Advertisement

J-K Election: ಆರ್ಟಿಕಲ್ 370 ಇತಿಹಾಸಕ್ಕೆ ಸೇರಿದೆ, ಮತ್ತೆ ಎಂದೂ ಜಾರಿಯಾಗಲ್ಲ: ಅಮಿತ್‌ ಶಾ

08:01 PM Sep 06, 2024 | Team Udayavani |

ಹೊಸದಿಲ್ಲಿ: ಜಮ್ಮು-ಕಾಶ್ಮೀರಕ್ಕೆ ಸಂವಿಧಾನದಲ್ಲಿ ನೀಡಿದ್ದ  370ನೇ ವಿಧಿ, ವಿಶೇಷ ಸ್ಥಾನಮಾನ ರದ್ದುಗೊಂಡು ಇತಿಹಾಸದ ಪುಟಕ್ಕೆ ಸೇರಿಯಾಗಿದೆ ಅದು ಮತ್ತೆ ಎಂದಿಗೂ ಪುನರ್‌ಸ್ಥಾಪನೆಯಾಗಲು ಸಾಧ್ಯವಿಲ್ಲ, ನಾವು ಅದನ್ನು ಜಾರಿ ಮಾಡಲು ಬಿಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

Advertisement

ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾದ್ದರಿಂದ ಶುಕ್ರವಾರ ಬಿಜೆಪಿಯ ಚುನಾವಣೆ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ  “ಜಮ್ಮು-ಕಾಶ್ಮೀರದಲ್ಲಿ ಜಾರಿಯಲ್ಲಿದ್ದ ಆರ್ಟಿಕಲ್ 370 ಸಂವಿಧಾನದ ಭಾಗವಲ್ಲ. ಆ ವಿಧಿಯು  ರಾಜ್ಯದ  ಯುವಕರ ಕೈಯಲ್ಲಿ ಶಸ್ತ್ರಾಸ್ತ್ರಗಳು ಮತ್ತು ಕಲ್ಲುಗಳ ನೀಡಿತು. ಭಯೋತ್ಪಾದನೆಯ ಹಾದಿಯನ್ನು ತುಳಿಯಲು ಯುವಕರಿಗೆ ಅವಕಾಶ ಮಾಡಿಕೊಟ್ಟಿತು ಎಂದು ಕಿಡಿಕಾರಿದರು.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿರುವ ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷವು ಆರ್ಟಿಕಲ್‌ 370 ಪುನರ್‌ ಸ್ಥಾಪಿಸುವ ಬಗ್ಗೆ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದ್ದನ್ನು ಶಾ ಆಕ್ಷೇಪಿಸಿದರು. ಕೇಂದ್ರ ಸರಕಾರವು 2019ರಲ್ಲಿ 370ನೇ ವಿಧಿ ರದ್ದುಗೊಳಿಸಿದೆ. 2014ರ ಬಳಿಕ ಕಣಿವೆ ರಾಜ್ಯದಲ್ಲಿ ಮೊದಲ ಬಾರಿ ವಿಧಾನಸಭಾ  ಚುನಾವಣೆ ನಡೆಯುತ್ತಿದೆ.

ಜಮ್ಮು ಮತ್ತು ಕಾಶ್ಮೀರವು 2014ರವರೆಗೆ ವಿವಿಧ ರಾಜ್ಯ ಮತ್ತು ರಾಜ್ಯೇತರ ಶಕ್ತಿಗಳಿಂದ ಅಸ್ಥಿರತೆ ಎದುರಿಸುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿನ ಪರಿಸ್ಥಿತಿ ನಿಭಾಯಿಸಲು ಇತರ ಎಲ್ಲಾ ಸರ್ಕಾರಗಳು ತುಷ್ಟೀಕರಣದ ರಾಜಕೀಯ ಮಾಡಿದವು. ಆದರೆ,  ಭಾರತ ಮತ್ತು ಜಮ್ಮು ಮತ್ತು ಕಾಶ್ಮೀರದ ಇತಿಹಾಸವನ್ನು ಬರೆಯುವಾಗಲೆಲ್ಲಾ, 2014 ಮತ್ತು 2024 ರ ನಡುವಿನ ಅವಧಿಯನ್ನು ಸುವರ್ಣ  ಅಕ್ಷರಗಳಲ್ಲಿ ಬರೆಯಲ್ಪಡುತ್ತದೆ” ಎಂದು ಅಮಿತ್‌ ಶಾ ಹೇಳಿದ್ದಾರೆ.


