Advertisement

ಕೈಗಾರಿಕಾ ಸ್ನೇಹಿ ಸಂಕಲ್ಪ : ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್

07:51 AM Jul 24, 2021 | Team Udayavani |

ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ  ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಅವರ ನೇತೃತ್ವದಲ್ಲಿ ರಾಜ್ಯ ಸರಕಾರ ಹೊರ ತಂದಿರುವ ಕ್ರಾಂತಿಕಾರಿ ಕಾನೂನುಗಳು ಹಾಗೂ ನೀತಿಗಳಿಂದ ಕರ್ನಾಟಕ ರಾಜ್ಯ ದೇಶದಲ್ಲಿ ನಂ.1 ಕೈಗಾರಿಕಾ ಸ್ನೇಹಿ ರಾಜ್ಯವಾಗುವತ್ತ ದಾಪುಗಾಲು ಇಡುತ್ತಿದೆ.
ಬಂಡವಾಳ ಹೂಡಿಕೆಗೆ ಇಂಬು ನೀಡುತ್ತಿದೆ. ಪ್ರಗತಿಯ ಹಾದಿಗೆ ಹೊಸ ರೂಪ ನೀಡಿದೆ. ದುಡಿಯುವ ಕೈಗಳಿಗೆ ಉದ್ಯೋಗ ಕಲ್ಪಿಸುವ ಕಾರ್ಯ ಮಾಡುತ್ತಿದೆ.

Advertisement

ರಾಜ್ಯದಲ್ಲಿ ಕೊರೊನಾ ಲಾಕ್‌ಡೌನ್‌ನಲ್ಲೂ ಕೈಗಾರಿಕೆ ಇಲಾಖೆ ಸಾಧನೆ ಗಮನಾರ್ಹ. ಇಡೀ ದೇಶ ಆರ್ಥಿಕ ಸಂಕಷ್ಟದಿಂದ ತತ್ತರಿಸುತ್ತಿರುವ ಸಂದರ್ಭದಲ್ಲೂ ಕರ್ನಾಟಕದಲ್ಲಿ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ ಅವರು ಎಫ್ಕೆಸಿಸಿಐ, ಕಾಸಿಯಾ, ಸಿಐಐ ಸೇರಿದಂತೆ ಉದ್ಯಮ ಸಂಘಟನೆಗಳ ಜತೆ ನಿರಂತರ ಸಂಪರ್ಕ ವಹಿಸಿ ಉದ್ಯಮ ವಲಯಕ್ಕೆ ಕೊರೊನಾ ಹೆಚ್ಚು ಬಾಧಿಸದಂತೆ ನೋಡಿಕೊಂಡರು. ಅಷ್ಟೇ ಅಲ್ಲ ಉದ್ಯಮ ರಂಗದವರ ಜತೆ ನಿರಂತರ ಸಂವಾದ ನಡೆಸಿ ಅವರಿಗೆ ಅಗತ್ಯ ನೆರವು ಕಲ್ಪಿಸಿ ಎರಡು ತಿಂಗಳಲ್ಲಿ 30 ಸಾವಿರ ಕೋಟಿ ರೂ. ಬಂಡವಾಳ ಆಕರ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಕೊರೊನಾ ಸಂಕಷ್ಟ ಕಾಲದಲ್ಲೂ ಕರ್ನಾಟಕ ರಾಜ್ಯ ಅತಿ ಹೆಚ್ಚು ಬಂಡವಾಳ ಹೂಡಿಕೆಯ ಪ್ರಸ್ತಾಪಗಳನ್ನು ಹಾಗೂ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಮೂರನೇ ಸ್ಥಾನ ಪಡೆದಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ ಅವರ ನೇತೃತ್ವದಲ್ಲಿ ರಾಜ್ಯ ಸರಕಾರ ಹೊರ ತಂದಿರುವ ಕ್ರಾಂತಿಕಾರಿ ಕಾನೂನುಗಳು ಹಾಗೂ ನೀತಿಗಳಿಂದ ಕರ್ನಾಟಕ ರಾಜ್ಯ ದೇಶದಲ್ಲಿ ನಂ.1 ಕೈಗಾರಿಕಾ ಸ್ನೇಹಿ ರಾಜ್ಯವಾಗುವತ್ತ ದಾಪುಗಾಲು ಇಡುತ್ತಿದೆ.

ರಾಜ್ಯದಲ್ಲಿ ರಕ್ಷಣಾ ತಂತ್ರಜ್ಞಾನ ಹಬ್‌ಗಳನ್ನು ಘೋಷಿಸುವಂತೆ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರಿಗೆ ಶೆಟ್ಟರ್‌ ಅವರು ಪತ್ರ ಬರೆದು ರಾಜ್ಯದ ಏರೋಸ್ಪೇಸ್‌ ಹಾಗೂ ರಕ್ಷಣಾ ಉತ್ಪಾದನಾ ಘಟಕಗಳ ಉತ್ತೇಜನಕ್ಕೆ ತಂತ್ರಜ್ಞಾನ ಹಬ್‌ಗಳು ಅಗತ್ಯ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ದೇಶದ ಏರೋಸ್ಪೇಸ್‌ ಹಾಗೂ ರಕ್ಷಣಾ ಉತ್ಪನ್ನಗಳ ಕ್ಷೇತ್ರದಲ್ಲಿ ಮುಂಚೂಣಿ ಸ್ಥಾನದಲ್ಲಿರುವ ಕರ್ನಾಟಕ ರಾಜ್ಯದಲ್ಲಿ ರಕ್ಷಣಾ ತಂತ್ರಜ್ಞಾನ ಹಬ್‌ಗಳನ್ನು ಘೋಷಿಸುವ ಮೂಲಕ ರಾಜ್ಯದ ಏರೋಸ್ಪೇಸ್‌ ಹಾಗೂ ರಕ್ಷಣಾ ಉತ್ಪಾದನಾ ಘಟಕಗಳಿಗೆ ಉತ್ತೇಜನ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದು ವಿಶೇಷ.
ಕೇಂದ್ರ ಸರ್ಕಾರ‌ ದೇಶದಲ್ಲಿ ರಕ್ಷಣಾ ಹಾಗೂ ಏರೋಸ್ಪೇಸ್‌ಗೆ ಸಂಬಂಧಿಸಿದಂತಹ ಕ್ಷೇತ್ರಗಳಿಗೆ ಹಲವಾರು ಯೋಜನೆಗಳ ಮೂಲಕ ಪ್ರೋತ್ಸಾಹ ನೀಡುತ್ತಿದೆ. ರಕ್ಷಣಾ ಉತ್ಪಾದನಾ ಕಾರಿಡಾರ್‌ ಯೋಜನೆಯ ಮೂಲಕ ಉತ್ತರ ಪ್ರದೇಶ, ತಮಿಳುನಾಡುಗಳಲ್ಲಿ ಕ್ರಮವಾಗಿ 6 ಮತ್ತು 5 ನೋಡ್‌ಗಳನ್ನು ಉತ್ತೇಜಿಸುವ ಕಾರ್ಯಕ್ಕೆ ಮುಂದಾಗಿದೆ. ಹೊಸ ರಕ್ಷಣಾ ಕಾರಿಡಾರ್‌ ನಿರ್ಮಿಸುವುದರ ಜತೆಯಲ್ಲೇ ಈಗಾಗಲೇ ಅಸ್ತಿತ್ವದಲ್ಲಿರುವ ಏರೋಸ್ಪೇಸ್‌ ಮತ್ತು ರಕ್ಷಣಾ ಉತ್ಪಾದನಾ ಪರಿಸರ ಹೊಂದಿರುವ ಪ್ರದೇಶಗಳಿಗೂ ಉತ್ತೇಜನ ನೀಡಬೇಕೆಂಬುದನ್ನು ಪ್ರತಿಪಾದಿಸಿದ್ದಾರೆ.

