ಕನ್ನಡದ ನಟ ಜಯರಾಮ್ ಕಾರ್ತಿಕ್ (ಜೆ.ಕೆ) ಕನ್ನಡದ ಜೊತೆಗೆ ಹಿಂದಿ ಕಿರುತೆರೆಯಲ್ಲೂ ಅಭಿನಯಿಸಿದ್ದು ಗೊತ್ತಿರಬಹುದು. ಈಗ ಜೆ.ಕೆ ಹಿಂದಿಯಲ್ಲಿ ಅಭಿನಯಿಸಿರುವ “ಓ ಪುಷ್ಪಾ ಐ ಹೇಟ್ ಟಿಯರ‍್ಸ್’ ಚಿತ್ರ ಈ ವಾರ ತೆರೆಗೆ ಬರುತ್ತಿದೆ. ಸುಮಾರು 70ರ ದಶಕದ ಹಿಂದಿಯ ಸೂಪರ್‌ಹಿಟ್ ಚಿತ್ರ “ಅಮರ್ ಪ್ರೇಮ್’ದಲ್ಲಿ ನಾಯಕ ರಾಜೇಶ್ ಖನ್ನಾ ಹೇಳುವ “ಓ ಪುಷ್ಪಾ ಐ ಹೇಟ್ ಟಿಯರ‍್ಸ್’ ಎನ್ನುವ ಡೈಲಾಗ್ ಸಾಕಷ್ಟು ಜನಪ್ರಿಯವಾಗಿತ್ತು.
ಈಗ ಅದೇ ಹೆಸರಲ್ಲಿ ಈ ಚಿತ್ರ ತೆರೆಗೆ ಬರುತ್ತಿದೆ. ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ನಿರ್ಮಾಣವಾಗಿರುವ “ಓ ಪುಷ್ಪಾ ಐ ಹೇಟ್ ಟಿಯರ‍್ಸ್’ ಚಿತ್ರ ಸುಮಾರು 50 ಕೇಂದ್ರಗಳಲ್ಲಿ ಬಿಡುಗಡೆಯಾಗುತ್ತಿದೆ. ಇನ್ನು ತಮ್ಮ ಚಿತ್ರದ ಬಗ್ಗೆ ಮಾತನಾಡುವ ನಾಯಕ ಜೆ.ಕೆ, “ಬಿಗ್‌ಬಾಸ್ ನಂತರ ಹಿಂದಿ ಧಾರವಾಹಿ “ರಾವಣ’ದಲ್ಲಿ ಅಭಿನಯಿಸುವಾಗ ನಿರ್ದೇಶಕರು ಕರೆ ಮಾಡಿ ಈ ಸಿನಿಮಾಕ್ಕೆ ಅವಕಾಶ ನೀಡಿದ್ದಾರೆ.
ನಿರ್ಮಾಪಕ ಅಮೂಲ್ಯ ಕುಮಾರ್‌ದಾಸ್ ಫಿಲ್ಮ್ ಅಟ್ 50 ಬ್ಯಾನರ್ ಮೂಲಕ ಬಂಡವಾಳ ಹೂಡಿ ಈ ಸಿನಿಮಾ ನಿರ್ಮಿಸಿದ್ದಾರೆ. ಕಪಿಲ್ ಶರ್ಮ ಅವರ ಶೋದಲ್ಲಿ ಹೆಸರು ಮಾಡಿರುವ ಕೃಷ್ಣಾ ಅಭಿಷೇಕ್ ಸಿನಿಮಾದ ಮತ್ತೂಂದು ಮುಖ್ಯ ಪಾತ್ರದಲ್ಲಿ ಕಾಮಿಡಿ ವಿಲನ್ ಆಗಿ ಅಭಿನಯಿಸಿದ್ದಾರೆ. ಪತಿ, ಪತ್ನಿ ಹಾಗೂ ವಿವಾಹೇತರ ಸಂಬಂಧದ ಕಥೆ ಇದರಲ್ಲಿದೆ. ಇಂದಿನ ಆಡಿಯನ್ಸ್‌ಗೆ ಇಷ್ಟವಾಗುವಂತೆ ಈ ಸಿನಿಮಾ ಮೂಡಿ ಬಂದಿದೆ’ ಎಂದು ಮಾಹಿತಿ ನೀಡಿದ್ದಾರೆ.
ನಿರ್ದೇಶಕ ದಿನಕರ್ ಕಪೂರ್ ಹೇಳುವಂತೆ, “ಪ್ರೀತಿಯನ್ನು ಯಾರು ಬಿಡಲು ಆಗುವುದಿಲ್ಲ ಎನ್ನುವ ಪರಿಕಲ್ಪನೆಯೊಂದಿಗೆ ಸಿನಿಮಾದ ಸನ್ನಿವೇಶಗಳು ಮೂಡಿ ಬಂದಿವೆ. ಕ್ಲೈಮಾಕ್ಸ್‌ನಲ್ಲಿ ಭಾರತೀಯ ಸಂಸ್ಕೃತಿ ಶ್ರೇಷ್ಠವೆಂಬ ಸಂದೇಶವಿದೆ’ ಎನ್ನುತ್ತಾರೆ ದಿನಕರ್ ಕಪೂರ್. ರೋಮಾನ್ಸ್, ಕಾಮಿಡಿ ಮತ್ತು ಥ್ರಿಲ್ಲರ್ ಕಥಾಹಂದರ ಹೊಂದಿರುವ “ಓ ಪುಷ್ಪಾ ಐ ಹೇಟ್ ಟಿಯರ‍್ಸ್’ ಚಿತ್ರದಲ್ಲಿ ನಾಯಕ ಜೆ.ಕೆ ಅವರಿಗೆ ಅರ್ಜುಮನ್ ಮುಘಲ್, ಅನುಸ್ಮತಿ ಸರ್ಕಾರ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.
ಮುಂಬೈ, ಭುವನೇಶ್ವರ್ ಇತರೆಡೆ “ಓ ಪುಷ್ಪಾ ಐ ಹೇಟ್ ಟಿಯರ‍್ಸ್’ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಚಿತ್ರಕ್ಕೆ ರಾಮ್‌ಜಿ ಗುಲಾಟಿ ಸಂಗೀತ ನೀಡಿದರೆ, ರವಿಂದ ಸಿಂಹ ಛಾಯಾಗ್ರಹಣ ಮಾಡಿದ್ದಾರೆ. ಅದೇನೆ ಇರಲಿ, ಕನ್ನಡದ ಜೊತೆಗೆ ಬಾಲಿವುಡ್ ಅಂಗಳಕ್ಕೂ ಕಾಲಿಡುತ್ತಿರುವ ಜೆ.ಕೆ ಗೆ “ಓ ಪುಷ್ಪಾ ಐ ಹೇಟ್ ಟಿಯರ‍್ಸ್’ ಎಷ್ಟರ ಮಟ್ಟಿಗೆ ಕೈಹಿಡಿಯಲಿದೆ ಅನ್ನೋದು ಇದೇ ವಾರಾಂತ್ಯಕ್ಕೆ ಗೊತ್ತಾಗಲಿದೆ.