Advertisement

Karnataka Election; ಕಚೇರಿಯಲ್ಲಿನ ಮೋದಿ ಮತ್ತು ಶಾ ಫೋಟೋ ತೆಗೆಯುವುದಿಲ್ಲ: ಶೆಟ್ಟರ್

08:45 PM May 03, 2023 | Team Udayavani |

ಹುಬ್ಬಳ್ಳಿ : ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಫೋಟೋಗಳು ತಮ್ಮ ಮನೆ-ಕಚೇರಿಯಲ್ಲಿ ಗೋಡೆಯ ಮೇಲಿದ್ದು ಅವುಗಳನ್ನು ತೆಗೆದುಹಾಕುವುದು ಸರಿಯಲ್ಲ ಎಂದು ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸುತ್ತಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

Advertisement

1994 ರಿಂದ ಬಿಜೆಪಿ ಟಿಕೆಟ್‌ನಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಅನ್ನು ಪ್ರತಿನಿಧಿಸಿರುವ ಶೆಟ್ಟರ್, ಬಿಜೆಪಿಯೊಂದಿಗೆ ದಶಕಗಳ ಹಳೆಯ ಸಂಬಂಧವನ್ನು ಕಡಿದುಕೊಂಡ ನಂತರ, ತಮ್ಮ ರಾಜಕೀಯ ಜೀವನದ ಕೊನೆಯ ಹಂತದಲ್ಲಿ ತಮ್ಮ ಕಾರಿನ ಮೇಲೆ ಕಾಂಗ್ರೆಸ್ ಧ್ವಜವನ್ನು ಹಾಕಿಕೊಂಡು ಪಕ್ಷದ ಕಾರ್ಯಕರ್ತರೊಂದಿಗೆ ಪ್ರಚಾರಕ್ಕೆ ಹೊರಟಿದ್ದಾರೆ.

ಶೆಟ್ಟರ್ ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ಬಿಜೆಪಿಯಿಂದ ಹೊರಬಂದ ನಂತರ ಫೋಟೋಗಳನ್ನು ಏಕೆ ತೆಗೆದುಹಾಕಿಲ್ಲ ಎಂದು ಪ್ರಶ್ನಿಸಿದಾಗ, “ಇದರಲ್ಲಿ ಆಶ್ಚರ್ಯವೇನು. ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಬದಲಾದ ತಕ್ಷಣ ಹಿಂದಿನ ನಾಯಕರ ಫೋಟೋ ತೆಗೆಯುವುದು ಒಳ್ಳೆಯದಲ್ಲ. ನಾನು ಅದನ್ನು ಮಾಡಲು ಸಾಧ್ಯವಿಲ್ಲ ” ಎಂದಿದ್ದಾರೆ.

ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಶೆಟ್ಟರ್ , ಇದು ನನ್ನ ಕೊನೆಯ ವಿಧಾನಸಭಾ ಚುನಾವಣೆ ಎಂದಿದ್ದಾರೆ. ಚುನಾವಣೆ ನನ್ನ ಸ್ವಾಭಿಮಾನದ ಹೋರಾಟವಾಗಿದೆ, ರಾಜಕೀಯ ಆಕಾಂಕ್ಷೆಗಾಗಿ ಅಲ್ಲ. ನನ್ನ ಆತ್ಮಗೌರವಕ್ಕೆ ಧಕ್ಕೆಯಾದ ಕಾರಣ ಷರತ್ತನ್ನು ಹಾಕದೆ ನನ್ನ ನೆಮ್ಮದಿಗಾಗಿ ಕಾಂಗ್ರೆಸ್‌ ಸೇರಿದ್ದೇನೆ ಎಂದಿದ್ದಾರೆ.

“ಜನಪ್ರಿಯತೆ, ವಯಸ್ಸು, ಕ್ರಿಮಿನಲ್ ಹಿನ್ನೆಲೆ ಮತ್ತು ಭ್ರಷ್ಟಾಚಾರ/ಸಿಡಿ ಇಲ್ಲದಿದ್ದರೂ ನನಗೆ ಏಕೆ ಟಿಕೆಟ್ ನಿರಾಕರಿಸಲಾಗಿದೆ ಎಂಬುದು ಯಾರಿಗೂ ತಿಳಿದಿಲ್ಲ. ಆದರೆ ಬಿಜೆಪಿ 75 ವರ್ಷ ವಯಸ್ಸಿನವರು, ಕುಟುಂಬ ಸದಸ್ಯರು ಮತ್ತು ಕ್ರಿಮಿನಲ್ ಹಿನ್ನೆಲೆ ಹೊಂದಿರುವವರಿಗೆ ಟಿಕೆಟ್ ನೀಡಿದೆ”ಎಂದರು.

Advertisement

“ಅಭಿವೃದ್ಧಿ ಪರ ಕೆಲಸಗಳಿಂದಾಗಿ ನಾನು ಇನ್ನೂ ಜನಪ್ರಿಯತೆಯನ್ನು ಉಳಿಸಿಕೊಂಡಿದ್ದೇನೆ. ಯಾವುದೇ ವಿರೋಧಿ ಅಲೆಯಿಲ್ಲ. ಈ ಬಾರಿ ಅತ್ಯಧಿಕ ಬಹುಮತದಿಂದ ಗೆಲ್ಲುವ ವಿಶ್ವಾಸವಿದೆ. ಕಳೆದ ಆರು ಸತತ ಚುನಾವಣೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಮರಾಠರ ಬೆಂಬಲದಿಂದ ಗೆದ್ದಿದ್ದೇನೆ ಎಂಬ ತಪ್ಪು ಸಂವಹನ ಇದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next