Advertisement

ಕರ್ನಾಟಕ ರಾಜ್ಯದಲ್ಲಿ ರಕ್ಷಣಾ ತಂತ್ರಜ್ಞಾನ ಹಬ್‌ ನಿರ್ಮಾಣಕ್ಕೆ ಎಲ್ಲಾ ರೀತಿಯ ಅನುಕೂಲವಿದ್ದು ಉತ್ತಮ ಪರಿಸರವಿದೆ. ರಾಜ್ಯದಲ್ಲಿ ಅತ್ಯುತ್ತಮ ಸಂಶೋಧನೆ ಮತ್ತು ಅಭಿವೃದ್ಧಿಯ ಕೇಂದ್ರಗಳಿವೆ. ಅಲ್ಲದೆ ಹೆಚ್‌ಎಎಲ್‌, ಬಿಇಎಲ್‌ನಂತಹ ಸಾರ್ವಜನಿಕ ಸ್ವಾಮ್ಯದ ಕಂಪನಿಗಳು ಮತ್ತು ಡಿಆರ್‌ಡಿಒದ ಪ್ರಯೋಗಾಲಯಗಳು ಏರ್‌ಬಸ್‌, ಬೋಯಿಂಗ್‌ ನಂತಹ ಪ್ರಮುಖ ಕಂಪನಿಗಳು ರಾಜ್ಯದಲ್ಲಿವೆ. ಇದು ನಮ್ಮ ರಾಜ್ಯವನ್ನು ಏರೋಸ್ಪೇಸ್‌ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವಂತೆ ಮಾಡಿದೆ ಎಂಬುದನ್ನೂ ಉಲ್ಲೇಖೀಸಿದ್ದಾರೆ.

ದೇಶದ ಶೇ.25ಕ್ಕೂ ಹೆಚ್ಚು ಏರ್‌ಕ್ರಾಫ್ಟ್‌ ಮತ್ತು ಸ್ಪೇಸ್‌ಕ್ರಾಫ್ಟ್‌ ಕೈಗಾರಿಕೆಗಳು ರಾಜ್ಯದಲ್ಲಿವೆ. ರಕ್ಷಣಾ ಕ್ಷೇತ್ರಕ್ಕೆ ಅಗತ್ಯವಿರುವ ಶೇ.67 ಏರ್‌ಕ್ರಾಫ್ಟ್‌ ಮತ್ತು ಹೆಲಿಕಾಪ್ಟರ್‌ ಉತ್ಪಾದನೆ ರಾಜ್ಯದಲ್ಲಿ ನಡೆಯುತ್ತದೆ. ಅಲ್ಲದೆ ಎಫ್‌ಡಿಐ ಇಂಟಲಿಜೆನ್ಸ್‌ನ ವಿಶ್ವ ಏರೋಸ್ಪೇಸ್‌ ನಗರಗಳ ಸೂಚ್ಯಂಕದ ಮೊದಲ 10ನೇ ಸ್ಥಾನದಲ್ಲಿ ಬೆಂಗಳೂರು ನಗರ ಸ್ಥಾನ ಪಡೆದಿದೆ. ಹಾಗೆಯೇ ಈ ಕ್ಷೇತ್ರಕ್ಕೆ ಬಿಡಿಭಾಗಗಳನ್ನು ಪೂರೈಸುವ 2000ಕ್ಕೂ ಹೆಚ್ಚು ಎಂಎಸ್‌ಎಂಇಗಳಿವೆ. ಮಾನ್ಯ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ದೇಶದಲ್ಲೇ ಮೊದಲು ಏರೋಸ್ಪೇಸ್‌ ಹಾಗೂ ಡಿಫೆನ್ಸ್‌ ಪಾಲಿಸಿಯನ್ನು ಜಾರಿಗೊಳಿಸಿದ ರಾಜ್ಯವೂ ನಮ್ಮದಾಗಿದೆ.

ಬೆಂಗಳೂರು, ಮೈಸೂರು, ತುಮಕೂರು ಮತ್ತು ಚಾಮರಾಜನಗರ ಈ ನಾಲ್ಕೂ ನೋಡ್‌/ಹಬ್‌ಗಳು ಏರೋಸ್ಪೇಸ್‌ ಮತ್ತು ಡಿಫೆನ್ಸ್‌ ಎಕೋಸಿಸ್ಟಮ್‌ಗೆ ಈಗಾಗಲೇ ಸಿದ್ಧವಿರುವ ಮೂಲಸೌಕರ್ಯಗಳನ್ನು ಹೊಂದಿವೆ. ಮುಂದಿನ ದಿನಗಳಲ್ಲೂ ಕರ್ನಾಟಕ ರಾಜ್ಯ ದೇಶದ ಏರೋಸ್ಪೇಸ್‌ ಮತ್ತು ಡಿಫೆನ್ಸ್‌ ಉತ್ಪಾದನಾ ಕ್ಷೇತ್ರದಲ್ಲಿ ಸ್ಥಳೀಯವಾಗಿ ಉತ್ಪಾದನೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ.

