Advertisement

ಜಗದೀಶ ಕಾರಂತ ಜಾಮೀನು ಅರ್ಜಿ ವಿಚಾರಣೆ: ಇಂದು ಕೋರ್ಟ್‌ ಆದೇಶ ಪ್ರಕಟ

12:27 PM Oct 07, 2017 | |

ಪುತ್ತೂರು: ಪ್ರತಿಭಟನ ಸಭೆಯಲ್ಲಿ ಪ್ರಚೋದನಕಾರಿ ಮತ್ತು ಅವಹೇಳನಕಾರಿ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಷರತ್ತುಬದ್ಧ ಮಧ್ಯಂತರ ಜಾಮೀನು ಪಡೆದು ಬಿಡುಗಡೆಗೊಂಡಿದ್ದ ಹಿಂದೂ ಜಾಗರಣಾ ವೇದಿಕೆ(ಹಿಂಜಾವೇ)ಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್‌ ಕಾರಂತ ಅವರು ಶುಕ್ರವಾರ ಪುತ್ತೂರು ನ್ಯಾಯಾಲಯಕ್ಕೆ ಹಾಜರಾದರು. ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಆದೇಶವನ್ನು ಶನಿವಾರಕ್ಕೆ ಕಾಯ್ದಿರಿಸಿದೆ.

Advertisement

ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆಯ ಎಸ್‌ಐ ಅಬ್ದುಲ್‌ ಖಾದರ್‌ ಮತ್ತು ಎಎಸ್‌ಐ ರುಕ್ಮ ಹಾಗೂ ಸಿಬಂದಿ ಚಂದ್ರ ಅವರ ಹಿಂದೂ ವಿರೋಧಿ ಕಾರ್ಯವೈಖರಿಯನ್ನು ವಿರೋಧಿಸಿ ಅವಹೇಳನಕಾರಿ ಭಾಷಣ ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಕಳೆದ ಶುಕ್ರವಾರ ಷರತ್ತುಬದ್ದ ಮಧ್ಯಂತರ ಜಾಮೀನು ಪಡೆದಿದ್ದ ಜಗದೀಶ್‌ ಕಾರಂತ ಅವರು ಮಂಗಳವಾರ ನ್ಯಾಯಾಲಯಕ್ಕೆ ಹಾಜರಾಗಿದ್ದ ವೇಳೆ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಲಾಗಿತ್ತು.  ಬುಧವಾರ ನ್ಯಾಯಾಲಯಕ್ಕೆ ಹಾಜರಾಗಿದ್ದರೂ ವಕೀಲರ ಕಲಾಪ ಬಹಿಷ್ಕಾರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮತ್ತೆ ನ್ಯಾಯಾಲಯ ಜಾಮೀನು ಅರ್ಜಿಯ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತ್ತು.

ಮಧ್ಯಂತರ ಜಾಮೀನು ಷರತ್ತಿನಂತೆ ಕಳೆದ ಶುಕ್ರವಾರದಿಂದ ಪುತ್ತೂರು ನ್ಯಾಯಾಲಯ ವ್ಯಾಪ್ತಿಯಲ್ಲೇ ಉಳಿದುಕೊಂಡಿದ್ದ ಜಗದೀಶ್‌ ಕಾರಂತ ಅವರು ಬಿಜೆಪಿ ಸಂಘ ಪರಿವಾರದ ಸಂಘಟನೆಗಳ ಪ್ರಮುಖರ ಜತೆ ಶುಕ್ರವಾರ ನ್ಯಾಯಾಲಯ ಆವರಣಕ್ಕೆ ಆಗಮಿಸಿ ಬಳಿಕ ತಮ್ಮ ಪರ ವಕೀಲರೊಂದಿಗೆ ಮೂರನೇ ಬಾರಿಗೆ ನ್ಯಾಯಾಲಯಕ್ಕೆ ಹಾಜರಾದರು. ಜಗದೀಶ್‌ ಕಾರಂತ ಅವರ ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ಪುತ್ತೂರಿನ ಎಸಿಜೆಎ ನ್ಯಾಯಾಲಯದ ನ್ಯಾಯಾಧೀಶ ಕಿಶನ್‌ ಬಿ. ಮಡಲಗಿ ಕೈಗೆತ್ತಿಕೊಂಡಿದ್ದಾರೆ.  ಜಗದೀಶ್‌ ಕಾರಂತ ಅವರಿಗೆ ಜಾಮೀನು ಮಂಜೂರು ಮಾಡುವಂತೆ ಅವರ ಪರ ವಕೀಲರಾದ ಮಹೇಶ್‌ ಕಜೆ, ನರಸಿಂಹ ಪ್ರಸಾದ್‌, ಮುರಳೀಕೃಷ್ಣ, ಚಿನ್ಮಯ ರೈ ಮತ್ತು ಕಿಶೋರ್‌ ಕೊಳತ್ತಾಯ ವಾದ ಮಂಡಿಸಿದ್ದರು. ಪರ -ವಿರೋಧ ವಾದಗಳನ್ನು ಆಲಿಸಿದ ನ್ಯಾಯಾಧೀಶರು ಜಾಮೀನು ಆದೇಶವನ್ನು ಶನಿವಾರಕ್ಕೆ ಕಾಯ್ದಿರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next