Advertisement

ಸಿಎಂ ಎದುರೇ ಅಭಯ -ಐವನ್‌ ವೈಮನಸ್ಸು ಸ್ಫೋಟ !

08:08 AM Oct 23, 2017 | Team Udayavani |

ಮಂಗಳೂರು: ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಹಿನ್ನೆಲೆಯಲ್ಲಿ ರವಿವಾರ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎದುರೇ ಶಾಸಕ ಅಭಯಚಂದ್ರ ಜೈನ್‌ ಹಾಗೂ ವಿಧಾನ ಪರಿಷತ್‌ ಮುಖ್ಯಸಚೇತಕ ಐವನ್‌ ಡಿ’ಸೋಜಾ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇದರಿಂದ ದ.ಕ. ಜಿಲ್ಲಾ ಕಾಂಗ್ರೆಸ್‌ನೊಳಗೆ ಎಲ್ಲವೂ ಸರಿಯಾಗಿಲ್ಲ ಎಂಬ ವಿಚಾರ ಬಹಿರಂಗವಾಗಿದೆ. ಈ ಕಿತ್ತಾಟ ಪಕ್ಷದ ನಾಯಕರನ್ನು ಮುಜುಗರಕ್ಕೆ ಎಡೆಮಾಡಿದೆ.

Advertisement

ನಡೆದಿದ್ದೇನು? 
ಸಿಎಂ ಸಿದ್ದರಾಮಯ್ಯ ಅವರನ್ನು ಸ್ವಾಗತಿಸುವ ಹಿನ್ನೆಲೆಯಲ್ಲಿ ಅಭಯಚಂದ್ರ ಜೈನ್‌, ಮೂಡಬಿದಿರೆ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್‌ ಆಕಾಂಕ್ಷಿಯಾಗಿರುವ ಐವನ್‌ ಡಿ’ಸೋಜಾ ಅವರೂ ತಮ್ಮ ಬೆಂಬಲಿಗರೊಂದಿಗೆ ನಿಲ್ದಾಣಕ್ಕೆ ಆಗಮಿಸಿದ್ದರು. ಇವರೊಂದಿಗೆ ಮತ್ತೋರ್ವ ಪ್ರಬಲ ಆಕಾಂಕ್ಷಿ, ಜಿಲ್ಲಾ ಯುವ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಮಿಥುನ್‌ ರೈ ಕೂಡ ಹೆಚ್ಚಿನ ಸಂಖ್ಯೆಯ ಬೆಂಬಲಿಗರೊಂದಿಗೆ ನಿಲ್ದಾಣದಲ್ಲಿ ಜಮಾಯಿಸಿದ್ದರು.

ಐವನ್‌ ಮತ್ತು ಅಭಯಚಂದ್ರ ನಡುವೆ ಆಂತರಿಕ ವೈಮನಸ್ಸು ಸೃಷ್ಟಿಯಾಗಿದೆ ಎನ್ನಲಾಗಿದ್ದು, ಸಿಎಂ ಮುಂದೆಯೇ ಜಟಾಪಟಿ ನಡೆದಿರುವುದು ಇದಕ್ಕೆ ಇಂಬು ನೀಡಿದೆ. ಇಬ್ಬರೂ ಪರಸ್ಪರ ವಾಗ್ವಾದ ಮಾಡುತ್ತ, ನೂಕಾಟ- ತಳ್ಳಾಟ ನಡೆಸಿದಂತೆ ಭಾಸವಾಗುವ ಸನ್ನಿವೇಶ ವೀಡಿಯೋಗಳಲ್ಲಿ ಸೆರೆಯಾಗಿದೆ. ಸಿಎಂ ಆಗಮನ ವೇಳೆ ಅವರ ಬಳಿ ತೆರಳಿ ಸ್ವಾಗತ ಕೋರಲು ಮುಂದಾದ ಐವನ್‌ ಡಿ’ಸೋಜಾ ಕೈಯನ್ನು ಅಭಯಚಂದ್ರ ಜೈನ್‌ ಅವರು ಹಿಂದಕ್ಕೆ ತಳ್ಳಿದ್ದು, ಪ್ರಯತ್ನ ಪೂರ್ವಕ ಸಿಎಂ ಬಳಿ ಐವನ್‌ ಆಗಮಿಸಿದ್ದೂ ವಿಡಿಯೋದಲ್ಲಿ ಕಂಡಿದೆ. 

