ಬೆಂಗಳೂರು: ಕಾಂಗ್ರೆಸ್ ನವರು ಮೊದಲು ಕೋಲಾರಕ್ಕೆ ಎತ್ತಿನಹೊಳೆ ನೀರು ತರುತ್ತೇವೆ ಎಂದಿದ್ದರು. ಈಗ ಎತ್ತು ಒಂದು ಕಡೆ ಹೊಳೆ ಒಂದು ಕಡೆಯಾಗಿದೆ. ಈಗ ಮೇಕೆದಾಟು ಪಾದಯಾತ್ರೆ ಮಾಡುತ್ತಿದ್ದಾರೆ. ಇದು ದಾರಿಯುದ್ಧಕ್ಕೂ ಮೇಕೆ ತಿನ್ನುತ್ತಾ ಪಾದಯಾತ್ರೆ. ಈ ರೀತಿ ಪಾದಯಾತ್ರೆಯಾದರೆ ಜೀವನದುದ್ದಕ್ಕೂ ಮಾಡಬಹುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವ್ಯಂಗ್ಯವಾಡಿದರು.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಇದು ವಿವಿಐಪಿ ಪಾದಯಾತ್ರೆ, ಇದಕ್ಕೆ ಉದ್ದೇಶವಿಲ್ಲ. ಮೇಕೆದಾಟು ಯೋಜನೆಗೆ ಅಡ್ಡ ಹಾಕಿದ್ದು ಸ್ಟಾಲಿನ್ ತಾನೆ. ಸ್ಟಾಲಿನ್ ಯಾರ ಬೆಂಬಲದಿಂದ ಮುಖ್ಯಮಂತ್ರಿಯಾಗಿದ್ದು? ನಮ್ಮವರಾಗಿದ್ದರೆ ಕಿವಿ ಹಿಂಡಿ ನೀರು ಬಿಡಿಸುತ್ತಿದ್ದೇವು ಎಂದರು.
ನಮ್ಮ ಪಕ್ಷ ಜಾತಿ ಆಧಾರದಲ್ಲಿ ಬೆಳೆದಿಲ್ಲ. ನೀತಿ ಆಧಾರದ ಮೇಲೆ ಬೆಳೆದಿದೆ. ನಮ್ಮ ಪಕ್ಷ ದೇಶ ಮೊದಲು ಎನ್ನುತ್ತದೆ. ಪಕ್ಷ ಬಳಿಕ, ವ್ಯಕ್ತಿ ಕೊನೆ ಎನ್ನುವ ಪಕ್ಷ. ಕೆಲವು ಪಕ್ಷದಲ್ಲಿ ವ್ಯಕ್ತಿ ಮೊದಲು, ಪಕ್ಷ ಬಳಿಕ ದೇಶ ಕೊನೆ ಎಂಬಂತಿದೆ. ನಮ್ಮ ಪಕ್ಷದಲ್ಲಿ ಸ್ವಾರ್ಥಕ್ಕೆ ಅವಕಾಶವಿಲ್ಲ ಎಂದರು.
ಇದನ್ನೂ ಓದಿ:ಲೂಟಿ ಮಾಡಿರುವ ಹಣದಲ್ಲಿ ಕಾಂಗ್ರೆಸ್ ಪಾದಯಾತ್ರೆ ಮಾಡುತ್ತಿದೆ: ಸಂಸದ ವಿ.ಶ್ರೀನಿವಾಸಪ್ರಸಾದ್
ಅಪ್ಪನಾಣೆ ಮೋದಿ ಪಿಎಂ ಆಗಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ನಾನು ಹೇಳುತ್ತೇನೆ ಕೇಳಿ, ಸಿದ್ದರಾಮಯ್ಯರೇ ಅಪ್ಪನ ಆಣೆ ನೀವು ಸಿಎಂ ಆಗಲ್ಲ. ತಮ್ಮದೇ ಪಕ್ಷದ ಶಾಸಕರ ಮನೆಗೆ ಬೆಂಕಿ ಹಾಕಿ ಅದೇ ಬೆಂಕಿಯಲ್ಲಿ ಚಳಿ ಕಾಣಿಸಿಕೊಂಡವರು ಕಾಂಗ್ರೆಸ್ ನವರು. ಬೆಂಕಿ ಹಾಕಿದವರನ್ನು ತಮ್ಮ ಬ್ರದರ್ಸ್ ಎಂದು ಕರೆದವರು ಕಾಂಗ್ರೆಸ್ ಎಂದು ಸಿ.ಟಿ ರವಿ ಟೀಕೆ ಮಾಡಿದರು.
ನಮ್ಮ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತ ಓನರ್. ಜೆಡಿಎಸ್ ಲ್ಲಿ ದೊಡ್ಡಗೌಡರು ಓನರ್, ಕಾಂಗ್ರೆಸ್ ಗೆ ಸೋನಿಯಾ ಗಾಂಧಿ. ನನ್ನಪ್ಪ ಅಂದು ಜೆಡಿಎಸ್ ಸೇರಿಕೋ ಎಂದಿದ್ದರು. ಒಂದು ವೇಳೆ ಅಪ್ಪನ ಮಾತು ಕೇಳಿದ್ದರೆ, ನಾನು ದೊಡ್ಡಗೌಡರಿಗೆ ಜೈ, ಅವರ ಮಕ್ಕಳಿಗೆ, ಮೊಮ್ಮಕಳಿಗೆ ಜೈ ಎಂದು ಕೂರಬೇಕಿತ್ತು ಎಂದು ಜೆಡಿಎಸ್ ಬಗ್ಗೆ ಸಿ.ಟಿ ರವಿ ವ್ಯಂಗ್ಯವಾಡಿದರು.