Advertisement

ಪ್ರಧಾನಿ ನರೇಂದ್ರ ಮೋದಿಗೆ ಮತ್ತೊಮ್ಮೆ ಅವಕಾಶ ಕೊಡಿ

11:58 AM Mar 02, 2019 | Team Udayavani |

ಜಗಳೂರು: ದೇಶದ ಪ್ರಧಾನ ಸೇವಕನಾಗಿ ರೈತರು , ಬಡವರು, ಹಿಂದುಳಿದವರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಪ್ರಧಾನ ಮಂತ್ರಿ ಮೋದಿಯವರಿಗೆ ಮತ್ತೂಮ್ಮೆ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಯುವ ಬ್ರಿಗೇಡ್‌ ಮತ್ತು ಟೀಂ ಮೋದಿ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು. ಪಟ್ಟಣದ ಗುರುಭವನದ ಆವರಣದಲ್ಲಿ ಶುಕ್ರವಾರ ಟೀಂ ಮೋದಿ ಹಮ್ಮಿಕೊಂಡಿದ್ದ ದೇಶಕ್ಕಾಗಿ ಮೋದಿ.. ಮೋದಿಗಾಗಿ ನಾವು. ಬಹಿರಂಗ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.

Advertisement

ಮೋದಿಯವರು ಪ್ರಧಾನಿ ಆದಾಗಿನಿಂದಲೂ ಒಂದೂ ದಿನ ರಜೆ ಹಾಕದೇ ದೇಶ ಸೇವೆಯಲ್ಲಿ 
ತಮ್ಮನ್ನು ತೊಡಗಿಸಿಕೊಂಡು, ಹಗಲು ಇರುಳು ದೇಶದ ಅಭಿವೃದ್ಧಿಗೆ ಒತ್ತು ನೀಡುವುದರ ಮೂಲಕ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಉಜ್ವಲ ಯೋಜನೆಯಡಿ 9 ಕೋಟಿ ಕುಟುಂಬಗಳಿಗೆ ಉಚಿತ ಗ್ಯಾಸ್‌ ಸಿಲಿಂಡರ್‌, ಮುದ್ರಾ ಯೋಜನೆಯಡಿ 17 ಕೋಟಿ ಫಲಾನುಭವಿಗಳಿಗೆ ಸಾಲ ಸೌಲಭ್ಯ, 1 ಕೋಟಿ ದಲಿತ ಮಹಿಳೆಯರಿಗೆ 30 ಲಕ್ಷ ರೂ. ವರೆಗೆ ಸಹಾಯಧನ ನೀಡಲಾಗಿದ್ದು, ಪ್ರಧಾನ ಮಂತ್ರಿ ಜೀವನ್‌ ಸುರಕ್ಷಾ  ಯೋಜನೆ, ಜನ್‌ ಧನ್‌ ಯೋಜನೆ , ಸುಕನ್ಯಾ ಸಮೃದ್ಧಿ ಯೋಜನೆ ಸೇರಿದಂತೆ ನೂರಾರು ಯೋಜನೆಗಳನ್ನು ಜಾರಿಗೆ ತಂದು ಪ್ರತಿಯೊಂದು ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.

ಪ್ರತಿಯೊಬ್ಬರ ಉಳಿತಾಯ ಖಾತೆಗೆ 15 ಲಕ್ಷ ರೂ. ಹಾಕುತ್ತೇನೆ ಎಂಬ ಮೋದಿ ವಾಗ್ಧಾನದಂತೆ ಆಯುಷ್ಮಾನ್‌ ಯೋಜನೆಯಡಿ ಪ್ರತಿಯೊಬ್ಬರಿಗೂ ಒಂದು ವರ್ಷಕ್ಕೆ 5 ಲಕ್ಷ ರೂ. ವರೆಗೂ ಉಚಿತ ಚಿಕಿತ್ಸೆ ನೀಡುವ ಯೋಜನೆ ಜಾರಿಗೆ ತಂದಿದ್ದು, ಇದು 5 ವರ್ಷಕ್ಕೆ 25 ಲಕ್ಷ ರೂ. ಆಗಲಿದೆ ಎಂದರು.

ಮೋದಿ ಬರೀ ವಿದೇಶ ಪ್ರವಾಸ ಕೈಗೊಳ್ಳುತ್ತಾರೆ. ದೇಶದ ಅಭಿವೃದ್ಧಿ ಕಡೆಗೆ ಗಮನ ಹರಿಸುತ್ತಿಲ್ಲ ಎಂದು ಗೇಲಿ ಮಾಡುತ್ತಿದ್ದ ಪ್ರತಿಪಕ್ಷಗಳಿಗೆ ಈಗ ಸರಿಯಾದ ಉತ್ತರ ಸಿಕ್ಕಿದೆ. ನಮ್ಮ ಸೈನ್ಯ ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ಮಾಡಿದರೂ ಯಾವುದೇ ರಾಷ್ಟ್ರ ವಿರೋಧ ಮಾಡದಿರುವುದು ಮೋದಿ ವಿದೇಶ ಪ್ರವಾಸದ ಫಲವಾಗಿದೆ ಎಂದರು.

ದೇಶದ ಪ್ರಧಾನಿ ಎಂದುಕೊಳ್ಳದೇ ಪ್ರಧಾನ ಸೇವಕ ಎಂದು ಕರೆದುಕೊಳ್ಳುವ ಪ್ರಧಾನಿ ಬೇಕಾ? ಕುಟುಂಬ ರಾಜಕರಣ ಬೇಕಾ? ಎಂಬುವುದನ್ನು ನೀವೇ ನಿರ್ಧರಿಸಬೇಕು. ನಿಮ್ಮ ಒಂದು ಮತ ನೀಡುವುದಲ್ಲ, ಮೋದಿ ಅವರಿಗೆ ಒಬ್ಬರು ಹತ್ತು ಮತಗಳನ್ನು ಹಾಕಿಸಬೇಕು ಎಂದು ಹೇಳಿದರು.

Advertisement

ವೇದಿಕೆಯ ಮೇಲೆ ನಿವೃತ್ತ ಉಪನ್ಯಾಸಕ ಅನಂತ್‌ ರೆಡ್ಡಿ ಇದ್ದರು. ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್‌.ವಿ. ರಾಮಚಂದ್ರ , ಬಿಜೆಪಿ ತಾಲೂಕು ಅಧ್ಯಕ್ಷ ನಾಗಪ್ಪ, ಪ್ರಧಾನ ಕಾರ್ಯದರ್ಶಿ ನಾಗರಾಜ್‌, ಮುಖಂಡ ಬಿಸ್ತುವಳ್ಳಿ ಬಾಬು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next