ರಾಜ್ಯದಲ್ಲಿ ಘೋಷಣೆ ಆಗುವ ರಕ್ಷಣಾ ತಂತ್ರಜ್ಞಾನ ಹಬ್‌, ದೇಶದ ಡಿಫೆನ್ಸ್‌ ಆಫ್‌ಸೆಟ್‌ ಪಾಲಿಸಿ ಅಡಿಯಲ್ಲಿ ಡಿಫೆನ್ಸ್‌ ಕಾರಿಡಾರ್‌ನ ವರ್ಧಿತ ಗುಣಕಗಳು ಹಾಗೂ ರಕ್ಷಣಾ ವೇದಿಕೆ ಮತ್ತು ಉತ್ಪನ್ನಗಳ ಪರೀಕ್ಷೆ ಮತ್ತು ಪ್ರಮಾಣ ಪತ್ರ ಮತ್ತಿತರೆ ವಿಶೇಷ ಸೌಲಭ್ಯಗಳಿಂದ ರಾಜ್ಯದಲ್ಲಿ ಏರೋಸ್ಪೇಸ್‌ ಮತ್ತು ರಕ್ಷಣಾ ಕ್ಷೇತ್ರದ ಬೆಳವಣಿಗೆಗೆ ಮತ್ತಷ್ಟು ಪುಷ್ಟಿ ನೀಡುತ್ತದೆ. ಅಲ್ಲದೆ ಆತ್ಮನಿರ್ಭರ ಭಾರತ ಗುರಿಗೆ ಮತ್ತಷ್ಟು ಬಲ ತುಂಬಲಿದೆ. ಈ ಹೊಸ ಉಪಕ್ರಮಗಳಿಂದ ನಮ್ಮ ರಾಜ್ಯದ ವೈಜ್ಞಾನಿಕ ನಾಯಕತ್ವ ಹಾಗೂ ಈ ಕ್ಷೇತ್ರಕ್ಕೆ ನಮ್ಮ ರಾಜ್ಯದಿಂದ ನೀಡಿರುವ ಸಂಶೋಧನೆ ಮತ್ತು ಅಭಿವೃದ್ಧಿಯ ಕೊಡುಗೆಗೆ ಸ್ವೀಕೃತಿ ನೀಡಿದಂತಾಗುತ್ತದೆ ಎಂಬುದು ಸಚಿವ ಜಗದೀಶ ಶೆಟ್ಟರ ಅವರ ಪ್ರತಿಪಾದನೆ.

ಸರಕಾರದಿಂದ ಸಹಕಾರ: ರಾಜ್ಯದಲ್ಲಿ ಇತ್ತೀಚಿಗೆ ಹೊರ ತಂದಿರುವ ನೂತನ ಇಎಸ್‌ಡಿಎಂ ನೀತಿ ಹಾಗೂ ಎಲೆಕ್ಟ್ರಿಕ್‌ ವೆಹಿಕಲ್‌ ನೀತಿಯಲ್ಲಿನ ಅಮೂಲಾಗ್ರ ಬದಲಾವಣೆಯ ಮೂಲಕ ಹಸಿರು ಭವಿಷ್ಯಕ್ಕೆ ಮುನ್ನುಡಿ ಬರೆಯಲಾಗಿದೆ. ಪರಿಸರ ಮಾಲಿನ್ಯ ಕಡಿಮೆಗೊಳಿಸುವ ನಿಟ್ಟಿನಲ್ಲಿ ಸೆಲ್‌ ಉತ್ಪಾದನಾ ಕ್ಷೇತ್ರ ಪ್ರಮುಖ ಪಾತ್ರ ವಹಿಸಲಿದೆ. ಈ ನಿಟ್ಟಿನಲ್ಲಿ ಕ್ಷೇತ್ರಕ್ಕೆ ಅಗತ್ಯವಿರುವ ಸಹಕಾರವನ್ನು ರಾಜ್ಯ ಸರ್ಕಾರದಿಂದಲೂ ನೀಡಲಾಗುತ್ತಿದೆ.

ಕೈಗಾರಿಕೆಗಳ ಪುನಶ್ಚೇತನಕ್ಕೆ ಹೆಚ್ಚು ಒಲವು
ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಣ್ಣ ಕೈಗಾರಿಕೆಗಳಿಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿವೆ. ಕೊರೊನಾ ಸಂಕಷ್ಟ ಕಾಲದಲ್ಲಿ ಎಲ್ಲಾ ಕ್ಷೇತ್ರಗಳು ತೀವ್ರ ತೊಂದರೆಗೀಡಾಗಿವೆ. ಇದಕ್ಕೆ ಸಣ್ಣ ಕೈಗಾರಿಕೆಗಳು ಹೊರತಾಗಿಲ್ಲ. ದೇಶದ ಜಿಡಿಪಿ ಹಾಗೂ ಉದ್ಯೋಗಾವಕಾಶ ಹೆಚ್ಚಳಕ್ಕೆ ಸಣ್ಣ ಕೈಗಾರಿಕೆಗಳ ಕೊಡುಗೆ ಅಪಾರ. ಇವುಗಳ ಪುನಶ್ಚೇತನಕ್ಕೆ ರಾಜ್ಯ ಸರ್ಕಾರ ಹೆಚ್ಚು ಒಲವು ನೀಡುತ್ತಿದೆ.

