ಜಗಳೂರು: ಕೋವಿಡ್ ವೈರಾಣು ಹರಡದಂತೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎಸ್.ವಿ. ರಾಮಚಂದ್ರ ಸೂಚಿಸಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು, ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಅರಸೀಕೆರೆ ಪೊಲೀಸ್ ಸಿಬ್ಬಂದಿ ಹಾಗೂ ಪಟ್ಟಣದ ಪೌರ ಕಾರ್ಮಿಕ , ಚಿಕ್ಕಉಜ್ಜಿನಿಯ 11 ವರ್ಷದ ಬಾಲಕಿ ಸೇರಿದಂತೆ 4 ಜನರಿಗೆ ಕೋವಿಡ್ ಧೃಢಪಟ್ಟಿದೆ. 270 ಸೋಂಕಿತರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ.
ಕ್ವಾರಂಟೈನ್‌ನಲ್ಲಿರುವವರಿಗೆ ಊಟದ ವ್ಯವಸ್ಥೆ ಮಾಡಬೇಕೆಂದರು. ಡಿಎಚ್‌ಒಗೆ ದೂರವಾಣಿ ಕರೆ ಮಾಡಿದ ಶಾಸಕರು, ಮಾಸ್ಕ್, ಪಿಪಿ ಕಿಟ್, ಹ್ಯಾಂಡ್‌ಗ್ಲೌಸ್ ಸೇರಿದಂತೆ ಸುರಕ್ಷತಾ ಕಿಟ್‌ಗಳನ್ನು ಕಳುಹಿಸಿಕೊಡುವಂತೆ ತಿಳಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ವೈರಸ್ ಹಾವಳಿ ಉಲ್ಬಣಗೊಂಡರೆ ಪಂಚಾಯಿತಿಯಲ್ಲಿನ 14ನೇ ಹಣಕಾಸಿನಡಿ ಹಣ ಬಳಕೆ ಮಾಡಿಕೊಂಡು ಸ್ಯಾನಿಟೈಸರ್, ಮಾಸ್ಕ್ ಖರೀದಿಸಿ. ಬೇಡಿಕೆಗಳಿದ್ದರೆ ಸರ್ಕಾರದಿಂದ ಒದಗಿಸಲು ಸಿದ್ಧನಾಗಿದ್ದು, ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದರು.
ಸಿಪಿಐ ದುರುಗಪ್ಪ ಮಾತನಾಡಿ, ಈಗಾಗಲೇ 3 ಕಡೆ ಸೀಲ್‌ಡೌನ್ ಮಾಡಲಾಗಿದೆ. ಕ್ವಾರಂಟೈನ್ ಹಾಗೂ ಸೀಲ್‌ಡೌನ್ ಸುತ್ತ ಬಿಗಿ ಬಂದೋಬಸ್ತ್ ಮಾಡಲಾಗಿದ್ದು ಕಂಟೇನ್ಮೆಂಟ್ ಝೋನ್ ನಲ್ಲಿ ಶುದ್ಧ ಆಹಾರ, ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಜನರು ವಿನಾಕಾರಣ ತಿರುಗಾಡಿ ಕಾನೂನು ಉಲ್ಲಂಘಿಸಿದರೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ| ನಾಗರಾಜ್ ಮಾತನಾಡಿ, ಆಶಾ, ಆರೋಗ್ಯ ಕಾರ್ಯಕರ್ತೆಯರ ಮೂಲಕ ಸೀಲ್‌ಡೌನ್ ಪ್ರದೇಶದ ನಿವಾಸಿಗಳ ಗರ್ಭಿಣಿ, ಮಕ್ಕಳ ವೃದ್ಧರ ಸಮೀಕ್ಷೆ ನಡೆಸಲಾಗುತ್ತಿದೆ ಎಂದರು. ಪ್ರಭಾರಿ ತಹಶೀಲ್ದಾರ್ ಗಿರೀಶ್‌ಬಾಬು, ತಾಪಂ ಇಒ ಮಲ್ಲಾ ನಾಯ್ಕ, ಪಪಂ ಮುಖ್ಯಾಧಿಕಾರಿ ರಾಜು ಡಿ. ಬಣಕಾರ್, ಸಮಾಜಕಲ್ಯಾಣ ಇಲಾಖೆಯ ಮಹೇಶ್, ಪಿಡಬ್ಲ್ಯೂಡಿ ಎಇಇ ರುದ್ರಪ್ಪ, ಅರಣ್ಯ ಇಲಾಖೆಯ ಶ್ವೇತಾ, ಡಾ| ಮಲ್ಲಪ್ಪ ಇದ್ದರು.