ಹುಬ್ಬಳ್ಳಿ: ಉತ್ತರ ಕರ್ನಾಟಕಕ್ಕೆ ಅನ್ಯಾಯ ವಾಗಿದೆ ಎಂದು ಧ್ವನಿ ಎತ್ತಿದ್ದಕ್ಕೆ ಪಕ್ಷದ ವರಿಷ್ಠರು ನನ್ನ ಬಗ್ಗೆ ಏಕವಚನದಲ್ಲಿ ಕಟುವಾಗಿ ಮಾತ ನಾಡಿದ್ದರೂ ಪಕ್ಷ ನಿಷ್ಠೆಯೊಂದಿಗೆ ಉಳಿದುಕೊಂಡಿದ್ದೇನೆ. ಸಣ್ಣ ಪುಟ್ಟ ವಿಚಾರಗಳಿಗೆ ಪಕ್ಷ ಬಿಡುವುದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸರಿಯಲ್ಲ.
ಈ ಕುರಿತು ಶಾಸಕ ಸಾ.ರಾ.ಮಹೇಶ್ ಅವರೊಂದಿಗೆ ಮಾತನಾಡುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ತಿಳಿಸಿದರು. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಭಾಗದ ಅಭಿವೃದ್ಧಿ ಕುಂಠಿತವಾಗಿರುವ ಬಗ್ಗೆ ನನ್ನ ಅನಿಸಿಕೆಯಲ್ಲಿ ಯಾವುದೇ ವೈಯಕ್ತಿಕ ಹಿತಾಸಕ್ತಿ ಇರಲಿಲ್ಲ. ಆದರೂ, ಪಕ್ಷದ ವರಿಷ್ಠರಿಂದ ಏಕವಚನದಲ್ಲಿ ಅನ್ನಿಸಿಕೊಳ್ಳಬೇಕಾಯಿತು.
ಪಕ್ಷದಲ್ಲಿ ಹಿರಿಯ ಸದಸ್ಯನಾಗಿದ್ದರೂ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಲಿಲ್ಲ. ಸಭಾಪತಿ ಸ್ಥಾನದಿಂದಲೂ ನನ್ನನ್ನು ಕೆಳಗಿಳಿಸಲಾಯಿತು. ಸಾಕಷ್ಟು ಆಮಿಷಗಳು ಬಂದರೂ ಪಕ್ಷ ಬಿಡುವ ಕೆಲಸ ಮಾಡಲಿಲ್ಲ. ಸಾ.ರಾ.ಮಹೇಶ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನುವ ವಿಚಾರವನ್ನು ಪಕ್ಷ ಗಂಭೀರವಾಗಿ ಪರಿಗಣಿಸಬೇಕು ಎಂದರು.
ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಅವರಿಗೆ ಕರೆ ಮಾಡಿ ಮಾತನಾಡಿದ್ದೇನೆ. ಸಾ.ರಾ.ಮಹೇಶ್ ಅವರು ರಾಜೀನಾಮೆ ನೀಡಿಲ್ಲ ಎಂದು ಹೇಳಿದ್ದಾರೆ. ಸ್ಪೀಕರ್ ಅವರಿಗಾಗಲಿ ಅಥವಾ ನನಗಾಗಲಿ ರಾಜೀನಾಮೆ ಸಲ್ಲಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
-ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸದಸ್ಯ