ನೂತನ ನೀತಿ
ಕರ್ನಾಟಕ ರಾಜ್ಯದ ನೂತನ ಕೈಗಾರಿಕಾ ನೀತಿ 2020-2025ರಲ್ಲಿ ಎಂಎಸ್‌ಎಂಇ ಗಳಿಗೆ ಹೆಚ್ಚು ಸೌಲಭ್ಯ ಹಾಗೂ ಆದ್ಯತೆ ನೀಡಲಾಗಿದೆ. ಅಲ್ಲದೆ ಸಾರ್ಥಕ್‌ ಯೋಜನೆ ಮೂಲಕ ಹಲವಾರು ಸೌಲಭ್ಯ ನೀಡಲಾಗುತ್ತಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ದೇಶದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಲೆಕ್ಕಪರಿಶೋಧಕರು ಕೈಗಾರಿಕೆಗಳು ಸಫಲತೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಈ ಕೈಗಾರಿಕೆಗಳ ಅನುಕೂಲ ಹಾಗೂ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿವೆ. ರಾಜ್ಯದಲ್ಲೂ ಎಂಎಸ್‌ಎಂಇಗಳ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಬಾರಿಯ ನೂತನ ಕೈಗಾರಿಕಾ ನೀತಿಯಲ್ಲಿ ಸಣ್ಣ-ಸೂಕ್ಷ್ಮ ಕೈಗಾರಿಕೆಗಳಿಗೆ ಆದ್ಯತೆ ನೀಡಲಾಗಿದೆ. ಅಲ್ಲದೆ ಕ್ರಾಂತಿಕಾರಿ ನೀತಿ ಹಾಗೂ ಕಾಯ್ದೆಗಳಾದ ಕೈಗಾರಿಕಾ ಸೌಲಭ್ಯ ಕಾಯ್ದೆ ಹಾಗೂ ಅಫಿಡವಿಟ್‌ ಬೇಸ್ಡ್ ಕ್ಲಿಯರೆನ್ಸ್‌ನಂತಹ ಕ್ರಮಗಳು ದೇಶದಲ್ಲೇ ಮೊದಲಾಗಿದ್ದು, ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಇದ್ದಂತಹ ಹಲವಾರು ಅಡೆತಡೆಗಳನ್ನು ನಿವಾರಿಸುವಲ್ಲಿ ಸಚಿವ ಜಗದೀಶ ಶೆಟ್ಟರ ಯಶಸ್ವಿಯಾಗಿದ್ದಾರೆ. ಅಲ್ಲದೆ ಸಾರ್ಥಕ್‌ ಆನ್‌ಲೈನ್‌ ಪ್ಲಾಟ್‌ಫಾರಂ ಮುಖಾಂತರ ಸಣ್ಣ ಕೈಗಾರಿಕೆಗಳು ಮತ್ತು ಹಲವಾರು ಪಾಲುದಾರರ ಮಧ್ಯೆ ಸಂಪರ್ಕ ಕೊಂಡಿ ನಿರ್ಮಿಸಲಾಗಿದೆ. ಇದರ ಮೂಲಕ ಸಣ್ಣ ಕೈಗಾರಿಕೆಗಳು ಕಚ್ಚಾವಸ್ತುಗಳ ಖರೀದಿ, ಹಂಚಿಕೆದಾರರೊಂದಿಗೆ ಸಂಪರ್ಕ, ಕೌಶಲ್ಯ ಹೊಂದಿದ ಕಾರ್ಮಿಕರೊಂದಿಗೆ ಹೀಗೆ ಹತ್ತು ಹಲವಾರು ಸೌಲಭ್ಯ ಪಡೆಯಬಹುದಾಗಿದೆ.

ಅತಿಹೆಚ್ಚು ಬಂಡವಾಳ ಹೂಡಿಕೆ
ಕೊರೊನಾ ಸಂಕಷ್ಟ ಕಾಲದಲ್ಲೂ ಕರ್ನಾಟಕ ರಾಜ್ಯ ಅತಿ ಹೆಚ್ಚು ಬಂಡವಾಳ ಹೂಡಿಕೆಯ ಪ್ರಸ್ತಾಪಗಳನ್ನು ಹಾಗೂ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಮೂರನೇ ಸ್ಥಾನ ಪಡೆದಿದೆ. ಕರ್ನಾಟಕ ರಾಜ್ಯವನ್ನು ಇನ್ನೂ ಹೆಚ್ಚು ಕೈಗಾರಿಕಾ ಸ್ನೇಹಿ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಕೈಗೊಂಡಿರುವ ಕ್ರಾಂತಿಕಾರಿ ಕಾನೂನು ಹಾಗೂ ನೀತಿಗಳು ಫಲ ನೀಡುತ್ತಿವೆ. ಕೊರೊನಾ ಸಂಕಷ್ಟ ಕಾಲದಲ್ಲೂ ಕೂಡಾ ಬಂಡವಾಳ ಹೂಡಿಕೆಯ ಪ್ರಸ್ತಾವನೆಯಲ್ಲಿ ರಾಜ್ಯ ಮೊದಲ ಸ್ಥಾನ ಪಡೆದಿದ್ದರೆ, ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಮೂರನೇ ಸ್ಥಾನ ಪಡೆದಿದೆ. ಇದೇ ರೀತಿಯ ಟ್ರೆಂಡ್‌ ಮುಂದುವರಿದಲ್ಲಿ ನಂ 1 ಸ್ಥಾನ ಪಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ.

