ಜಮ್ಮು: ”ಅಬ್ದುಲ್ಲಾ, ಮುಫ್ತಿ ಮತ್ತು ನೆಹರು-ಗಾಂಧಿ ಕುಟುಂಬಗಳು 90 ರ ದಶಕದಿಂದ ಇಲ್ಲಿಯವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಹರಡಿದವು” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ(ಸೆ21) ಕಿಡಿ ಕಾರಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಎಡೆಬಿಡದೆ ಹಲವು ಕಡೆ ಪ್ರಚಾರ ಕಾರ್ಯಗಳಲ್ಲಿ ಶಾ ಭಾಗಿಯಾದರು. ಮೆಂಧರ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಮತ್ತು ವಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಇಂದು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಕೊನೆಗೊಳಿಸುತ್ತಿದೆ. ಯುವಕರಿಗೆ ಕಲ್ಲುಗಳ ಬದಲಿಗೆ ಲ್ಯಾಪ್‌ಟಾಪ್ ನೀಡಲಾಗಿದೆ. ಓಮರ್ ಅಬ್ದುಲ್ಲಾ, ಕೇಳಿಸಿಕೋ, ಮೋದಿ ಸರಕಾರವು ಭಯೋತ್ಪಾದನೆಯನ್ನು ಈ ಸುಂದರವಾದ ಬೆಟ್ಟಗಳನ್ನು ಪ್ರವೇಶಿಸಲು ಬಿಡುವುದಿಲ್ಲ ಎಂದು ಅಬ್ಬರಿಸಿದರು.
ರಾಜೌರಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿ ‘ಜಮ್ಮು ಮತ್ತು ಕಾಶ್ಮೀರದ ಜನರ ಹಕ್ಕುಗಳನ್ನು ರಕ್ಷಿಸುವುದು ಮತ್ತು ಇಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ತ್ವರಿತವಾಗಿ ಮುಂದುವರಿಸುವುದು ಮೋದಿ ಸರಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ’ ಎಂದರು.
”90 ರ ದಶಕದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಗುಂಡಿನ ದಾಳಿ ನಡೆಯುತ್ತಿತ್ತು ಏಕೆಂದರೆ ಇಲ್ಲಿನ ಯಜಮಾನರು ಪಾಕಿಸ್ಥಾನಕ್ಕೆ ಹೆದರುತ್ತಿದ್ದರು. ಈಗ ಪಾಕಿಸ್ಥಾನವು ಮೋದಿ ಜಿಗೆ ಹೆದರುತ್ತಿದೆ” ಎಂದರು.
‘ರಾಹುಲ್ ಗಾಂಧಿಯವರ ಮೊಹಬ್ಬತ್ ಕಿ ದುಖಾನ್ ನಿಂದ ಭಯೋತ್ಪಾದನೆಯ ಆದೇಶ ಹೊರಬೀಳುತ್ತಿದೆ.ಭಯೋತ್ಪಾದನೆಗಾಗಿ ಬಂದೂಕು ಹಿಡಿದಿದ್ದ ಜಮ್ಮು-ಕಾಶ್ಮೀರದ ಯುವಕರು ಈಗ ದೇಶದ ಭದ್ರತೆಗಾಗಿ ಬಂದೂಕು ಹಿಡಿಯಲಿದ್ದಾರೆ” ಎಂದರು.
”NC, ಕಾಂಗ್ರೆಸ್ ಮತ್ತು PDP ಯ ರಾಜವಂಶದ ಸರಕಾರಗಳು ಯಾವಾಗಲೂ ಜಮ್ಮುವಿನ ವಿರುದ್ಧ ತಾರತಮ್ಯವನ್ನು ಹೊಂದಿವೆ. ಪಕ್ಷಪಾತದಿಂದಾಗಿ ಜಮ್ಮು ಮತ್ತು ಕಾಶ್ಮೀರದ ಈ ಚುನಾವಣೆಯಲ್ಲಿ ಜನರು ಈ ಕುಟುಂಬಗಳ ಅಂಗಡಿಗಳಿಗೆ ಶಾಶ್ವತವಾಗಿ ಬೀಗ ಹಾಕಲು ಹೊರಟಿದ್ದಾರೆ ಮತ್ತು ಬಿಜೆಪಿಯನ್ನು ಮಾತ್ರ ಅಧಿಕಾರಕ್ಕೆ ತರಲಿದ್ದಾರೆ” ಎಂದು ಹೇಳಿದರು.