ಹೈದರಾಬಾದ್ : ಟೀ ಮಾರುವವನಿಂದ ತೊಡಗಿ ದೇಶದ ಪ್ರಧಾನ ಮಂತ್ರಿ ಆಗುವ ವರೆಗಿನ
ನರೇಂದ್ರ ಮೋದಿ ಅವರ ಬದುಕಿನ ಅದ್ಭುತ ಮತ್ತು ರೋಮಾಂಚಕ ಪಯಣವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ, ಶ್ವೇತಭವನದ ಸಲಹೆಗಾರ್ತಿ, ಇವಾಂಕಾ ಟ್ರಂಪ್ ಹೃದಯದಾಳದಿಂದ ಪ್ರಶಂಸಿಸಿದ್ದಾರೆ.
ಮಾತ್ರವಲ್ಲದೆ ಬಡತನದಿಂದ ಮೇಲೆ ಬಂದ ವ್ಯಕ್ತಿಯೋರ್ವನನ್ನು ದೇಶದ ಪ್ರಧಾನಿಯಾಗಿ ಮಾಡಿರುವ ಭಾರತೀಯರು ವಿಶ್ವಾದ್ಯಂತದ ಜನರಿಗೆ ಸ್ಪೂರ್ತಿದಾಯಕರಾಗಿದ್ದಾರೆ ಎಂದು ಹೇಳಿ ಸಮಸ್ತ ಭಾರತೀಯರ ಬಗ್ಗೆಯೂ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೈದರಾಬಾದ್‌ನಲ್ಲಿ ಇಂದು ಉದ್ಘಾಟನೆಗೊಂಡು ಒಟ್ಟು ಮೂರು ದಿನಗಳ ಕಾಲ ನಡೆಯುವ ಜಾಗತಿಕ ಉದ್ಯಮಶೀಲತಾ ಶೃಂಗಕ್ಕೆ ಆಗಮಿಸಿರುವ ಇವಾಂಕಾ, ತನ್ನನ್ನು ಇಲ್ಲಿಗೆ ಬರಮಾಡಿಕೊಂಡಿರುವ ಮತ್ತು ಮೊದಲ ಬಾರಿಗೆ ತನಗೆ ಭಾರತ ಭೇಟಿಗೆ ಅವಕಾಶ ಕಲ್ಪಿಸಿಕೊಟ್ಟಿರುವ ಪ್ರಧಾನಿ ಮೋದಿಗೆ ಕೃತಜ್ಞತೆ ಅರ್ಪಿಸಿದರು.
ಭಾರತ -ಅಮೆರಿಕ ಮಿತ್ರತ್ವ ಸದೃಢವಾಗುತ್ತಿರುವುದನ್ನು ಸ್ವಾಗತಿಸಿದ ಇವಾಂಕಾ, ಮುಂಬರುವ ವರ್ಷಗಳಲ್ಲಿ ಉಭಯ ದೇಶಗಳು ಇನ್ನಷ್ಟು ಪರಸ್ಪರ ನಿಕಟವಾಗಲಿವೆ ಎಂದು ಹೇಳಿದರು.
ಮಹಿಳೆಯರ ಸಶಕ್ತೀಕರಣದ ಕಟ್ಟಾ ಬೆಂಬಲಿಗರಾಗಿರುವ ಇವಾಂಕಾ, ಭಾರತದಲ್ಲಿ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಉದ್ಯಮಶೀಲರಾಗುತ್ತಿರುವುದನ್ನು ಸ್ವಾಗತಿಸಿದರು.