Advertisement

ಶಿಕ್ಷಕರ ದಿನಾಚರಣೆ: ‘ಶಾಲೆ -ಶಿಕ್ಷಕ –ವಿದ್ಯಾರ್ಥಿ’ಸಂಬಂಧವನ್ನು ಗಟ್ಟಿಗೊಳಿಸಲು ಇದು ಸಕಾಲ

02:40 PM Sep 04, 2020 | keerthan |

‘ಹರ ಮುನಿಯೇ ಗುರು ಕಾಯ್ವ ಗುರು ಮುನಿಯೇ ಹರನಿಂದಲೂ ಕಾಯಲಸದಳವೂ’-ಎಂಬ ಪ್ರಾಜ್ಞರ ಉಕ್ತಿಯು ಗುರುವಿನ ಸ್ಥಾನಮಾನದ ಉಚ್ಛ್ರಾಯ ಸ್ಥಿತಿ ತಿಳಿಸುತ್ತದೆ. ಸರ್ವರೊಳು ಗುರು ಸರ್ವೋತ್ತಮ, ಆಚಾರ್ಯ ದೇವೋಭವ ಎಂಬಂತಹ ಲೋಕೋಕ್ತಿಯು ಗುರು ಸ್ಥಾನದ ಶ್ರೇಷ್ಠತೆಯನ್ನು ವಿವರಿಸುತ್ತದೆ. ಇತ್ತೀಚಿನ ಕಾಲಘಟ್ಟದಲ್ಲಿ ಸಾಮಾಜಿಕ ಅಸ್ಥಿರತೆ ಹಾಗೂ ಕಾಲದ ಪ್ರಭಾವದಿಂದಾಗಿ ಗುರುಸ್ಥಾನದ ಅಸ್ತಿತ್ವ ಜಾರುತ್ತಿದೆ. ಆದರೂ ಗುರಿ ಇರುವ ಶಿಕ್ಷಣಕ್ಕೆ ಗುರು ತಾನೇ ಬೇಕು? ಈ ಕಾಲಕ್ಕೆ ಶಿಕ್ಷಕನ ಸ್ಥಾನದಲ್ಲಿ  ‘ಅಂತರ್ಜಾಲ’ ಎಲ್ಲವನ್ನೂ ಒದಗಿಸುತ್ತದೆ ಎಂಬ ‘ಹುಂಬತನ’ ಭವಿಷ್ಯದಲ್ಲಿ ಶಿಕ್ಷಕನ ಅಸ್ತಿತ್ವಕ್ಕೆ ಧಕ್ಕೆ ತಂದರೂ ಆಶ್ಚರ್ಯವಿಲ್ಲ.

Advertisement

ಅಂತರ್ಜಾಲ ಕೇವಲ ಪರ್ಯಾಯವಷ್ಟೇ ಅದು ಗುರುವಿನ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ ಎಂಬ ಸತ್ಯದ ಅರಿವು ಮೂಡಿಸಲು ನಾವು ನಾಮಕಾವಸ್ಥೆ ಶಿಕ್ಷಕರಾಗದೇ ಮಗುವಿನ ಅಂತರಾತ್ಮಕ್ಕೆ ಶಿಕ್ಷಣದ ಜೊತೆ ಜೊತೆಗೆ ಸಂಸ್ಕಾರವನ್ನು ಕೊಂಡೊಯ್ಯುವ ಸುಸಂಸ್ಕೃತ ಗುರು ಆಗಬೇಕು. ಹೀಗಾಗದಿದ್ದಲ್ಲಿ ಮುಂದೊಂದು ದಿನ ಮೊಬೈಲ್, ಅಂತರ್ಜಾಲ ಇತ್ಯಾದಿಗಳ ಮೇಲಾಟದ ಪ್ರಭಾವದಿಂದಾಗಿ ‘ಶಿಕ್ಷಕ’ ಕಳೆದು ಹೋಗುವುದಂತೂ ಶತಸಿದ್ಧ.

‘ಶಾಲೆ -ಶಿಕ್ಷಕ – ವಿದ್ಯಾರ್ಥಿ’ ಇವುಗಳ ಸಂಬಂಧವನ್ನು ಗಟ್ಟಿಗೊಳಿಸಲು ಇದು ಸಕಾಲ. ಆರೇಳು ತಿಂಗಳುಗಳಿಂದ ಕೋವಿಡ್ ಕಾಯಿಲೆಯಿಂದಾಗಿ ಭಣ ಭಣಿಸುವ ಶಾಲೆಯು ಇಂದು ಒಣ ಮರದಂತಾಗಿದೆ. ಮಕ್ಕಳು ಅತಿ ಶೀಘ್ರ ಶಾಲೆಗೆ ಬರುವಂತಾಗಲಿ. ಮತ್ತೆ ಮಕ್ಕಳ  ಬಾಳಿನ ವಸಂತ ಬರಲಿ. ಶಾಲೆ ಹಸಿರಾಗಿ ಕಂಗೊಳಿಸಲಿ. ಗುರುವಿನ ಅನುಭವದ ಮೂಸೆಯಿಂದ ಹೊರಡುವ ಅಣಿಮುತ್ತುಗಳು ಅವರ ಕಿವಿಯನ್ನು ತುಂಬುವಂತಾಗಲಿ ಎಂಬುದೇ ನಮ್ಮ ಆಶಯ. ಎಲ್ಲರಿಗೂ ಮತ್ತೊಮ್ಮೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

ಇಂದು ಶಿಕ್ಷಕರಿಗೆ ಸುದಿನ

ರಾಧಾಕೃಷ್ಣನ್ ಅವರ ಜನ್ಮದಿನ

Advertisement

ಅವರಿಗೆ ನಮ್ಮೆಲ್ಲರ ನಮನ

ಮಕ್ಕಳಿಲ್ಲದ ಶಾಲೆ ಭಣ ಭಣ

ಎಲ್ಲದಕ್ಕೂ ಕಾರಣ ಕೊರೊನಾ

ಆದರೂ ನಮ್ಮ ನೆಚ್ಚಿನ ಚಂದನ

ಬಿತ್ತರಿಸುತ್ತಿವೆ ಪಾಠ ಪ್ರವಚನ

ಸಿಗುತಿದೆ ಮಕ್ಕಳ ಉತ್ತಮ ಸ್ಪಂದನ.

ಅಂದು ಗುರು ಮಠವೇ ಸದನ

ಇಂದು ಅಂತರ್ಜಾಲವೇ ಸಾಧನ

ಸದಾ ಚಿಮ್ಮಲಿ ನಮ್ಮ ತನು-ಮನ

ಹೆಗ್ಗುಂಜೆ ರಾಜೀವ ಶೆಟ್ಟಿ
ಸರಕಾರಿ ಪದವಿ ಪೂರ್ವ ಕಾಲೇಜು, ಹಾಲಾಡಿ. ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next