ಮೆಲ್ಬೋರ್ನ್: ಆಸ್ಟ್ರೇಲಿಯಾ ವಿರುದ್ದದ ಬಾಕ್ಸಿಂಗ್ ಡೇ ಟೆಸ್ಟ್ (Boxing day test) ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡಿದೆ. ಮೆಲ್ಬೋರ್ನ್ (Melbourne) ನಲ್ಲಿ ನಡೆದ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ (Rohit Sharma) ಪಡೆಗೆ 184 ರನ್ ಅಂತರದ ಸೋಲಾಗಿದೆ. ಪಂದ್ಯದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತಮಾಡಿದ ನಾಯಕ ರೋಹಿತ್ ಶರ್ಮಾ, ಇದು ಮಾನಸಿಕವಾಗಿ ಕಾಡುತ್ತಿದೆ ಎಂದರು.
ಐದು ಪಂದ್ಯಗಳ ಬಾರ್ಡರ್-ಗಾವಸ್ಕರ್ ಟ್ರೋಫಿಯಲ್ಲಿ 1-2 ಹಿನ್ನಡೆಯಲ್ಲಿರುವ ಭಾರತ ಐದನೇ ಮತ್ತು ಅಂತಿಮ ಟೆಸ್ಟ್ ಗಾಗಿ ಸಿಡ್ನಿಗೆ ತೆರಳಲಿದೆ. ಜನವರಿ 3 ರಂದು ಸರಣಿಯ ಅಂತಿಮ ಪಂದ್ಯ ಆರಂಭವಾಗಲಿದೆ.
“ನೀವು ಮಾಡಲು ಬಂದಿದ್ದನ್ನು ಮಾಡಲು ಸಾಧ್ಯವಾಗದಿದ್ದಾಗ ಮಾನಸಿಕವಾಗಿ ತೊಂದರೆಯಾಗುತ್ತದೆ” ಎಂದು ರೋಹಿತ್ ಮೆಲ್ಬೋರ್ನ್ ಸೋಲಿನ ಬಳಿಕ ಹೇಳಿದ್ದಾರೆ.
“ಇದು ಸಾಕಷ್ಟು ನಿರಾಶಾದಾಯಕವಾಗಿದೆ. ಪಂದ್ಯಗಳನ್ನು ಗೆಲ್ಲುವ ಮಾರ್ಗಗಳಿವೆ, ಆದರೆ ಇಲ್ಲಿ ಪಂದ್ಯವನ್ನು ಗೆಲ್ಲುವ ಮಾರ್ಗಗಳನ್ನು ಹುಡುಕುವಲ್ಲಿ ನಾವು ವಿಫಲರಾಗಿದ್ದೇವೆ. ನಾವು ಕೊನೆಯವರೆಗೂ ಹೋರಾಡಲು ಬಯಸಿದ್ದೆವು, ದುರದೃಷ್ಟವಶಾತ್, ನಾವು ಅದನ್ನು ಮಾಡಲು ಸಾಧ್ಯವಾಗಲಿಲ್ಲ” ಎಂದು ಅವರು ಪಂದ್ಯದ ನಂತರ ಹೇಳಿದರು.
“ನಾವು ನಮ್ಮಲ್ಲಿದ್ದ ಎಲ್ಲವನ್ನೂ ಕೊಟ್ಟಿದ್ದೆವು, ಅವರು ಕಠಿಣವಾಗಿ ಹೋರಾಡಿದರು, ವಿಶೇಷವಾಗಿ ಕೊನೆಯ-ವಿಕೆಟ್ ಜೊತೆಯಾಟ, ಅಲ್ಲಿ ಬಹುಶಃ ಆಟವನ್ನು ನಾವು ಕಳೆದುಕೊಂಡೆವು” ಎಂದು ಹೇಳಿದರು.