಳ ಹಾವಳಿ ವಿಪರೀತವಾಗಿವೆ. ಪ್ರತಿನಿತ್ಯ ಶಾಲೆಗೆ ತೆರಳುವುದು ಕಷ್ಟವಾಗಿದೆ. ಒಮ್ಮೆಲೇ ನಾಯಿಗಳು ಕಚ್ಚಲು ಬರುತ್ತಿದ್ದು, ಕೆಲವು ಮಕ್ಕಳಿಗೆ ಕಚ್ಚಿವೆ.
.ಕಾವ್ಯಾ, ಶಾಲಾ ವಿದ್ಯಾರ್ಥಿನಿ

ಮುಂಜಾನೆ ಹಾಲು ತರಕಾರಿ ತರಲು ಬರುವಂತ ನಾಗರಿಕರ ಮೇಲೆ ದಾಳಿ ಮಾಡುತ್ತವೆ. ಇಲಾಖೆಯವರು ಇವುಗಳನ್ನು ನಿಯಂತ್ರಿಸಬೇಕು. 
.ರಾಮಪ್ಪ, ಹಿರಿಯ ನಾಗರಿಕ.

Advertisement

Udayavani is now on Telegram. Click here to join our channel and stay updated with the latest news.

Next