ಸುಕೇಶ್ ಚಂದ್ರಶೇಖರ್ ಎಂಬವರಿಗೆ ಸಂಬಂಧಿಸಿದ 200 ಕೋಟಿ ರೂ. ಸುಲಿಗೆ ಪ್ರಕರಣದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ ಜಾರಿ ನಿರ್ದೇಶನಾಲಯ(ಇಡಿ) ಶನಿವಾರ ಸತತ ಮೂರನೇ ಬಾರಿಗೆ ವಿಚಾರಣೆಗಾಗಿ ಸಮನ್ಸ್ ನೀಡಿದ್ದು, ನಟಿ ಅದನ್ನೂ ತಪ್ಪಿಸಿಕೊಂಡಿದ್ದಾರೆ.
ವೃತ್ತಿ ಜೀವನದ ಅನೇಕ ಕಮಿಟ್‌ಮೆಂಟ್‌ಗಳು ಇರುವ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ ಎನ್ನ ಲಾಗಿದೆ. ವಿಚಾರಣೆಯನ್ನು ಮುಂದಿನ ತಿಂಗಳ ಮೊದಲ ವಾರ ನಡೆಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ವಂಚನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈ ಹಿಂದೆ ಜಾಕ್ವೆಲಿನ್ ಅವರನ್ನು 5 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದರು. ಮುಖ್ಯ ಆರೋಪಿ ಸುಕೇಶ್ ಚಂದ್ರಶೇಖರ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಅವರು ಹಲವು ಬಾರಿ ದೂರವಾಣಿ ಮೂಲಕ ಮಾತನಾಡಿರುವುದು ಅಧಿಕಾರಿಗಳಿಗೆ ತಿಳಿದುಬಂದಿದೆ. ಇಬ್ಬರ ನಡುವಿನ ವ್ಯವಹಾರ ಯಾವ ರೀತಿ ಇತ್ತು? 200 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಜಾಕ್ವೆಲಿನ್ ಕೈವಾಡ ಇದೆಯೋ ಇಲ್ಲವೋ ಎಂಬುದನ್ನು ಅಧಿಕಾರಿಗಳು ಪತ್ತೆ ಹಚ್ಚುತ್ತಿದ್ದಾರೆ.
ಸುಕೇಶ್ ಚಂದ್ರಶೇಖರ್ ಒಡೆತನದಲ್ಲಿ ಇದ್ದ ಚೆನ್ನೈನ ಬಂಗಲೆ, 82 ಲಕ್ಷ ರೂ. ಹಣ ಹಾಗೂ 10ಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನು ಇಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಶ್ರೀಲಂಕಾ ಮೂಲಕ ಜಾಕ್ವೆಲಿನ್ ಅವರು ಬಾಲಿವುಡ್ನಲ್ಲಿ ಭಾರಿ ಬೇಡಿಕೆಯ ನಟಿಯಾಗಿದ್ದಾರೆ. ಸಲ್ಮಾನ್ ಖಾನ್ ವಲಯದಲ್ಲಿ ಅವರು ಹೆಚ್ಚು ಗುರುತಿಸಿಕೊಂಡಿದ್ದಾರೆ. ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ ಮೂಲಕ ಅವರು ಕನ್ನಡ ಚಿತ್ರರಂಗಕ್ಕೂ ಕಾಲಿಡುತ್ತಿದ್ದಾರೆ.