ಬಿಜೆಪಿ ಪ್ರಣಾಳಿಕೆಯಲ್ಲಿನ ಪ್ರಮುಖಾಂಶಗಳು: 

Advertisement

* ಜಮ್ಮು-ಕಾಶ್ಮೀರದ ರಜೌರಿ ಬಳಿ ಹೊಸ ಪ್ರವಾಸಿ ಕೇಂದ್ರ ರೂಪುಗೊಳ್ಳಲಿದೆ ಹಾಗೂ ಕಣಿವೆ ರಾಜ್ಯದಲ್ಲಿ 5 ಲಕ್ಷ ಉದ್ಯೋಗ ಸೃಷ್ಟಿಸುವ ಭರವಸೆ.

ಟಿಕಾ ಲಾಲ್ ತಾಪ್ಲೂ ವಿಸ್ತಪಿತ್ ಸಮಾಜ ಪುನರ್ವಸ ಯೋಜನೆ ಅಡಿಯಲ್ಲಿ ಕಾಶ್ಮೀರಿ ಪಂಡಿತರ ಪುನರ್ವಸತಿಗೆ ಬಿಜೆಪಿ ಭರವಸೆ ನೀಡಿತು. ಹಾಗೆಯೇ ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ ಮತ್ತು ಆಂತರಿಕವಾಗಿ ನಿರ್ಲಕ್ಷಿಸಲ್ಪಟ್ಟ ವಾಲ್ಮೀಕಿ ಮತ್ತು ಗೂರ್ಖಾ ಸಮುದಾಯಗಳ ನಿರಾಶ್ರಿತರಿಗೆ ಬೆಂಬಲವನ್ನು ತ್ವರಿತಗೊಳಿಸುತ್ತದೆ.

* ‘ಮಾ ಸಮ್ಮಾನ್ ಯೋಜನೆ’ ಅಡಿಯಲ್ಲಿ ಪ್ರತಿ ಕುಟುಂಬದ ಹಿರಿಯ ಮಹಿಳೆಗೆ ವರ್ಷಕ್ಕೆ ₹ 18,000 ನೀಡುವ ಭರವಸೆ.

* ಉಜ್ವಲ ಯೋಜನೆಯಡಿ ವರ್ಷಕ್ಕೆ ಎರಡು ಉಚಿತ ಸಿಲಿಂಡರ್‌, . ಪ್ರಗತಿ ಶಿಕ್ಷಾ ಯೋಜನೆಯಡಿ, ಪ್ರಯಾಣ ಭತ್ಯೆಯಾಗಿ ಕಾಲೇಜು ವಿದ್ಯಾರ್ಥಿಗಳಿಗೆ ವರ್ಷಕ್ಕೆ ₹ 3,000 ಘೋಷಣೆ

* ಜಮ್ಮು ನಗರದಲ್ಲಿ ಐಟಿಗಾಗಿ ವಿಶೇಷ ಆರ್ಥಿಕ ವಲಯ, ಶ್ರೀನಗರದಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ಮತ್ತು ಗುಲ್ಮಾರ್ಗ್ ಮತ್ತು ಪಹಲ್ಗಾಮ್ ಅನ್ನು ಆಧುನಿಕ ಪ್ರವಾಸಿ ತಾಣಗಳಾಗಿ ಅಭಿವೃದ್ಧಿ.

* ಅಹಮದಾಬಾದ್‌ನ ಸಬರಮತಿ ರಿವರ್‌ಫ್ರಂಟ್‌ನ ಮಾದರಿಯಲ್ಲಿ ಜಮ್ಮುವಿನ ತಾವಿ ನದಿಯ ಮುಂಭಾಗ ಅಭಿವೃದ್ಧಿ ಮತ್ತು ಶ್ರೀನಗರದ ದಾಲ್ ಸರೋವರದ ಸುತ್ತಲೂ ಜಲ ಕ್ರೀಡೆಗಳು ಮತ್ತು ಪ್ರವಾಸೋದ್ಯಮ ಉತ್ತೇಜಿಸಲು ಪಕ್ಷ ಗುರಿ ಹೊಂದಿದೆ.

* ಬಾಕಿ ಉಳಿದಿರುವ ವಿದ್ಯುತ್ ಮತ್ತು ನೀರಿನ ಬಿಲ್‌ಗಳಿಂದ ಪರಿಹಾರ, ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯಡಿ ಉಚಿತ ವಿದ್ಯುತ್ ಮತ್ತು ‘ಹರ್ ಘರ್ ನಲ್ ಸೇ ಜಲ್’ ಯೋಜನೆಯ ಮೂಲಕ ಕುಡಿಯುವ ನೀರಿನ ಭರವಸೆ.

ಜಮ್ಮು-ಕಾಶ್ಮೀರದಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಸೆ.18, ಸೆ.25 ಹಾಗೂ ಅಕ್ಟೋಬರ್‌ 1ರಂದು ಮತದಾನ ನಡೆಯಲಿದೆ. ಅಕ್ಟೋಬರ್‌ 8ರಂದು ಮತ ಎಣಿಕೆ ಮಾಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next