ಹಾಂಕಾಂಗ್: ಆ್ಯಕ್ಷನ್ ಹೀರೋ ಜಾಕಿಚಾನ್ ತನ್ನ ಸ್ಟಂಟ್‌ಗಳಿಂದ ಜಗದ್ವಿಖ್ಯಾತಿ ಗಳಿಸಿ, ಅಭಿಮಾನಿಗಳ ಹೃದಯ ಸಾಮ್ರಾಟನಾಗಿ ಮೆರೆಯುತ್ತಿದ್ದರೆ ಅವರ ಪುತ್ರಿ ನೆಲೆಸಲು ಸರಿಯಾದ ಸೂರಿಲ್ಲದೆ ಹಾಂಕಾಂಗ್‌ನ ಬೀದಿ ಬೀದಿ ಅಲೆಯುತ್ತಿದ್ದಾಳೆ. ಆಶ್ಚರ್ಯವಾದರೂ ಇದು ಸತ್ಯ. ತನ್ನ ಸ್ಥಿತಿಯ ಬಗ್ಗೆ ಸ್ವತಃ ಆಕೆಯೇ ವೀಡಿಯೋ ಮಾಡಿ ಯೂಟ್ಯೂಬ್ ನಲ್ಲಿ ಅಪ್‌ಲೋಡ್ ಮಾಡಿದ್ದಾಳೆ. ಪ್ರಸ್ತುತ ಎಟ್ಟಾ ಎನ್ ಜಿ (18) ತನ್ನ ಪ್ರೇಯಸಿಯ ಜತೆ ಹಾಂಕಾಂಗ್ ನ ಸೇತುವೆಯೊಂದರ ಕೆಳಗೆ ವಾಸಿಸುತ್ತಿದ್ದಾಳಂತೆ. ನನ್ನ ಈ ಸ್ಥಿತಿಗೆ ಹೆತ್ತವರೇ ಕಾರಣ ಎಂದೂ ಆಕೆ ಆರೋಪಿಸಿದ್ದಾಳೆ.
ಸಲಿಂಗಕಾಮಿಗಳೆಂದು ದೂರ ಮಾಡಿದರು
ಅಪ್ಪ ಜಾಕಿಚಾನ್ ಮತ್ತು ಅಮ್ಮ, ಮಾಜಿ ರೂಪದರ್ಶಿ ಎಲೈನ್ ಎನ್.ಜಿ. ಇಬ್ಬರಿಂದಲೂ ಎಟ್ಟಾ ದೂರವಾಗಿದ್ದಾಳೆ. ನಾನು ನನ್ನ ಪ್ರೇಯಸಿಯ ಜತೆ ಬದುಕುತ್ತಿದ್ದೇನೆ. ನಾವು ಸಲಿಂಗಕಾಮಿಗಳು ಎಂದು ನಮ್ಮ ಪೋಷಕರು ನಮ್ಮನ್ನು ದೂರ ಮಾಡಿದ್ದಾರೆ. ಒಂದು ತಿಂಗಳಿನಿಂದ ಮನೆ ಇಲ್ಲದೆ ಅಡ್ಡಾಡುತ್ತಿದ್ದೇವೆ. ನಮ್ಮ ಇವತ್ತಿನ ಸ್ಥಿತಿಗೆ ಪೋಷಕರೇ ಕಾರಣ ಎಂದು ದೂರಿದ್ದಾಳೆ. ನಾವು ಪೊಲೀಸ್ ಠಾಣೆ, ಆಹಾರ ನಿಧಿ, ಲೈಂಗಿಕ ಅಲ್ಪಸಂಖ್ಯಾಕರ ಸಹಾಯ ಕೇಂದ್ರಗಳಿಗೆ ಹೋಗಿ ಸಹಾಯ ಬೇಡಿದರೂ ನಮ್ಮನ್ನು ಯಾರೂ ಸೇರಿಸಿಕೊಳ್ಳಲಿಲ್ಲ ಎಂದೂ ಎಟ್ಟಾ ಹೇಳಿದ್ದಾಳೆ.
ಈ ವೀಡಿಯೋಗೆ ಪ್ರತಿಕ್ರಿಯೆ ನೀಡಿರುವ ಅಮ್ಮ ಎಲೈನ್, ಮಗಳ ಆರೋಪಗಳನ್ನು ತಳ್ಳಿಹಾಕಿದ್ದಾರೆ. ‘ಆಕೆಗೆ ದುಡ್ಡಿನ ಅಗತ್ಯವಿದ್ದರೆ ಯಾವುದಾದರೂ ಕೆಲಸ ಹುಡುಕಿ ದುಡಿದು ಹಣ ಸಂಪಾದಿಸಲಿ. ಯಾರೂ ಪೋಷಕರ ಖ್ಯಾತಿಯ ಮೇಲೆ ಬದುಕು ಕಟ್ಟಿಕೊಳ್ಳಲಾಗುವುದಿಲ್ಲ’ ಎಂದಿದ್ದಾರೆ.
ಹಾಲಿ ಪತ್ನಿ ಜಾನ್ ಲಿನ್ ಅವರನ್ನು ವಿವಾಹವಾಗುವುದಕ್ಕೂ ಮುನ್ನ, ಜಾಕಿಚಾನ್ ಅವರು ಮಾಜಿ ಬ್ಯೂಟಿ ಕ್ವೀನ್ ಎಲೈನ್ ಎನ್.ಜಿ. ಅವರೊಂದಿಗೆ ಪ್ರೇಮ ಸಂಬಂಧ ಹೊಂದಿದ್ದರು. ಇವರಿಗೆ ಹುಟ್ಟಿದ ಮಗುವೇ ಎಟ್ಟಾ ಎನ್.ಜಿ. 64 ವರ್ಷದ ಜಾಕಿಚಾನ್ ಅವರು ತನ್ನ ಪುತ್ರಿಯ ಬಗ್ಗೆ ಎಲ್ಲೂ ಸಾರ್ವಜನಿಕವಾಗಿ ಮಾತನಾಡದಿದ್ದರೂ ಮಗಳಿರುವುದನ್ನು ಒಪ್ಪಿಕೊಂಡಿದ್ದರು.
– ಸೇತುವೆ ಕೆಳಗೆ ವಾಸಿಸುತ್ತಿರುವ ಎಟ್ಟಾ ಎನ್.ಜಿ.
– ಈ ದುಃಸ್ಥಿತಿಗೆ ಹೆತ್ತವರೇ ಕಾರಣ ಎಂದು ಆರೋಪ