ಸಂಕಷ್ಟದಲ್ಲೂ 30 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ
ಕೈಗಾರಿಕೆ ಸಚಿವ ಜಗದೀಶ ಶೆಟ್ಟರ ಅವರ ದಕ್ಷತೆಯಿಂದಾಗಿ ಲಾಕ್‌ಡೌನ್‌ ಸಂಕಷ್ಟದ ನಡುವೆಯೂ ರಾಜ್ಯ 30 ಸಾವಿರ ಕೋಟಿ ರೂ. ಬಂಡವಾಳ ಆಕರ್ಷಿಸಿದೆ. ಇನ್‌ವೆಸ್ಟ್‌ ಕರ್ನಾಟಕ ಹೂಡಿಕೆದಾರರ ಸಮಾವೇಶದಲ್ಲಿ 20ಕ್ಕೂ ಹೆಚ್ಚು ಕಂಪನಿಗಳೊಂದಿಗೆ ಸಹಿ ಹಾಕಲಾಗಿದೆ. ಲಾಕ್‌ಡೌನ್‌ ಅವಧಿಯಾದ ಏಪ್ರಿಲ್‌-ಮೇ ತಿಂಗಳಲ್ಲಿ 17,718 ಕೋಟಿ ರೂ. ಬಂಡವಾಳ ಹೂಡಿಕೆಗೆ ಪ್ರಸ್ತಾವನೆ ಬಂದಿದ್ದು, ಒಟ್ಟು 30, 192 ಕೋಟಿ ರೂ. ಬಂಡವಾಳ ಹರಿದು ಬಂದಿದೆ. ಇದರ ಮೊತ್ತ 31,142 ಕೋಟಿ ರೂ.ಗೆ ಹೆಚ್ಚಳವಾಗುವ ಸಾಧ್ಯತೆಯೂ ಇದೆ. ಲಿಥಿಯನ್‌-ಆಯಾನ್‌ ಸೆಲ್‌ ಉತ್ಪಾದನೆ ಕ್ಷೇತ್ರದ ಪ್ರಮುಖ ಕಂಪನಿಯಾಗಿರುವ ಅಮೆರಿಕದ ಸಿ4 ವಿ ರಾಜ್ಯದಲ್ಲಿ 4015 ಕೋಟಿ ರೂ. ಹೂಡಿಕೆ ಮಾಡಲು ಮುಂದಾಗಿದ್ದು, ಸಿಂಗಾಪುರ ಮೂಲದ ಎಲ್‌ಎನ್‌ಜಿ ಟರ್ಮಿನಲ್‌ ಆಪರೇಟರ್‌ ಎಲ್‌ಎಲ್‌ಜಿ ಆಲೈಯನ್ಸ್‌ನೊಂದಿಗೆ 2,250 ಕೋಟಿ ರೂ. ಒಪ್ಪಂದ, ಆದಾನಿ ಡೇಟಾ ಸೆಂಟರ್‌ ಸ್ಥಾಪನೆಗೆ 5 ಸಾವಿರ ಕೋಟಿ ರೂ. ಒಪ್ಪಂದವೂ ಇದರಲ್ಲಿ ಸೇರಿದೆ. ಎರಡು ತಿಂಗಳಲ್ಲಿ 120 ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು 17,718 ಕೋಟಿ ರೂ. ಮೊತ್ತದ ಹೂಡಿಕೆಗೆ ಒಪ್ಪಿಗೆ ನೀಡಲಾಗಿದೆ. ಇದರಿಂದ 19,729 ಉದ್ಯೋಗ ಸೃಷ್ಟಿಯ ನಿರೀಕ್ಷೆಯೂ ಇದೆ.

ಕ್ಷೇತ್ರದ ಅಭಿವೃದ್ಧಿಗೆ ಅವಿರತ ಶ್ರಮ
ಒಂದು ಕಡೆ ಶಾಸಕರಾಗಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯ ಕಾಳಜಿ ಜತೆಗೆ ಸಚಿವರಾಗಿ ರಾಜ್ಯದ ಹಿತ ಚಿಂತನೆ, ಇಲಾಖೆಯ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಬದ್ಧತೆಯೊಂದಿಗೆ ಸಾಗಿ ಬಂದವರು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ.

ಹುಬ್ಬಳ್ಳಿ-ಧಾರವಾಡ ಮಹಾನಗರ ಅಭಿವೃದ್ಧಿ ನಿಟ್ಟಿನಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. ರಾಜ್ಯ ಸರಕಾರದಿಂದ ಹತ್ತು ಹಲವು ಯೋಜನೆಗಳನ್ನು ಹೊತ್ತು ತಂದಿದ್ದಾರೆ. ಕೇಂದ್ರ ಸರಕಾರದಿಂದಲೂ ಅಭಿವೃದ್ಧಿ ಯೋಜನೆಗಳ ಲಾಭ ಪಡೆಯುವ ನಿಟ್ಟಿನಲ್ಲಿ ತಮ್ಮದೇ ಶ್ರಮ ಹಾಕಿದ್ದಾರೆ. ರಸ್ತೆ, ಉದ್ಯಾನವನ, ಕುಡಿಯುವ ನೀರು ಸೇರಿದಂತೆ ವಿವಿಧ ಮೂಲಸೌಲಭ್ಯ ಕಲ್ಪಿಸುವಲ್ಲಿ ಪ್ರಾಮಾಣಿಕ ಯತ್ನ ತೋರಿದ್ದಾರೆ.

ಕೋವಿಡ್‌ ನಿರ್ವಹಣೆಗೆ ಅವಿರತ ಶ್ರಮ: ಕೋವಿಡ್‌ ಮೊದಲ-ಎರಡನೇ ಅಲೆ ನಿರ್ವಹಣೆ ನಿಟ್ಟಿನಲ್ಲಿ ಶಾಸಕರಾಗಿ ಕ್ಷೇತ್ರದಲ್ಲಿ, ಸಚಿವರಾಗಿ ರಾಜ್ಯದಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. ಕೋವಿಡ್‌ ಸಂದರ್ಭದಲ್ಲಿ ಆಸ್ಪತ್ರೆಗಳಿಗೆ ಆಮ್ಲಜನಕದ ಕೊರತೆ ಎದುರಾದಾಗ ಅದರ ನಿರ್ವಹಣೆ ಹೊಣೆಯನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ ಶೆಟ್ಟರ ಅವರಿಗೆ ವಹಿಸಿದ್ದರು. ಆಮ್ಲಜನಕ ಉತ್ಪಾದನೆ ಹೆಚ್ಚಿಸಲು ಹಾಗೂ ಕೈಗಾರಿಕಾ ಬಳಕೆಗೆಂದು ಇದ್ದ ಆಮ್ಲಜನಕವನ್ನು ಆಸ್ಪತ್ರೆ ಬಳಕೆಗೆ ವಿನಿಯೋಗಿಸುವ ನಿಟ್ಟಿನಲ್ಲಿ ಸಾಕಷ್ಟು ಶ್ರಮಿಸಿದ್ದರು. ಸ್ಥಗಿತಗೊಂಡಿದ್ದ ಭದ್ರಾವತಿಯ ವಿಐಎಸ್‌ಎಲ್‌ ಆಮ್ಲಜನಕ ಘಟಕ ಪುನರಾರಂಭಗೊಳ್ಳುವಂತೆ ಮಾಡಿದ್ದರು. ಧಾರವಾಡ ಜಿಲ್ಲೆಯ ಸತ್ತೂರಿನಲ್ಲಿರುವ ಆಮ್ಲಜನಕ ವಿತರಣೆ ಘಟಕಕ್ಕೂ ಭೇಟಿ ನೀಡಿ ಪರಿಶೀಲಿಸಿದ್ದರು. ಧಾರವಾಡ ಜಿಲ್ಲೆಯಲ್ಲಿ ಆಮ್ಲಜನಕ ಕೊರತೆ ಆಗದಂತೆ ಅಗತ್ಯ ಕ್ರಮ ಕೈಗೊಂಡಿದ್ದರು.

ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೋವಿಡ್‌ ನಿರ್ವಹಣೆ ನಿಟ್ಟಿನಲ್ಲಿ ನಿಗಾ ವಹಿಸುವುದು, ನಿರಂತರವಾಗಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆಯುವ, ಅಗತ್ಯ ಸಲಹೆ-ಸೂಚನೆ ನೀಡುವ ಕಾರ್ಯ ಕೈಗೊಂಡಿದ್ದರು. ಕಿಮ್ಸ್‌-ಜಿಲ್ಲಾಸ್ಪತ್ರೆಗಳಿಗೆ ಖುದ್ದಾಗಿ ಭೇಟಿ ನೀಡುವ ಮೂಲಕ ನಿರ್ವಹಣೆ ಹಾಗೂ ಚಿಕಿತ್ಸೆ ಕುರಿತು ವೀಕ್ಷಣೆ ಮಾಡುವ, ಮಾಹಿತಿ ಪಡೆಯುವ ಮೂಲಕ ಜನರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯ ಮಾಡಿದ್ದರು.

ಕೋವಿಡ್‌ ಲಸಿಕೆ ಬಗೆಗಿನ ವದಂತಿ, ಶಂಕೆ, ಗೊಂದಲ, ಅನುಮಾನ ನಿವಾರಣೆ ಹಾಗೂ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಜಗದೀಶ ಶೆಟ್ಟರ ಅವರು ಕಿಮ್ಸ್‌ ಆಸ್ಪತ್ರೆಯಲ್ಲಿ ಲಸಿಕೆ ಪಡೆಯುವ ಮೂಲಕ ಸಾರ್ವಜನಿಕರು ಲಸಿಕೆ ಪಡೆಯುವುದಕ್ಕೆ ಪ್ರೇರಣೆ ನೀಡಿದ್ದರು. ಜಿಲ್ಲೆಯಲ್ಲಿ ಕೋವಿಡ್‌ ಲಸಿಕೆ ಕೊರತೆ ಆಗದಂತೆ ನೋಡಿಕೊಳ್ಳುವಲ್ಲಿ ಶ್ರಮಿಸಿದ್ದರು. ಕೋವಿಡ್‌ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾದ ಅಸಂಘಟಿತ ಕಾರ್ಮಿಕರು, ಜನರಿಗೆ ನೆರವಾಗುವ ನಿಟ್ಟಿನಲ್ಲಿ ರಾಜ್ಯ ಸರಕಾರದ ಕಾರ್ಮಿಕ ಇಲಾಖೆಯಿಂದ ಬಂದ ಆಹಾರಧಾನ್ಯಗಳ ಕಿಟ್‌ಗಳ ವಿತರಣೆ ಸಮರ್ಪಕವಾಗಿ ನಡೆಯುವಂತೆ ನೋಡಿ ಕೊಂಡಿದ್ದರು. ತಮ್ಮದೇ ಕುಟುಂಬದ ಎಸ್‌.ಎಸ್‌.ಶೆಟ್ಟರ ಫೌಂಡೇಶನ್‌ನಿಂದ ಸಾವಿರಾರು ಜನರಿಗೆ ಆಹಾರಧಾನ್ಯಗಳ ಕಿಟ್‌ಗಳನ್ನು ವಿತರಿಸಿದ್ದಲ್ಲದೆ, ಇನ್ಫೋಸಿಸ್‌ ಪ್ರತಿಷ್ಠಾನ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಕಂಪನಿಗಳು ನೀಡಿದ ಆಹಾರಧಾನ್ಯಗಳ ಕಿಟ್‌, ಔಷಧ ಕಿಟ್‌ಗಳ ವಿತರಣೆಯಲ್ಲೂ ಪಾಲ್ಗೊಂಡಿದ್ದರು.

ಲಾಕ್‌ಡೌನ್‌ ನಡುವೆಯೇ ಕೃಷಿ ಕಾರ್ಯಕ್ಕೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಂಡಿದ್ದಲ್ಲದೆ ಕಂದಾಯ, ಕೃಷಿ, ತೋಟಗಾರಿಕಾ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕೃಷಿ ಚಟುವಟಿಕೆಗೆ ಯಾವುದೇ ತೊಂದರೆಯಾಗದಂತೆ ರೈತರಿಗೆ ಸಕಾಲಕ್ಕೆ ಬಿತ್ತನೆ ಬೀಜ, ರಸಗೊಬ್ಬರ ವಿತರಣೆಗೆ ತೊಂದರೆ- ಕೊರತೆ ಆಗದಂತೆ ನೋಡಿಕೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಜಿಲ್ಲೆಯಲ್ಲಿ ಸುಮಾರು 28 ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ನೆರವಾಗುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದರು.

