ಜಗಳೂರು: ಮುಸ್ಟೂರು ಗ್ರಾಮದ ಹೊರಮಠದಲ್ಲಿರುವ ದೇವರ ಮೂರ್ತಿಗಳನ್ನು ಯಾರೋ ಕಿಡಿಗೇಡಿಗಳು ವಿರೂಪಗೊಳಿಸಿರುವ ಘಟನೆ ನಡೆದಿದೆ.
ಮುಸ್ಟೂರು ಗ್ರಾಮದಲ್ಲಿರುವ ಹುಚ್ಚನಾಗಲಿಂಗ ಸ್ವಾಮಿ ಮಠವು ರಂಭಾಪುರಿ ಮಠದ ಶಾಖಾ ಮಠವಾಗಿದೆ. ಇದು ಪವಾಡ ಪುರುಷ ಮುಸ್ಟೂರು ಸ್ವಾಮಿಗಳ ಐಕ್ಯ ಸ್ಥಳವಾಗಿದ್ದು, ಇಲ್ಲಿ ದೇವಸ್ಥಾನ ನಿರ್ಮಿಸಲಾಗಿದೆ.
ಮಠದ ಪ್ರವೇಶ ದ್ವಾರಲ್ಲಿರುವ ಎರಡು ಮೂರ್ತಿಗಳನ್ನು ಕಿಡಿಗೇಡಿಗಳು ಸಂಪೂರ್ಣವಾಗಿ ಧ್ವಂಸಮಾಡಿದ್ದು. ಮಠದ ಒಳ ಭಾಗದಲ್ಲಿನ ಋಷಿಮುನಿಯ ಮೂರ್ತಿಯ ಕೈಗಳನ್ನು ಕಿತ್ತು ಹಾಕಿದ್ದಾರೆ. ಗರ್ಭಗುಡಿಯ ಮುಂಭಾಗದಲ್ಲಿ ನಿಂತಿರುವ ದೇವರ ಮೂರ್ತಿಗಳನ್ನು ವಿರೂಪಗೊಳಿಸಿದ್ದಾರೆ.
ಅಲ್ಲದೇ ಮಠದ ಆವರಣದಲ್ಲಿರುವ ಕುಡಿಯುವ ನೀರಿನ ಪೈಪ್‌ಗ್ಳು ಮತ್ತು ಸೊಂಪಾಗಿ ಬೆಳೆದಿದ್ದ ಬಾಳೆ ಗಿಡಗಳನ್ನು ಮುರಿದು ಹಾಕಿದ್ದಾರೆ
ಗ್ರಾಮದಿಂದ ಕೂಗಳತೆ ದೂರದಲ್ಲಿರುವ ಮಠಕ್ಕೆ ಪ್ರತಿನಿತ್ಯ ನೂರಾರು ಭಕ್ತರು ಬರುತ್ತಾರೆ. ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಇಲ್ಲಿ ಜನರಿರುತ್ತಾರೆ. ನಂತರ ಯಾರೂ ಸಹ ಇಲ್ಲಿ ಇರುವುದಿಲ್ಲ. ಇದನ್ನು ಗಮನಿಸಿರುವ ಕಿಡಿಗೇಡಿಗಳು ಮಠದ ಬೆಳವಣಿಗೆಯನ್ನು ಸಹಿಸದೇ ಈ ಕೆಲಸ ಮಾಡಿದ್ದಾರೆ ಎಂದು ಆರೋಪಿಸುತ್ತಾರೆ ಗ್ರಾಮದ ಉಜ್ಜನಪ್ಪ. ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.