Advertisement
ನನ್ನ ಅನುಭವದ ಮಾತುಗಳನ್ನೆ ಇಲ್ಲಿ ಹಂಚಿಕೋಳ್ತೆನೆ. ಅದೇನಪ್ಪಾ ಅಂದ್ರೆ, ಸಮಾಜದಲ್ಲಿ ಕೆಲವು ವ್ಯಕ್ತಿಗಳು ಬೇರೆಯವರ ತಪ್ಪು ಹುಡುಕೋಕೆ ಅಂತಾನೆ ಹುಟ್ಟಿರುತ್ತಾರೆ. ಅಂತಹವರು ತಾವು ಒಳ್ಳೆಯವರಾಗಬೇಕು ಅನ್ನೋ ಕಾರಣಕ್ಕೆ ಬೇರೆಯವರನ್ನ ಯಾವಾಗಲೂ ದೂರುತ್ತಲೇ ಇರುತ್ತಾರೆ.
Related Articles
Advertisement
ಬಕೆಟ್ ಹಿಡಿಯೋ ವಿಚಾರದ ಬಗ್ಗೆ ಮೌಖೀಕವಾಗಿ ಬಂದ ಉತ್ತರಗಳು ಸಮಂಜಸವೆನಿಸಲ್ಲ. ಆಗ ನಾನು ಆಯ್ಕೆ ಮಾಡಿಕೊಂಡ ವಿಧಾನ ಯಾರು? ಯಾರೊಂದಿಗೆ? ಹೇಗೆ ನಡೆದುಕೊಳ್ತಾರೆ ಅನ್ನೋದನ್ನ ಅವಲೋಕಿಸುವುದು.
ಗಮನವಿರಲಿ ನನ್ನ ಉದ್ದೇಶ ವ್ಯಾಖ್ಯಾನ ತಿಳಿದುಕೊಳ್ಳುವುದು ಮಾತ್ರವಾಗಿತ್ತು. ಆದರೆ ಅವಲೋಕನದ ಸಂದರ್ಭದಲ್ಲಿ ಕೆಲವು ವ್ಯಕ್ತಿಗಳ ವ್ಯಕ್ತಿತ್ವ ಕಂಡು ಅಸಹ್ಯವೆನಿಸಿತು. ಒಬ್ಬ ವ್ಯಕ್ತಿ ಯಾರೊಬ್ಬರೊಂದಿಗೆ ಮಾತನಾಡಿದರೆ, ನಕ್ಕರೆ, ಏನೇ ಮಾಡಿದ್ರು ಅಯ್ಯೋ ಬಿಡಿ ಅವರು ಮೇಲಧಿಕಾರಿಗೆ ಬಕೆಟ್ ಹಿಡಿದು ಕೆಲಸ ಸಾಧಿಸ್ಕೋತಾರೆ ಅಂತ ಮಾತಾಡೋರು.
ಹೀಗೆ ಹೇಳಿದ ವ್ಯಕ್ತಿಗಳು ನಿಜಕ್ಕೂ ಸಾಚಾ ಆಗಿದ್ರೆ ತಮ್ಮ ಕೆಲಸ ಸಾಧಿಸ್ಕೊಳ್ಳೊಕೆ ತಾವು ಬೇರೆಯವ್ರ ಸಹಾಯ ಕೇಳ್ತಾರಲ್ಲ ಅದು ಸರೀನಾ? ಅಥವಾ ಅಂತಹ ವ್ಯಕ್ತಿಗಳು ಕೇಳಿದ್ರೆ ಅದು ಸಹಾಯ ಅಂತ ಮಾತ್ರ ಕರಿಬೇಕಾ. ಬೇರೆಯವ್ರ ಯಾವುದೋ, ಏನೋ ವಿಷಯಕ್ಕೆ ಯಾರದೋ ಹತ್ರ ಕೇಳಿರೋ ಸಹಾಯವನ್ನಾ ಇವರು ಬಕೆಟ್ ಹಿಡಿಯೋದು ಅಂತ ವ್ಯಾಖ್ಯಾನಿಸ್ತಾರೆ ಅಂದ್ರೆ ಇವರು ಬೇರೆಯವ್ರ ಹತ್ರ ಕೇಳಿ ಪಡೆಯೋ ಸಹಾಯವನ್ನ ಏನಂತ ವ್ಯಾಖ್ಯಾನಿಸಬೇಕು? ಎರಡು ತಲೆ ಹಾವುಗಳು ಅಂತಾರಲ್ಲ ಆ ಮಾತನ್ನ ಇಂತಹ ವ್ಯಕ್ತಿಗಳಿಗೆ ಅಂತಾನೆ ಹೇಳಿರಬೇಕು ಅನಿಸುತ್ತೆ.