ಅಭಿವೃದ್ಧಿಯ ಹರಿಕಾರ: ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಮೂಲಸೌಕರ್ಯ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುವ, ಉದ್ಘಾಟನೆಗೊಳಿಸುವ ಮೂಲಕ ಸಚಿವ ಜಗದೀಶ ಶೆಟ್ಟರ ಅವರು ಅಭಿವೃದ್ಧಿ ಹರಿಕಾರ ಎನಿಸಿದ್ದಾರೆ. ಅವಳಿನಗರದಲ್ಲಿ 24/7 ನೀರು ಪೂರೈಕೆ ಯೋಜನೆ ವಿಸ್ತರಣೆ, ಮಲಪ್ರಭಾ ನದಿಯಿಂದ ಅವಳಿನಗರಕ್ಕೆ ಸಗಟು ನೀರು ತರುವ, ಹುಬ್ಬಳ್ಳಿ-ಧಾರವಾಡದ ಎಲ್ಲ ವಾರ್ಡ್‌ ಗಳಿಗೆ 24/7 ನೀರು ಪೂರೈಕೆ ಯೋಜನೆ ವಿಸ್ತರಣೆ, ಕಾಮಗಾರಿ ಟೆಂಡರ್‌ ಪಡೆದ ಎಲ್‌ ಆ್ಯಂಡ್‌ ಟಿ ಕಂಪನಿಯೊಂದಿಗೆ ಚರ್ಚೆ, ಜೀವಜಲ ಯೋಜನೆಯಡಿ ಧಾರವಾಡ ಜಿಲ್ಲೆಯ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ತಲುಪಿಸುವ ಅಂದಾಜು 1,032 ಕೋಟಿ ರೂ.ಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ರಾಜ್ಯ ಸಚಿವ ಸಂಪುಟದಲ್ಲಿ ಆಡಳಿತಾತ್ಮಕ ಮಂಜೂರಾತಿ ಪಡೆಯುವಲ್ಲಿ ತೋರಿದ ಮುತುವರ್ಜಿ ಅಪಾರ.

ಅವಳಿನಗರದ ಮಧ್ಯದ ಬಿಆರ್‌ಟಿಎಸ್‌ ಯೋಜನೆ, ಕೇಂದ್ರ ಸರಕಾರದ ಸ್ಮಾರ್ಟ್‌ಸಿಟಿ ಯೋಜನೆ ಅಡಿಯಲ್ಲಿ ಮಾರುಕಟ್ಟೆಗಳ ಅಭಿವೃದ್ಧಿ, ಸಿಆರ್‌ಎಫ್‌ ನಿಧಿಯಡಿ ರಸ್ತೆಗಳ ದುರಸ್ತಿ, ಟೆಂಡರ್‌ ಶ್ಯುರ್‌ ರಸ್ತೆ, ತೋಳನಕರೆ, ಇಂದಿರಾ ಗಾಜಿನ ಮನೆ-ಮಹಾತ್ಮಗಾಂಧಿ ಉದ್ಯಾನವನ, ಕೆಲಗೇರಿ ಕೆರೆ, ಕೋಳಿಕೆರೆ, ಉಣಕಲ್ಲ ಕೆರೆ, ನೆಹರು ಮೈದಾನ ಅಭಿವೃದ್ಧಿ, ಗೋಕುಲ ಬಳಿ ಕ್ರೀಡಾ ಸಮುತ್ಛಯ ನಿರ್ಮಾಣ, ಚನ್ನಮ್ಮ ವೃತ್ತದ ಬಳಿ ಕೇಂದ್ರ ನೆರವಿನ ಫ್ಲೆ ಓವರ್‌ನಿರ್ಮಾಣ ಶ್ರೀಕಾರ ಹೀಗೆ ವಿವಿಧ ಅಭಿವೃದ್ಧಿ ಕಾರ್ಯಗಳ ಹಿಂದೆ ಶೆಟ್ಟರ ಅವರ ದೂರದೃಷ್ಟಿ, ಶ್ರಮ ಗೋಚರಿಸುತ್ತದೆ. ಬೃಹತ್‌ ಮತ್ತು ಕೈಗಾರಿಕಾ ಸಚಿವರಾಗಿ ಹುಬ್ಬಳ್ಳಿಯಲ್ಲಿ ಇನ್ವೆಸ್ಟ್‌ ಕರ್ನಾಟಕ ಕೈಗೊಳ್ಳುವ ಮೂಲಕ ಸ್ಥಳೀಯ ಉದ್ಯಮ ವಲಯಕ್ಕೆ ಚೇತನ ನೀಡುವ, ಹೊರಗಿನ ಉದ್ಯಮಿಗಳನ್ನು ಹೂಡಿಕೆಗೆ ಆಕರ್ಷಿಸುವ ಮಹತ್ವದ ಯತ್ನ ತೋರಿದ್ದರು. ಅದರ ಫಲವಾಗಿ ಏಕಸ್‌ ಸೇರಿದಂತೆ ವಿವಿಧ ಕಂಪನಿಗಳು ಹುಬ್ಬಳ್ಳಿ-ಧಾರವಾಡದಲ್ಲಿ ಹೂಡಿಕೆಗೆ ಮುಂದಾಗಿವೆ. ಸಾವಿ ರಾ ರು ಕೋಟಿ ರೂ.ಗಳ ಹೂಡಿಕೆ ಜತೆಗೆ, 25-30 ಸಾವಿರ ಉದ್ಯೋಗ ಸೃಷ್ಟಿ ಆಗಲಿದೆ. ಉದ್ಯಮಕ್ಕೆ ಪೂರಕವಾಗಿ ಮಮ್ಮಿಗಟ್ಟಿಯಲ್ಲಿ ಕೈಗಾರಿಕಾ ಪ್ರದೇಶಕ್ಕೆ ಚಾಲನೆ ನೀಡಲಾಗಿದೆ. ಹೀಗೆ ಸಚಿವ ಜಗದೀಶ ಶೆಟ್ಟರ ಅವರ ಪ್ರಯತ್ನದ ಫಲವಾಗಿ ಅನೇಕ ಅಭಿವೃದ್ಧಿ ಯೋಜನೆಗಳು ಅವಳಿನಗರಕ್ಕಾಗಮಿಸಿವೆ, ಇನ್ನಷ್ಟು ಹರಿದು ಬರುತ್ತಿವೆ.

