ಮುಂಬಯಿ : ಪತ್ರಕರ್ತ ಜ್ಯೋತಿರ್ಮಯ ಡೇ ಅವರ ಕೊಲೆ ಪ್ರಕರಣದಲ್ಲಿ ಮುಂಬಯಿ ವಿಶೇಷ ನ್ಯಾಯಾಲಯ ಗ್ಯಾಂಗ್‌ಸ್ಟರ್ ಛೋಟಾ ರಾಜನ್ ಮತ್ತು ಇತರ ಹತ್ತು ಮಂದಿಯನ್ನು ಅಪರಾಧಿಗಳೆಂದು ಘೋಷಿಸಿದೆ.
ಈ ಕೊಲೆ ಪ್ರಕರಣದ ಇನ್ನಿಬ್ಬರು ಆರೋಪಿಗಳಾಗಿರುವ ಪೌಲ್ಸನ್ ಜೋಸೆಫ್ ಮತ್ತು ಪತ್ರಕರ್ತ ಜಿಗ್ನಾ ವೋರಾ ಅವರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ.
ವಿಶೇಷ ಮಕೋಕಾ ನ್ಯಾಯಾಲಯದಲ್ಲಿ ಕಳೆದ ಫೆಬ್ರವರಿಯಲ್ಲಿ ಡೇ ಕೊಲೆ ಪ್ರಕರಣದ ಅಂತಿಮ ವಿಚಾರಣೆ ಆರಂಭಗೊಂಡು ಕಳೆದ ತಿಂಗಳಲ್ಲಿ ಮುಗಿದಿತ್ತು. ತನಿಖಾಧಿಕಾರಿಗಳ ಪ್ರಕಾರ ಡೇ ಕೊಲೆಗೆ ಛೋಟಾ ರಾಜನ್ ಆದೇಶಿಸಿದ್ದ.
ಜ್ಯೋತಿರ್ಮಯ ಡೇ ಅವರು ಕಳೆದ ಎರಡು ದಶಕಗಳಿಗೂ ಮೀರಿದ ಅವಧಿಯಲ್ಲಿ ಮುಂಬಯಿ ಭೂಗತ ಜಗತ್ತಿನ ಪಾತಕಗಳನ್ನು ವಿಸ್ತೃತವಾಗಿ ವರದಿ ಮಾಡುತ್ತಿದ್ದರು. 2011ರ ಜೂನ್ 11ರಂದು ಮುಂಬಯಿ ಹೊರವಲಯದ ಪೊವಾಯ್‌ನಲ್ಲಿ ಡೇ ಅವರು ತಮ್ಮ ಮನೆಗೆ ಹೋಗುತ್ತಿದ್ದಾಗ ಹಾಡುಹಗಲಲ್ಲೇ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.
ಆರಂಭದಲ್ಲಿ ಮುಂಬಯಿ ಪೊಲೀಸರು ಕೈಗೊಂಡಿದ್ದ ತನಿಖೆಯನ್ನು ಕೆಲವೊಂದು ವಿವಾದಗಳಿಂದಾಗಿ ಕ್ರೈಮ್ ಬ್ರಾಂಚ್‌ನವರು ಎತ್ತಿಕೊಂಡಿದ್ದರು. ಸುದೀರ್ಘ ವಿಚಾರಣೆಯಲ್ಲಿ ವಿಚಾರಣ ನ್ಯಾಯಾಲಯ 155 ಸಾಕ್ಷಿದಾರರನ್ನು ಪ್ರಶ್ನಿಸಿತ್ತು. ಈ ಪೈಕಿ ಎಂಟು ಮಂದಿ ಮಾಫಿ ಸಾಕ್ಷಿದಾರರಾಗಿದ್ದರು.
ಛೋಟಾ ರಾಜನ್‌ನನ್ನು 2015ರ ಅಕ್ಟೋಬರ್ 25ರಂದು ಇಂಡೋನೇಶ್ಯದ ಬಾಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಿ ಭಾರತಕ್ಕೆ ತರಲಾಗಿತ್ತು.