ಆದರೆ ಒಬ್ಬರ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸಿ ತಾವು ಒಳ್ಳೆಯವರಾಗಲೂ ಹೀಗೆ ಮಾಡುವುದು ಎಷ್ಟರ ಮಟ್ಟಿಗೆ ಸರಿ? ನಾವು ಸರಿಯಾಗಿದ್ದರೂ ಕೂಡ ಬೇರೆಯವರ ಬಗ್ಗೆ ನಾವು ಮಾತನಾಡ ಕೂಡದು ಅಲ್ಲವೇ! ಯಾಕೆಂದರೆ ಒಬ್ಬರ ಬಗ್ಗೆ ಮಾತನಾಡಲು ಯಾರು ಯಾರಿಗೂ ಹಕ್ಕು ನೀಡಿರುವುದಿಲ್ಲ.
ವಾಕ್ ಸ್ವಾತಂತ್ರ ಇದೆ ಸರಿ. ಎಲುಬಿಲ್ಲದ ನಾಲಿಗೆ ಅಂತ ಕಂಡು ಕಂಡವರಲ್ಲಿ ತಪ್ಪನ್ನೇ ಹುಡುಕುವ ಹುಚ್ಚು ಸಾಹಸ ಅಗತ್ಯವಿಲ್ಲ ಎನ್ನುವುದು ನನ್ನ ಅನಿಸಿಕೆ. ಎಲ್ಲರಲ್ಲೂ ಒಂದು ವಿಶೇಷ, ಒಳ್ಳೆಯ ಗುಣವಿದ್ದೇ ಇರುತ್ತದೆ. ಅಂತಹ ಗುಣಗಳನ್ನು ಅಳವಡಿಸಿಕೊಂಡು ಸರ್ವರೊಳಗೊಂದನ್ನು ಕಲಿತು ಸರ್ವಜ್ಞನಾಗಲು ಪ್ರಯತ್ನಿಸಿ.
ಮನುಷ್ಯರಾಗಿ ಮನುಷ್ಯರನ್ನು ಆದರದಿಂದ, ಗೌರವದಿಂದ, ವಿಶ್ವಾಸದಿಂದ ಕಾಣೋ ಪ್ರವೃತ್ತಿ ರೂಢಿಸಿಕೊಳ್ಳೋಣ. ಅದು ಅಲ್ಲದೇ ಮನುಷ್ಯ ಮನುಷ್ಯರನ್ನು ನಂಬದೇ ವಸ್ತುಗಳನ್ನು ನಂಬಲಾಗುವುದೇ? ಬೇರೆಯವರನ್ನು ದೂರುವುದರಲ್ಲಿ, ಬೇರೆಯವರ ತಪ್ಪು ಕಂಡು ಹಿಡಿಯುವುದರಲ್ಲಿ ಕಾಲಹರಣ ಮಾಡುವ ಮುನ್ನ ನಮ್ಮಲ್ಲಿರುವ ಅಸಂಖ್ಯಾತ ತಪ್ಪುಗಳನ್ನು ತಿದ್ದಿಕೊಳ್ಳುವತ್ತ ಗಮನ ಹರಿಸೋಣ.
ನಮ್ಮಲ್ಲೇ ನಕಾರಾತ್ಮಕ ಅಂಶಗಳನ್ನು ತುಂಬಿಕೊಂಡು ಬೇರೆಯವರ ಮೇಲೆ ಪ್ರಭಾವ ಬೀರುವ ಹುಚ್ಚು ಸಾಹಸ ಬೇಡ. ಯಾಕೆಂದರೆ ಪ್ರತಿಯೊಬ್ಬರಿಗೂ ನಂಬಿಕೆ, ವಿಶ್ವಾಸವೇ ಜೀವನದ ಜೀವಾಳವಾಗಿರುತ್ತದೆ. ನಮ್ಮ ಸ್ವಾರ್ಥ ಸಾಧನೆಗೆಂದು ಬೇರೆಯವರ ಮೇಲೆ ಕೂರಿಸುವ ಗೂಬೆಯಿಂದ ಒಬಅºರ ಜೀವನದ ನೆಮ್ಮದಿಯೇ ಹಾಳಾಗಬಹುದಲ್ಲವೇ ಎಂಬ ಸಣ್ಣ ತಿಳುವಳಿಕೆಯಿರಲಿ. ಎಲ್ಲರಲ್ಲೂ ನನ್ನ ಕೋರಿಕೆ ಇಷ್ಟೇ ಏನಾದರೂ ಆಗಿ ಮೊದಲು ಮನುಷ್ಯತ್ವವಿರುವ ಮಾನವರಾಗಿ.
-ವಿದ್ಯಾ ಹೊಸಮನಿ
ಉಪನ್ಯಾಸಕಿ, ಬೆಂಗಳೂರು