ಕೈಗಾರಿಕೆಗಳಿಗೆ ಪ್ರತ್ಯೇಕ ಆಸ್ತಿ ತೆರಿಗೆ ಸ್ಲಾಬ್‌
ಕೊರೊನಾ ಸಂಕಷ್ಟ ಎದುರಿಸುತ್ತಿರುವ ಕೈಗಾರಿಕೆಗಳಿಗೆ ಅನುಕೂಲ ಕಲ್ಪಿಸಲು ವಸತಿ ಮತ್ತು ವಾಣಿಜ್ಯ ಆಸ್ತಿ ತೆರಿಗೆಗಳ ಮಧ್ಯದಲ್ಲಿ ಕೈಗಾರಿಕೆಗಳಿಗೆ ಪ್ರತ್ಯೇಕ ಆಸ್ತಿ ತೆರಿಗೆ ಸ್ಲಾಬ್‌ ಘೋಷಿಸಲು ತೀರ್ಮಾನಿಸಲಾಗಿದೆ. ವಸತಿ ಮತ್ತು ವಾಣಿಜ್ಯ ಆಸ್ತಿ ತೆರಿಗೆಯ ಮಧ್ಯಸ್ಥವಾಗಿ ಕೈಗಾರಿಕೆಗಳಿಗೆ ಪ್ರತ್ಯೇಕ ಸ್ಲಾಬ್‌ ಘೋಷಿಸುವ ಬಗ್ಗೆ ಕೈಗಾರಿಕಾ, ನಗರಾಭಿವೃದ್ಧಿ ಹಾಗೂ ಪೌರಾಡಳಿತ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ಸಹ ನಡೆಸಲಾಗಿದೆ. ಆಸ್ತಿ ತೆರಿಗೆಯಲ್ಲಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಕೈಗಾರಿಕೋದ್ಯಮಿಗಳು ಸಾಕಷ್ಟು ಬಾರಿ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಈ ಬಗ್ಗೆ ಈಗಾಗಲೇ ನಗರಾಭಿವೃದ್ಧಿ ಹಾಗೂ ಕೈಗಾರಿಕಾ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಹಲವಾರು ಬಾರಿ ಸಭೆಗಳನ್ನು ನಡೆಸಲಾಗಿದೆ. ವಸತಿ ಮತ್ತು ವಾಣಿಜ್ಯ ಆಸ್ತಿ ತೆರಿಗೆಯ ಮಧ್ಯಸ್ಥವಾಗಿ ಕೈಗಾರಿಕೆಗಳಿಗೆ ನೂತನ ಸ್ಲಾಬ್‌ ರಚಿಸಬೇಕು ಎನ್ನುವುದು ಮೂಲ ಉದ್ದೇಶ.

ಹಳೆಯ ತೆರಿಗೆ; ಗೊಂದಲ ಪರಿಹಾರ
ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಹಾಗೂ ಕೆಎಸ್‌ಎಸ್‌ಐಡಿಸಿ ವತಿಯಿಂದ ಅಭಿವೃದ್ಧಿ ಪಡಿಸಲಾದ ಕೈಗಾರಿಕಾ ಪ್ರದೇಶಗಳನ್ನು ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರ ಮಾಡುವ ಮುನ್ನ ತೆರಿಗೆ ಸಂಗ್ರಹ ಮಾಡುವ ಹಾಗಿಲ್ಲ. ಆದರೆ ಕೆಲವು ಕಡೆ ಸ್ಥಳೀಯ ಸಂಸ್ಥೆಗಳು ತೆರಿಗೆ ಸಂಗ್ರಹಿಸುತ್ತಿವೆ. ಆದರೆ ತೆರಿಗೆ ನೀಡುವ ಕೈಗಾರಿಕೆಗಳು ಸ್ಥಳೀಯ ಸಂಸ್ಥೆಗಳಿಂದ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಆಗದೇ ಇರುವ ಹಿನ್ನೆಲೆಯಲ್ಲಿ ಹಲವಾರು ದೂರು ನೀಡುತ್ತಿದ್ದಾರೆ. ಹಳೆಯ ತೆರಿಗೆಯ ಬಗ್ಗೆ ಒಂದು ಸ್ಪಷ್ಟವಾದ ವೈಜ್ಞಾನಿಕ ನಿರ್ಧಾರ ಕೈಗೊಳ್ಳುವ ಅಗತ್ಯವಿದೆ ಎಂಬುದನ್ನು ಮನಗಂಡು ಕ್ರಮ ಕೈಗೊಳ್ಳಲಾಗಿದೆ.

ಪೀಣ್ಯ ಕೈಗಾರಿಕಾ ಟೌನ್‌ಶಿಪ್‌
ರಾಜ್ಯದಲ್ಲಿ ಕೈಗಾರಿಕಾ ಟೌನ್‌ಶಿಪ್‌ಗ್ಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಈ ನಿಟ್ಟಿನಲ್ಲಿ ಈಗಾಗಲೇ ಹಲವಾರು ಸುತ್ತಿನ ಚರ್ಚೆಗಳು ನಡೆದಿವೆ. ಆದರೆ ಇವುಗಳ ಘೋಷಣೆಗಾಗಿ ಹಲವಾರು ಇಲಾಖೆಗಳ ಅನುಮತಿ ಅಗತ್ಯವಿದ್ದು, ಇನ್ನು ಕೆಲವೇ ದಿನಗಳಲ್ಲಿ ಸಚಿವ ಸಂಪುಟದ ಮುಂದೆ ವಿಷಯ ಮಂಡನೆಯಾಗಲಿದೆ.

ಟೌನ್‌ಶಿಪ್‌-ಹಲವು ಸುತ್ತಿನ ಚರ್ಚೆ
ಟೌನ್‌ಶಿಪ್‌ಗ್ಳನ್ನು ನಿರ್ಮಿಸುವ ಬಗ್ಗೆ ಈಗಾಗಲೇ ಹಲವಾರು ಸುತ್ತಿನ ಚರ್ಚೆಗಳು ನಗರಾಭಿವೃದ್ಧಿ ಇಲಾಖೆ ಜತೆ ಮಾಡಲಾಗಿದೆ. ಟೌನ್‌ಶಿಪ್‌ಗ್ಳನ್ನು ನಿರ್ಮಿಸುವ ಮೂಲಕ ಸಂಗ್ರಹವಾಗುವ ಆದಾಯದಲ್ಲಿ ಶೇ. 70 ಟೌನ್‌ಶಿಪ್‌ ಆಡಳಿತ ಮಂಡಳಿಗೆ ಹಾಗೂ ಶೇ. 30 ಸ್ಥಳೀಯ ಸಂಸ್ಥೆಗಳಿಗೆ ನೀಡುವುದರಿಂದ ಎರಡೂ ಕಡೆ ಅಭಿವೃದ್ಧಿಗೆ ಒತ್ತು ನೀಡಲು ಸರ್ಕಾರ ಮುಂದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next