ಉಭಯ ನಾಯಕರ ಬೆಂಬಲಿತ ಕಾರ್ಯಕರ್ತರು ಕೂಡ ಈ ಸಂದರ್ಭ ಪರಸ್ಪರ ಘೋಷಣೆ ಕೂಗಿದ್ದೂ ಗೊಂದಲಕ್ಕೆ ಕಾರಣ
ವಾಗಿದೆ. ಸಿಎಂ ಸಿದ್ದರಾಮಯ್ಯ ಅವರೂ ಯುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಮಿಥುನ್‌ ರೈ ಅವರನ್ನೇ ತಳ್ಳಿಕೊಂಡು ಮುಂದೆ ಹೋದ ದೃಶ್ಯ ವೀಡಿಯೋದಲ್ಲಿ ಗೋಚರಿಸಿದ್ದು, ವೀಡಿಯೋ ವೈರಲ್‌ ಆಗಿದೆ. ಆದರೆ ಸಿಎಂ ಸ್ವಾಗತ ವೇಳೆ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದು, ಐವನ್‌ ಮತ್ತು ಅಭಯ ಚಂದ್ರ ನೂಕು-ನುಗ್ಗಲಿನಿಂದ ತಪ್ಪಿಸಿ ಕೊಳ್ಳಲೂ ಯತ್ನಿಸುತ್ತಿದ್ದರು. ವಾಸ್ತವದಲ್ಲಿ ಅಲ್ಲಿ ನಿಜಕ್ಕೂ ಇಬ್ಬರೂ ಕಿತ್ತಾಟ ನಡೆಸಿದ್ದಾರೆಯೇ ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕಿದೆ. ಮೂಡಬಿದಿರೆ ಶಾಸಕ ಅಭಯಚಂದ್ರ ಜೈನ್‌ ಅವರು ಈ ಬಾರಿ ಚುನಾವಣೆಯಿಂದ ಹಿಂದೆ ಸರಿಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮೂಡಬಿದಿರೆ ಕ್ಷೇತ್ರದ ಮೇಲೆ ಐವನ್‌ ಡಿ’ಸೋಜಾ ಹಾಗೂ ಮಿಥುನ್‌ ರೈ ಅವರು ಕಣ್ಣಿಟ್ಟಿರುವುದನ್ನು ಇಲ್ಲಿ ಸ್ಮರಿಸಬಹುದು.

ಅದ್ದೂರಿ ಸ್ವಾಗತ 
ಸಿಎಂ ಮಂಗಳೂರು ಭೇಟಿ ಹಿನ್ನೆಲೆಯಲ್ಲಿ ನೂರಾರು ಕಾರ್ಯಕರ್ತರು ಜಮಾಯಿಸಿದ್ದರು. ಐವನ್‌ ಡಿ’ಸೋಜಾ ಅವರು, ಸಿಎಂ ಸ್ವಾಗತಕ್ಕೆ ಹುಲಿವೇಷ ತಂಡ, ಚೆಂಡೆ ತಂಡವನ್ನೂ ಕರೆಸಿದ್ದರು. ಐವನ್‌ ಬೆಂಬಲಿಗರು ಮುಖ್ಯ ಮಂತ್ರಿಯವರನ್ನು ಸ್ವಾಗತಿಸುವ ಫ‌ಲಕ ಗಳನ್ನೂ ಹಿಡಿದು ನಿಂತಿದ್ದರು. ವಿಮಾನ ನಿಲ್ದಾಣದಿಂದ ಹೊರಬರುವಲ್ಲಿ ಪೊಲೀಸರು ಬ್ಯಾರಿಕೇಡ್‌ ಹಾಕಿದ್ದು, ಅದರ ಒಂದು ಭಾಗದಲ್ಲಿ ಐವನ್‌ ಬೆಂಬಲಿಗರು, ಇನ್ನೊಂದೆಡೆ ಅಭಯಚಂದ್ರ ಜೈನ್‌ ಮತ್ತು ಮಿಥುನ್‌ ರೈ ಬೆಂಬಲಿಗರು ಘೋಷಣೆ ಕೂಗುತ್ತಿದ್ದರು. ಸಿಎಂ ಆಗಮಿಸುತ್ತಿದ್ದಂತೆಯೇ ಅವರ ಬಳಿ ತೆರಳಲು, ಫೋಟೋ ಕ್ಲಿಕ್ಕಿಸಲು ಹಲವರು ಮುಂದಾದ್ದರಿಂದ ತಳ್ಳಾಟ ನಡೆಯಿತು. ನೂಕು ನುಗ್ಗಲಿನ ವೇಳೆ ತಳ್ಳಾಟದಿಂದ ಕೆಲವು ಕಾರ್ಯ ಕರ್ತರು ಬಿದ್ದ ಪ್ರಸಂಗವೂ ನಡೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next