Advertisement
ಸಕಾಲ ಯೋಜನಾ ನಿರ್ದೇಶಕರಾದ ಡಾ.ಕಲ್ಪನಾ ಅವರು ಯೋಜನೆಯ ತುರ್ತು ನಿಧಿ ದುರ್ಬಳಕೆ ಮಾಡಿಕೊಂಡಿದ್ದನ್ನು ಬಯಲಿಗೆಳೆದ ಕಾರಣಕ್ಕೆ ಅವರು ತಮ್ಮ ವಿರುದ್ಧ ದ್ವೇಷ ಸಾಧಿಸಲು ಯತ್ನಿಸಿದಂತಿದೆ ಎಂದು ಮಥಾಯಿ ದೂರಿದ್ದಾರೆ. ಜತೆಗೆ ತಾವು ಯೋಜನೆಯನ್ನು ಸದೃಢಗೊಳಿಸಲು ನಡೆಸಿದ ಪ್ರಯತ್ನದ ಬಗ್ಗೆ ಉಲ್ಲೇಖೀಸಿ, ಅದಕ್ಕೆ ವ್ಯತಿರಿಕ್ತವಾಗಿ ಯೋಜನೆಯನ್ನು ದುರ್ಬಲಗೊಳಿಸಲು ಅವರು ಹುನ್ನಾರ ನಡೆಸಿದ್ದಾರೆ ಎಂದೂ ಪತ್ರದಲ್ಲಿ ತಿಳಿಸಿದ್ದಾರೆ.
Related Articles
Advertisement
ಮಾಸಿಕ ವರದಿ ಪ್ರಕಟಣೆಗೆ ನಿರಾಸಕ್ತಿ: ಸಕಾಲ ಯೋಜನೆಯ ಮಾಸಿಕ ಪ್ರಗತಿ ವಿವರ ಪ್ರಕಟಣೆಗೆ ಯೋಜನಾ ನಿರ್ದೇಶಕರು ನಿರಾಸಕ್ತಿ ತೋರಿದ್ದಾರೆ. ಇದು ಕ್ರಮೇಣ ಯೋಜನೆಗೆ ಅಂತ್ಯ ಹಾಡುವ ಪ್ರಯತ್ನಕ್ಕೆ ಪುಷ್ಠಿ ನೀಡಿದಂತಿದೆ. ಹಾಗೆಯೇ ಸಕಾಲದ ಯಶಸ್ವಿ ಜಾರಿಗೆ ಸಂಬಂಧಪಟ್ಟಂತೆ ಬಳಸಬಹುದಾಗಿದ್ದ 2 ಕೋಟಿ ರೂ. ಅನುದಾನ ಬಳಸದೆ ಕೈತಪ್ಪುವಂತಾಗಿದ್ದು ಸಹ ಯೋಜನೆಗೆ ಅಂತ್ಯ ಹಾಡುವ ಪ್ರಯತ್ನದ ಭಾಗದಂತಿದೆ.
ತುರ್ತು ನಿರ್ವಹಣೆಗೆಂದು ಕಾಯ್ದಿರಿಸಿದ್ದ ನಿಧಿಯಿಂದ (ಇಂಪ್ರಸ್ಟ್ ಅಮೌಂಟ್) ನಿಯಮಬಾಹಿರವಾಗಿ 75,890 ರೂ. ವೆಚ್ಚದಲ್ಲಿ ಯೋಜನಾ ನಿರ್ದೇಶಕರು ತಮ್ಮ ವೈಯಕ್ತಿಕ ಬಳಕೆಗಾಗಿ ದುಬಾರಿ ಐಪಾಡ್ ಖರೀದಿಸಿದ್ದಾರೆ. ಇದು ನಿಯಮಬಾಹಿರ ಎಂದು ತಿಳಿಸಿ ಅವರ ಸೂಚನೆಯಂತೆ ಮತ್ತೆ 20,000 ರೂ. ಹಣ ಬಿಡುಗಡೆ ಮಾಡಲು ನಿರಾಕರಿಸಿದ್ದಕ್ಕೆ ತಮ್ಮ ವಿರುದ್ಧ ಪ್ರತಿಕಾರ ಮನೋಭಾವ ತೋರುತ್ತಿದ್ದಾರೆ. ಬಳಿಕ ಹಣ ಡ್ರಾ ಮಾಡುವ ಅಧಿಕಾರವನ್ನೇ ತಮ್ಮಿಂದ ಕಿತ್ತುಕೊಂಡಿದ್ದಾರೆ ಎಂದು ದೂರಿದ್ದಾರೆ.
ಯೋಜನೆಯ ಯಶಸ್ವಿ ಜಾರಿಗೆ ಅಗತ್ಯವಾದ ಮ್ಯಾನೇಜ್‌ಮೆಂಟ್ ಕನ್‌ಸಲ್ಟೆಂಟ್ಸ್, ಐಟಿ ಸಲಹೆಗಾರರು, ಡೇಟಾ ಎಂಟ್ರಿ ಆಪರೇಟರ್‌ಗಳು ಸೇರಿ ಹಲವು ಜವಾಬ್ದಾರಿ ನಿರ್ವಹಿಸುತ್ತಿದ್ದ ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದು ಹಾಕುವ ಮೂಲಕ ಯೋಜನೆಯನ್ನು ದುರ್ಬಲಗೊಳಿಸಲಾಗಿದೆ. ಈ ಬಗ್ಗೆ ಗಮನ ಸೆಳೆದದ್ದಕ್ಕೆ ತಮಗೆ ಅನಗತ್ಯವಾಗಿ ನೋಟಿಸ್ ನೀಡಿ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ತಪಾಸಣೆ ಕಾರ್ಯಕ್ರಮಗಳಿಗೆ ಒಪ್ಪಿಗೆ ನೀಡದೆ ವಿಳಂಬ ಮಾಡುವ ಜತೆಗೆ ಯೋಜನೆಗೆ ಸಂಬಂಧಪಟ್ಟ ದೂರುಗಳ ಇತ್ಯರ್ಥಕ್ಕೂ ಗಮನ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಸಕಾಲ ಸುಧಾರಣೆಗೆ ಸಲಹೆ: ಈ ಹಿಂದೆ ಯೋಜನಾ ನಿರ್ದೇಶಕರಾಗಿದ್ದ ಶಾಲಿನಿ ರಜನೀಶ್ ಅವರ ಅಧಿಕಾರಾವಧಿಯಲ್ಲಿದ್ದ ವಾತಾವರಣವನ್ನು ಮತ್ತೆ ತರಬೇಕಿದೆ. ಸಕಾಲ ಆಡಳಿತಾಧಿಕಾರಿಗಳಿಗೆ ತಕ್ಷಣವೇ ವಾಹನ ಮಂಜೂರು ಮಾಡಬೇಕು. ತಕ್ಷಣವೇ ವಾಹನ ಗುತ್ತಿಗೆದಾರರ ಬಾಕಿ ಬಿಲ್ ಪಾವತಿಸಬೇಕು. ಹಣ ಡ್ರಾ ಮಾಡುವ ಅಧಿಕಾರವನ್ನು ಮತ್ತೆ ಆಡಳಿತಾಧಿಕಾರಿಗಳಿಗೆ ನೀಡಬೇಕು. ಸಕಾಲದ ಯಶಸ್ವಿ ಕಾರ್ಯ ನಿರ್ವಹಣೆಗೆ ಅಗತ್ಯವಾದ ಸಿಬ್ಬಂದಿಯನ್ನು ತ್ವರಿತವಾಗಿ ನೇಮಕ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.