ವೇಣೂರು: ಸುಮಾರು ರೂ. 12 ಕೋ.ರೂ. ವೆಚ್ಚದಲ್ಲಿ ಬೆಳ್ತಂಗಡಿಯ ಹೃದಯಭಾಗದಲ್ಲಿ ನಿರ್ಮಾಣವಾಗುತ್ತಿರುವ ಮಿನಿ ವಿಧಾನಸೌಧ ಕಟ್ಟಡದ ಉದ್ಘಾಟನೆಯನ್ನು ಜ. 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೆರವೇರಿಸಲಿದ್ದಾರೆ ಎಂದು ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.
ಅವರು ಕಾಶಿಪಟ್ಣ, ಮರೋಡಿ, ಅಂಡಿಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಿಶಿಷ್ಟ ಜಾತಿ ಕಾಲನಿಗಳಲ್ಲಿ 36 ಲ.ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕಾಂಕ್ರಿಟ್ ರಸ್ತೆ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಮುಖ್ಯಮಂತ್ರಿ ಪರಿಹಾರ ನಿಧಿಯಲ್ಲಿ ದ.ಕ. ಜಿಲ್ಲೆಯಲ್ಲೇ ಬೆಳ್ತಂಗಡಿ ತಾಲೂಕಿಗೆ ಅತ್ಯಧಿಕವಾಗಿ ಪರಿಹಾರ ಮೊತ್ತ ನೀಡಲಾಗಿದೆ. ಕಾಶಿಪಟ್ಣ ಗ್ರಾ.ಪಂ. ವ್ಯಾಪ್ತಿಯ ನಡ್ಡೆ ಪಾಲಾರ ಎಸ್‌ಸಿ ಕಾಲನಿಗೆ 5 ಲ.ರೂ., ಕಾಶಿಪಟ್ಣ ಗ್ರಾಮದ ಪಲಾರು ಎಸ್‌ಸಿ ಕಾಲನಿಗೆ 15 ಲ.ರೂ., ಮರೋಡಿ ಗ್ರಾ. ಪಂ. ವ್ಯಾಪ್ತಿಯ ಪೆರಾಡಿ ಗ್ರಾಮದ ಅಂಬಿಲ್ದಕೊಪ್ಪ ಎಸ್‌ಸಿ ಕಾಲನಿಗೆ 6 ಲ.ರೂ., ಹಾಗೂ ಅಂಡಿಂಜೆ ಗ್ರಾ. ಪಂ. ವ್ಯಾಪ್ತಿಯ ಸಾವ್ಯ ಗ್ರಾಮದ ಗುಜ್ಜೊಟ್ಟು ನೆಲ್ಲಿಗುಡ್ಡೆ ಎಸ್‌ಸಿ ಕಾಲನಿಗೆ 10 ಲ.ರೂ.ಯ ಕಾಂಕ್ರಿಟ್ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದರು.
ನಾರಾವಿ ಜಿಲ್ಲಾ ಪಂಚಾಯತ್ ಸದಸ್ಯ ಪಿ. ಧರಣೇಂದ್ರ ಕುಮಾರ್, ಅಂಡಿಂಜೆ ತಾ.ಪಂ. ಸದಸ್ಯ ಸುಧೀರ್ ಆರ್. ಸುವರ್ಣ, ಬೆಳ್ತಂಗಡಿ ಎಪಿಎಂಸಿ ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ಣ, ಅಂಡಿಂಜೆ ಗ್ರಾ.ಪಂ. ಅಧ್ಯಕ್ಷ ಮೋಹನ ಅಂಡಿಂಜೆ, ಮರೋಡಿ ಗ್ರಾ.ಪಂ. ಅಧ್ಯಕ್ಷ ಸದಾನಂದ ಶೆಟ್ಟಿ, ಕಾಶಿಪಟ್ಣ ಗ್ರಾ.ಪಂ. ಉಪಾಧ್ಯಕ್ಷೆ ಮಮತಾ, ಹಿರಿಯರಾದ ಪಿ.ಕೆ. ರಾಜು ಪೂಜಾರಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶಿವಪ್ರಸಾದ್ ಅಜಿಲ, ಎಂಜಿನಿಯರ್ ಗಳಾದ ಗುರುಪ್ರಸಾದ್, ತೌಸೀಫ್, ಕಾಶಿಪಟ್ಣ, ಮರೋಡಿ ಹಾಗೂ ಅಂಡಿಂಜೆ ಗ್ರಾ.ಪಂ. ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಅನುದಾನ ಮಂಜೂರು
ಮಿನಿ ವಿಧಾನ ಸೌಧಕ್ಕೆ ರೂ. 8 ಕೋ.ರೂ. ಮತ್ತು ಬಳಿಕ 3 ಕೋ.ರೂ. ಅನುದಾನ ಮಂಜೂರುಗೊಂಡಿದೆ. ಇನ್ನೂ 1 ಕೋ.ರೂ. ಅನುದಾನ ಬರಬೇಕಿದೆ. ಇದೇ ಸಂದರ್ಭ ಮುಖ್ಯಮಂತ್ರಿಯವರು ಗುರುದೇವ ಕಾಲೇಜಿನ ಪಿಯುಸಿ ವಿಭಾಗದ ಕಟ್ಟಡ, ಎಪಿಎಂಸಿಯಲ್ಲಿ 1 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾದ ಗೋದಾಮು ಕಟ್ಟಡ ಹಾಗೂ 2 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಗೋದಾಮು ಕಟ್ಟಡಕ್ಕೆ ಶಿಲಾನ್ಯಾಸ ಸೇರಿದಂತೆ ಕೋಟ್ಯಂತರ ಮೊತ್ತದ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಲಿದ್ದಾರೆ.
– ಕೆ. ವಸಂತ ಬಂಗೇರ, ಶಾಸಕರು