Advertisement

J-K Election: ಚುನಾವಣೆ ಫ‌ಲಿತಾಂಶಕ್ಕೂ ಮೊದಲೇ 5 ಶಾಸಕರ ನಾಮನಿರ್ದೇಶನ: ಕಾಂಗ್ರೆಸ್‌ ಆಕ್ಷೇಪ

09:33 PM Oct 05, 2024 | Team Udayavani |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಗೆ ಮತದಾನ ಮುಗಿದು ಫಲಿತಾಂಶ ಪ್ರಕಟಕ್ಕೂ ಮೊದಲೇ ವಿಧಾನಸಭೆಗೆ ಐವರು ಸದಸ್ಯರ ನಾಮ ನಿರ್ದೇಶನಗೊಳಿಸಿದ್ದಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

Advertisement

ವಿಧಾನಸಭೆಗೆ ಐವರು ಸದಸ್ಯರ ನಾಮ ನಿರ್ದೇಶನಕ್ಕೆ ಕೇಂದ್ರ ಗೃಹ ಸಚಿವಾಲಯ ಸೂಚಿಸಿದ್ದು, ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಒಪ್ಪಿಗೆ ನೀಡಿದ್ದಾರೆ. ಕಾಂಗ್ರೆಸ್ ನಾಯಕರು ಈ ಕ್ರಮವನ್ನು ಪ್ರಜಾಪ್ರಭುತ್ವದ ತತ್ವಗಳು ಮತ್ತು ಸಂವಿಧಾನದ ಮೇಲಿನ ದಾಳಿ, ಈ ನಾಮನಿರ್ದೇಶನ ಸರ್ಕಾರ ರಚನೆಯ ಮೇಲೆ ಪರಿಣಾಮ ಬೀರಲಿದೆ ಎಂದು ಕಾಂಗ್ರೆಸ್‌ ಹೇಳಿದೆ ಹಾಗೂ ಐವರು ಪ್ರತಿನಿಧಿಗಳ ನಾಮನಿರ್ದೇಶನ ಅನುಮೋದಿಸದಂತೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾಗೆ ಆಗ್ರಹಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಪ್ರದೇಶ ಕಾಂಗ್ರೆಸ್ ಸಮಿತಿ (ಜೆಕೆಪಿಸಿಸಿ) ಹಿರಿಯ ಉಪಾಧ್ಯಕ್ಷ ರವೀಂದರ್ ಶರ್ಮಾ ಮಾತನಾಡಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ರಚನೆಗೂ ಮುನ್ನ ಲೆಫ್ಟಿನೆಂಟ್ ಗವರ್ನರ್ ಐವರು ಶಾಸಕರ ನಾಮನಿರ್ದೇಶನವನ್ನು ನಾವು ವಿರೋಧಿಸುತ್ತೇವೆ. ಅಂತಹ ಯಾವುದೇ ಕ್ರಮವು ಪ್ರಜಾಪ್ರಭುತ್ವ, ಜನರ ಆದೇಶ ಮತ್ತು ಸಂವಿಧಾನದ ಮೂಲಭೂತ ತತ್ವಗಳ ಮೇಲಿನ ಆಕ್ರಮಣ ಎಂದು ಹೇಳಿದ್ದಾರೆ.

ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರವೇ ನಾಮನಿರ್ದೇಶನಗಳ ಮಾಡಬೇಕೆಂದು ಕಾಂಗ್ರೆಸ್ ಕರೆ ನೀಡಿದೆ. ಬೇರೆ ಯಾವುದೇ ವಿಧಾನವು ಜನರ ಆದೇಶಕ್ಕೆ ದ್ರೋಹವಾಗುತ್ತದೆ ಎಂದು ಸಮರ್ಥಿಸಿಕೊಂಡಿದೆ.  ಲೆಫ್ಟಿನೆಂಟ್ ಗವರ್ನರ್ ಅನುಮೋದಿಸಿದ ನಾಮನಿರ್ದೇಶನಗಳು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯಿದೆ, 2019ಕ್ಕೆ ಮಾಡಿದ ತಿದ್ದುಪಡಿಗಳ ಭಾಗವಾಗಿದೆ.

ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯಿದೆಯಡಿ, ಕಾಶ್ಮೀರಿ ಪಂಡಿತರು ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದ ನಿರಾಶ್ರಿತರಿಗೆ ಪ್ರಾತಿನಿಧ್ಯ ಸೇರಿದಂತೆ 5 ಸದಸ್ಯರನ್ನು ನಾಮನಿರ್ದೇಶಿಸುವ ಅಧಿಕಾರ ಲೆಫ್ಟಿನೆಂಟ್ ಗವರ್ನರ್ ಹೊಂದಿದ್ದಾರೆ. ಆದರೆ, ಲೆಫ್ಟಿನೆಂಟ್ ಗವರ್ನರ್ ಚುನಾವಣೆಯ ನಂತರ ರಚನೆಯಾಗುವ ಸಚಿವ ಸಂಪುಟ ಸಲಹೆ ಆಧರಿಸಿ ಮಾತ್ರ ಕಾರ್ಯನಿರ್ವಹಿಸಬೇಕು ಎಂದು ಕಾಂಗ್ರೆಸ್ ವಾದಿಸಿದೆ.

Advertisement

ಚುನಾವಣೆಯ ನಂತರದ ಬಹುಮತ ಅಥವಾ ಅಲ್ಪ ಮತ ಸ್ಥಿತಿ ಬದಲಾಯಿಸಲು ನಾಮನಿರ್ದೇಶನದ ನಿಬಂಧನೆ ದುರುಪಯೋಗಪಡಿಸಿಕೊಳ್ಳುವುದು ಒಳ್ಳೆಯದಲ್ಲ. ಸರ್ಕಾರ ರಚನೆಯ ಮೊದಲು ಅಂತಹ ನಾಮನಿರ್ದೇಶನ “ಅಸಾಂವಿಧಾನಿಕ” ಎಂದು ಕಾಂಗ್ರೆಸ್ ಟೀಕಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next