ಕಲಬುರಗಿ: ರಾಜ್ಯದಲ್ಲಿ ಡ್ರಗ್ಸ್ ಗೆ ಕಡಿವಾಣ ಹಾಕಲು ಸರ್ಕಾರ ಬದ್ಧವಾಗಿದ್ದು, ಚಿತ್ರರಂಗ ಸೇರಿ ಎಲ್ಲರೂ ಸರ್ಕಾರಕ್ಕೆ ಸಹಕಾರ ನೀಡಲಿ ಎಂದು ಮಾಜಿ ಮುಖ್ಯಮಂತ್ರಿ, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿ ಸುದ್ದಿಗಾಗರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ದಂಧೆ ವಿರುದ್ಧ ಸರ್ಕಾರ ದಿಟ್ಟವಾದ ಕ್ರಮ ಕೈಗೊಳ್ಳುತ್ತಿದೆ. ದಂಧೆಯಲ್ಲಿ ಪಾಲ್ಗೊಂಡವರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಇಂದ್ರಜಿತ್ ಲಂಕೇಶ್ ಅವರಿಗೆ ರಕ್ಷಣೆ ನೀಡಲಾಗಿದೆ. ಈ ದಂಧೆ ಬಗ್ಗೆ ಯಾರೇ ಮಾಹಿತಿ ನೀಡಲು ಮುಂದೆ ಬಂದರೂ, ಅವರಿಗೆ ಸೂಕ್ತ ರಕ್ಷಣೆ ಒದಗಿಸಲು ಸರ್ಕಾರ ಸಿದ್ಧವಿದೆ ಎಂದರು.
ಕಟು ಟೀಕೆ ಬೇಡ: ಕೋವಿಡ್ ಬಿಕ್ಕಟ್ಟಿನಿಂದಾಗಿ ದೇಶ ಮತ್ತು ರಾಜ್ಯದ ಆರ್ಥಿಕ ಶಕ್ತಿಗೆ ಪೆಟ್ಟು ಬಿದ್ದಿದೆ. ಕೈಗಾರಿಕೆ ಸೇರಿದಂತೆ ಎಲ್ಲ ವಲಯಗಳು ಕುಸಿದಿವೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.
ಸರ್ಕಾರ ಸೇರಿ ಎಲ್ಲ ಕ್ಷೇತ್ರಗಳ ಆರ್ಥಿಕ ವ್ಯವಸ್ಥೆ ಕುಸಿದು ಹೋಗಿದೆ. ಇದನ್ನು ಪುನಶ್ಚೇತನಗೊಳಿಸಲು ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪನವರು ದಿಟ್ಟ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಇದರ ನಡುವೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಟೀಕಿಸಲು ಪ್ರತಿಪಕ್ಷಗಳಿಗೆ ಯಾವುದೇ ವಿಷಯವಿಲ್ಲ. ಹೀಗಾಗಿ ಸಿದ್ದರಾಮಯ್ಯರಂತಹ ನಾಯಕರು ವಿನಾಕಾರಣ ಕಟುಟೀಕೆ ಮಾಡಬಾರದು ಎಂದರು.